ಬ್ರಿಕ್ಸ್‌ ಶೃಂಗಸಭೆ: ಭಾರತಕ್ಕೆ ಆಗಮಿಸಿರುವ ಪುಟಿನ್‌ಗೆ ಮೋದಿಯಿಂದ ಭರ್ಜರಿ ಸ್ವಾಗತ, ವಿಶೇಷ ಉಡುಗೊರೆ
x

ಬ್ರಿಕ್ಸ್‌ ಶೃಂಗಸಭೆ: ಭಾರತಕ್ಕೆ ಆಗಮಿಸಿರುವ ಪುಟಿನ್‌ಗೆ ಮೋದಿಯಿಂದ ಭರ್ಜರಿ ಸ್ವಾಗತ, ವಿಶೇಷ ಉಡುಗೊರೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಭಾರತ–ರಷ್ಯಾ ವ್ಯಾಪಾರ, ಹೂಡಿಕೆ, ಇಂಧನ ಮತ್ತು ರಕ್ಷಣಾ ಸಹಕಾರದ ಕುರಿತು ಚರ್ಚಿಸಿದರು.


Click the Play button to hear this message in audio format

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಹತ್ವದ ಮಾತುಕತೆ ನಡೆಸಿದರು. ವ್ಯಾಪಾರ, ಹೂಡಿಕೆ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ–ರಷ್ಯಾ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.

ಭೇಟಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಈ ವರ್ಷದಲ್ಲಿ ಉಭಯ ನಾಯಕರ ಎರಡನೇ ಭೇಟಿಯಾಗಿದೆ ಇದು. ಆಗಸ್ಟ್ 31ರಂದು ಬಿಷ್ಕೆಕ್‌ನಲ್ಲಿ ನಡೆದ 26ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರೂ ನಾಯಕರು ಭೇಟಿಯಾಗಿದ್ದರು.

ಪುಟಿನ್‌ಗೆ ಮೋದಿ ವಿಶೇಷ ಉಡುಗೊರೆ

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮಿಳಿನ ಖ್ಯಾತ ಕವಿ ಹಾಗೂ ತತ್ವಜ್ಞಾನಿ ತಿರುವಳ್ಳುವರ್ ರಚಿಸಿರುವ ‘ತಿರುಕ್ಕುರಳ್’ ಕೃತಿಯ ರಷ್ಯನ್ ಭಾಷೆಯ ಅನುವಾದದ ಪ್ರತಿಯನ್ನು ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದರು. ಕೃಷಿ ಮತ್ತು ರೈತರ ಕುರಿತು ಮಹತ್ವದ ವಿಚಾರಗಳನ್ನು ಒಳಗೊಂಡಿರುವ ಈ ಕೃತಿಯನ್ನು ಮೋದಿ ಪುಟಿನ್ ಅವರಿಗೆ ನೀಡಿರುವುದು ವಿಶೇಷ ಗಮನ ಸೆಳೆದಿದೆ.

2025ರ ಡಿಸೆಂಬರ್‌ನಲ್ಲಿ ಭಾರತ–ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಆದರೆ ಉಕ್ರೇನ್ ಯುದ್ಧ ಆರಂಭವಾದ ಬಳಿಕ ರಷ್ಯಾ ಹೊರತುಪಡಿಸಿ ಬೇರೆ ದೇಶದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಅವರು ನೇರವಾಗಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಗೆ. ಪುಟಿನ್ ಅವರೊಂದಿಗೆ ಉನ್ನತ ಮಟ್ಟದ ರಷ್ಯಾದ ನಿಯೋಗವೂ ಭಾರತಕ್ಕೆ ಆಗಮಿಸಿದೆ. ಭಾರತ ಮತ್ತು ರಷ್ಯಾ ನಡುವಿನ ನಿರಂತರ ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಉಕ್ರೇನ್ ಯುದ್ಧದ ಬಗ್ಗೆಯೂ ಚರ್ಚೆ

ಬಿಷ್ಕೆಕ್‌ನಲ್ಲಿ ನಡೆದ ಹಿಂದಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ–ಉಕ್ರೇನ್ ಸಂಘರ್ಷದ ಕುರಿತು ಪುಟಿನ್ ಅವರೊಂದಿಗೆ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರದ ದ್ವಿಪಕ್ಷೀಯ ಮಾತುಕತೆಯಲ್ಲೂ ಉಕ್ರೇನ್ ಸಂಘರ್ಷ ಪ್ರಮುಖ ವಿಚಾರವಾಗುವ ಸಾಧ್ಯತೆ ಇದೆ. ರಷ್ಯಾ ಅಧ್ಯಕ್ಷರು ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿಗೆ ಮಾಹಿತಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪುಟಿನ್‌ರ ಭಾರತ ಪ್ರವಾಸಕ್ಕೂ ಮುನ್ನ ತಿಳಿಸಿದ್ದರು. ಇದರ ಜೊತೆಗೆ ಭಾರತ–ರಷ್ಯಾ ನಡುವಿನ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಲಿದ್ದಾರೆ. ಜಾಗತಿಕ ಹಾಗೂ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆಯೂ ಅಭಿಪ್ರಾಯ ವಿನಿಮಯ ನಡೆಯುವ ನಿರೀಕ್ಷೆಯಿದೆ.

ರಕ್ಷಣಾ ಸಹಕಾರಕ್ಕೂ ಆದ್ಯತೆ

ಭಾರತ–ರಷ್ಯಾ ಸಂಬಂಧದಲ್ಲಿ ರಕ್ಷಣಾ ಸಹಕಾರ ಪ್ರಮುಖ ಸ್ಥಾನ ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರವೂ ಮಾತುಕತೆಯ ಪ್ರಮುಖ ಅಂಶವಾಗುವ ಸಾಧ್ಯತೆಯಿದೆ. ಈಗಾಗಲೇ ನಡೆಯುತ್ತಿರುವ ರಕ್ಷಣಾ ಯೋಜನೆಗಳು ಹಾಗೂ ಭವಿಷ್ಯದ ಸಹಕಾರದ ಯೋಜನೆಗಳ ಕುರಿತು ಮೋದಿ ಮತ್ತು ಪುಟಿನ್ ಚರ್ಚಿಸುವ ನಿರೀಕ್ಷೆಯಿದೆ.

ಭಾರತ ಮತ್ತು ರಷ್ಯಾ ಹಲವು ದಶಕಗಳಿಂದ ರಕ್ಷಣಾ, ಇಂಧನ, ಬಾಹ್ಯಾಕಾಶ ಹಾಗೂ ಇತರ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೊಂದಿವೆ. ಹೀಗಾಗಿ ಪುಟಿನ್ ಅವರ ಭಾರತ ಪ್ರವಾಸವನ್ನು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ನಾಳೆಯಿಂದ ಬ್ರಿಕ್ಸ್ ಶೃಂಗಸಭೆ

2026ರ ಬ್ರಿಕ್ಸ್ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡಿದ್ದು, ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹಾಗೂ ಪಾಲುದಾರ ರಾಷ್ಟ್ರಗಳ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳೂ ಭಾಗಿಯಾಗಲಿದ್ದಾರೆ. ಬ್ರಿಕ್ಸ್ ವೇದಿಕೆಯ ಮೂಲಕ ಸಾಮಾನ್ಯ ಆದ್ಯತೆಗಳ ಕುರಿತು ಸಹಕಾರವನ್ನು ಮತ್ತಷ್ಟು ಬಲಪಡಿಸುವುದು, ಜಾಗತಿಕ ಹಾಗೂ ಪ್ರಾದೇಶಿಕ ಮಹತ್ವದ ವಿಚಾರಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವುದು ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ ಪುಟಿನ್ ಅವರ ಭಾರತ ಪ್ರವಾಸ ಮತ್ತು ಪ್ರಧಾನಿ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಗಳು ವಿಶೇಷ ಮಹತ್ವ ಪಡೆದುಕೊಂಡಿವೆ. ವ್ಯಾಪಾರ, ಹೂಡಿಕೆ, ಇಂಧನ ಮತ್ತು ರಕ್ಷಣಾ ಸಹಕಾರದ ಜೊತೆಗೆ ಉಕ್ರೇನ್ ಸಂಘರ್ಷ ಸೇರಿದಂತೆ ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ನಡೆಸಿರುವ ಚರ್ಚೆ ಮುಂದಿನ ಭಾರತ–ರಷ್ಯಾ ಸಂಬಂಧದ ದಿಕ್ಕಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

Read More
Next Story