
ರಾಘವ್ ಚಡ್ಡಾ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್; ಪಂಜಾಬ್‌ನಲ್ಲಿ ಆಪ್-ಬಿಜೆಪಿ ನಡುವೆ ರಾಜಕೀಯ ಸಮರ
ತಮ್ಮ ಹೆಸರನ್ನುಉದ್ದೇಶಪೂರ್ವಕವಾಗಿಯೇ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ರಾಘವ್ ಚಡ್ಡಾ ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ-SIR ವಿಚಾರ ಇದೀಗ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಹೆಸರನ್ನು ರಾಜ್ಯದ ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದು, ಇದನ್ನು ರಾಜಕೀಯ ಸೇಡಿನ ಕ್ರಮ ಎಂದು ಆರೋಪಿಸಿ ಚಡ್ಡಾ ಅವರು ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಈ ವಿವಾದ ಮುನ್ನೆಲೆಗೆ ಬಂದಿದೆ. ಪಟ್ಟಿಯಲ್ಲಿ ರಾಘವ್ ಚಡ್ಡಾ ಅವರ ಹೆಸರು ‘ಗೈರು(Absent), ವಿಳಾಸ ಬದಲಾವಣೆ(Shifted), ಮೃತ(Deceased) ಮತ್ತು ನಕಲಿ(Duplicate)’ ವಿಭಾಗದಲ್ಲಿ ಗುರುತಿಸಲಾಗಿದ್ದು, ಅವರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ನಮೂದಿಸಲಾಗಿದೆ.
ಆದರೆ ಈ ವರ್ಗೀಕರಣವನ್ನು ರಾಘವ್ ಚಡ್ಡಾ ತೀವ್ರವಾಗಿ ತಳ್ಳಿಹಾಕಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಹಾಲಿ ಸಂಸತ್ ಸದಸ್ಯರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಲ್ಲಿ ಉಳಿಸಬೇಕು. ಯಾವುದೇ ಆಕ್ಷೇಪಣೆ ಅಥವಾ ಅನುಮಾನ ಇದ್ದರೂ, ಸಾರ್ವಜನಿಕ ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಪರಿಶೀಲನೆ ನಡೆಸಲು ಅವಕಾಶ ನೀಡಬೇಕು ಎಂದು ಚಡ್ಡಾ ಹೇಳಿದ್ದಾರೆ.
ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಉದ್ದೇಶಪೂರ್ವಕ ಕ್ರಮವಾಗಿದ್ದು, ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
2024ರ ಚುನಾವಣೆಯಲ್ಲಿ ಮೊಹಾಲಿಯಿಂದ ಮತ ಚಲಾಯಿಸಿದ್ದ ಚಡ್ಡಾ
ತಾವು ಈ ಹಿಂದೆ ದೆಹಲಿಯಿಂದ ಮತದಾರರ ನೆಲೆಯನ್ನು ಬದಲಿಸಿಕೊಂಡು, 2024ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಎಎಸ್ ನಗರ (ಮೊಹಾಲಿ)ದಿಂದ ಮತ ಚಲಾಯಿಸಿದ್ದಾಗಿ ರಾಘವ್ ಚಡ್ಡಾ ತಿಳಿಸಿದ್ದಾರೆ.
ತಮ್ಮ ಹೆಸರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸುವಂತೆ ಚುನಾವಣಾ ಅಧಿಕಾರಿಗಳಿಗೆ ಶೀಘ್ರದಲ್ಲೇ ಅಧಿಕೃತ ಆಕ್ಷೇಪಣೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಆರೋಪಕ್ಕೆ ಪಂಜಾಬ್ ಸರ್ಕಾರದ ತಿರುಗೇಟು
ರಾಘವ್ ಚಡ್ಡಾ ಅವರ ಆರೋಪಗಳನ್ನು ಪಂಜಾಬ್ ಸರ್ಕಾರದ ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಭಾರತ ಚುನಾವಣಾ ಆಯೋಗವೇ ತನ್ನ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ಮೂಲಕ ನಿರ್ವಹಿಸುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷವೂ ಚಡ್ಡಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಮತದಾರರ ಪಟ್ಟಿಯ ನಿರ್ವಹಣೆ ಸಂಪೂರ್ಣವಾಗಿ ಸ್ವತಂತ್ರ ಚುನಾವಣಾ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ. ಚಡ್ಡಾ ಅವರು ಪ್ರಮುಖವಾಗಿ ದೆಹಲಿಯಲ್ಲಿ ವಾಸಿಸುತ್ತಿದ್ದು, ಅವರ ಮತದಾರರ ನೋಂದಣಿ ಅಥವಾ ವರ್ಗಾವಣೆಗೆ ಸಂಬಂಧಿಸಿದ ವಿಚಾರಗಳು ವೈಯಕ್ತಿಕ ಜವಾಬ್ದಾರಿಯ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ರಾಜ್ಯ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು AAP ವಾದಿಸಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಸಂಸದ ಸ್ಥಾನ ರದ್ದಾಗುತ್ತಾ?
ಭಾರತದ ಚುನಾವಣಾ ಕಾನೂನುಗಳ ಪ್ರಕಾರ, ದೇಶದ ಯಾವುದೇ ಭಾಗದಲ್ಲಾದರೂ ಮಾನ್ಯವಾದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಸಂಸತ್ ಸದಸ್ಯರಾಗಿ ಮುಂದುವರಿಯಲು ಪ್ರಮುಖ ಕಾನೂನುಬದ್ಧ ಅಗತ್ಯವಾಗಿದೆ.ಆದರೆ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದರಿಂದ ತಕ್ಷಣವೇ ಸಂಸದ ಸ್ಥಾನ ಕಳೆದುಕೊಳ್ಳುವುದಿಲ್ಲ. ಸಂಬಂಧಪಟ್ಟ ಮತದಾರರಿಗೆ ಆಕ್ಷೇಪಣೆ ಸಲ್ಲಿಸಿ ತಮ್ಮ ಹೆಸರನ್ನು ಮರುಸ್ಥಾಪಿಸಿಕೊಳ್ಳಲು ಕಾನೂನುಬದ್ಧ ಅವಕಾಶವಿದೆ.
ಪ್ರಸ್ತುತ ರಾಘವ್ ಚಡ್ಡಾ ಅವರ ಪ್ರಕರಣದಲ್ಲೂ ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವ ಮುನ್ನ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಈ ಅವಧಿಯಲ್ಲಿ ಅವರು ತಮ್ಮ ಹೆಸರನ್ನು ಮರುಸೇರ್ಪಡೆಗೊಳಿಸುವಂತೆ ಮನವಿ ಸಲ್ಲಿಸಬಹುದಾಗಿದೆ. ಹೀಗಾಗಿ ರಾಘವ್ ಚಡ್ಡಾ ಅವರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ವಿಚಾರ ಇದೀಗ ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗಿ ಉಳಿದಿಲ್ಲ. ಚುನಾವಣಾ ಆಯೋಗದ ಅಧಿಕಾರ, ಸರ್ಕಾರದ ಹಸ್ತಕ್ಷೇಪ ಮತ್ತು ರಾಜಕೀಯ ಸೇಡಿನ ಆರೋಪಗಳ ಸುತ್ತ ಪಂಜಾಬ್‌ನಲ್ಲಿ ಹೊಸ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದೆ.

