
ಪೂರಿ ಜಗನ್ನಾಥ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದ ಪವಿತ್ರ ಸ್ನಾನ ಯಾತ್ರೆ
ಪುರಿ ಜಗನ್ನಾಥ ದೇಗುಲದಲ್ಲಿ ಅದ್ಧೂರಿಯಾಗಿ ನೆರವೇರಿದ ಪುಣ್ಯಸ್ನಾನ ಯಾತ್ರೆ
ಪುರಿಯ ಜಗನ್ನಾಥ ದೇಗುಲದಲ್ಲಿ ಸಾಂಪ್ರದಾಯಿಕ ಸ್ನಾನ ಯಾತ್ರೆಯು ವೈಭವದಿಂದ ನೆರವೇರಿದ್ದು, ಭಗವಾನ್ ಜಗನ್ನಾಥ, ಬಲಭದ್ರ ಮತ್ತು ದೇವತೆ ಸುಭದ್ರೆಗೆ 108ಕೊಡಗಳ ಪವಿತ್ರ ಜಲದಿಂದ ಮಹಾಭಿಷೇಕ ಮಾಡಲಾಯಿತು.
ವಿಶ್ವಪ್ರಸಿದ್ಧ ಪುರಿಯ ಜಗನ್ನಾಥ ದೇವಾಲಯದಲ್ಲಿ ಇಂದು ಮುಂಜಾನೆ ಜಗನ್ನಾಥ ಸ್ವಾಮಿ ಹಾಗೂ ಅವರ ಒಡಹುಟ್ಟಿದವರ ಸಾಂಪ್ರದಾಯಿಕ ಜಲಕಾಪು ಅಥವಾ ಸ್ನಾನ ಯಾತ್ರೆಯು ಅತ್ಯಂತ ವೈಭವದಿಂದ ನೆರವೇರಿತು. ಈ ಪವಿತ್ರ ದೇವ ಸ್ನಾನ ಪೂರ್ಣಿಮೆಯ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಕರಾವಳಿ ನಗರಿ ಪುರಿಗೆ ಲಕ್ಷಾಂತರ ಭಕ್ತ ಸಾಗರವೇ ಹರಿದುಬಂದಿತ್ತು.
ವಾರ್ಷಿಕ ರಥಯಾತ್ರೆಗೆ ಮುನ್ನುಡಿಯಾಗಿ ಈ ಸ್ನಾನ ಯಾತ್ರೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಭಗವಾನ್ ಬಲಭದ್ರ, ದೇವಿ ಸುಭದ್ರಾ ಮತ್ತು ಜಗನ್ನಾಥ ಸ್ವಾಮಿಯ ವಿಗ್ರಹಗಳನ್ನು ಗರ್ಭಗುಡಿಯಿಂದ ಹೊರಗೆ ತಂದು, ಸಾರ್ವಜನಿಕರ ಸಮ್ಮುಖದಲ್ಲೇ 108 ಚಿನ್ನದ ಕೊಡಗಳ ಪವಿತ್ರ ನೀರಿನಿಂದ ಜಲಕಾವನ್ನು ನೆರವೇರಿಸಲಾಗುತ್ತದೆ. ದೇವಾಲಯದ ಆವರಣದಲ್ಲಿರುವ ಎತ್ತರದ ಮಂಟಪದಲ್ಲಿ ನಡೆಯುವ ಈ ಧಾರ್ಮಿಕ ವಿಧಿಯನ್ನು ಭಕ್ತಾದಿಗಳು ದೇಗುಲದ ಮುಂಭಾಗದ ದೊಡ್ಡ ರಸ್ತೆಯಿಂದ ಕಣ್ಣುಂಬಿಕೊಂಡರು.
ಈ ವರ್ಷದ ಸ್ನಾನ ಯಾತ್ರೆಯು ಮುಂಜಾನೆ 5.15 ಕ್ಕೆ ದೇವರ ಭವ್ಯ ಮೆರವಣಿಗೆ ಅಥವಾ 'ಪಹಂಡಿ' ಆಚರಣೆಯೊಂದಿಗೆ ಪ್ರಾರಂಭವಾಗಿ ಬೆಳಗ್ಗೆ 8 ಗಂಟೆಯವರೆಗೆ ಮುಂದುವರಿಯಿತು. ಸ್ಕಂದ ಪುರಾಣದ ಪ್ರಕಾರ, 12 ನೇ ಶತಮಾನದ ಈ ಪವಿತ್ರ ಕ್ಷೇತ್ರದಲ್ಲಿ ಮರದ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ರಾಜ ಇಂದ್ರದ್ಯುಮ್ನನು ಈ ಸ್ನಾನದ ಆಚರಣೆಯನ್ನು ಪ್ರಥಮ ಬಾರಿಗೆ ಪರಿಚಯಿಸಿದನು ಎನ್ನಲಾಗುತ್ತದೆ.
ವಿಗ್ರಹಗಳನ್ನು ಮಂಟಪದಲ್ಲಿ ಆಸೀನಗೊಳಿಸಿದ ನಂತರ, ಅರ್ಚಕರು 'ಮಂಗಳ ಆರತಿ' ನೆರವೇರಿಸಿದರು. ಸ್ನಾನ ಪೂರ್ಣಿಮೆಯ ದಿನದಂದು ಮುಕ್ತ ಪೆಂಡಾಲ್‌ನಿಂದ ಮಂಗಳ ಆರತಿಯನ್ನು ವೀಕ್ಷಿಸುವ ಸುವರ್ಣಾವಕಾಶ ಭಕ್ತರಿಗೆ ಸಿಗುತ್ತದೆ. ವೇದ ಮಂತ್ರಗಳ ಘೋಷದ ನಡುವೆ, ದೇವಾಲಯದ ಆವರಣದಲ್ಲಿರುವ 'ಸುನಾಕುವಾ' (ಚಿನ್ನದ ಬಾವಿ) ಯಿಂದ ತರಲಾದ 108 ಕೊಡಗಳ ಪವಿತ್ರ ನೀರನ್ನು ಮೂರ್ತಿಗಳಿಗೆ ಪ್ರೋಕ್ಷಿಸಲಾಯಿತು.
ಇದಾದ ಬೆನ್ನಲ್ಲೇ ಪುರಿಯ ರಾಜ ಗಜಪತಿ ಮಹಾರಾಜ್ ದಿವ್ಯಸಿಂಗ್ ದೇವ್ ಅವರು 'ಸ್ನಾನ ಮಂಟಪ'ದ ಸಾಂಪ್ರದಾಯಿಕ ಕಸಬರಕೆಯನ್ನು ನಡೆಸಿದರು. ತದನಂತರ ದೇವತೆಗಳಿಗೆ ಆನೆ ದೇವರ ಅಲಂಕಾರವಾದ “ಗಜ ವೇಷ” ವನ್ನು ಧರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಧಾರ್ಮಿಕ ವಿಧಿಗಳ ನಂತರ ದೇವತೆಗಳನ್ನು 12 ನೇ ಶತಮಾನದ ಶ್ರೀಮಂದಿರಕ್ಕೆ ಹಿಂತಿರುಗಿಸಿ, ಮುಂದಿನ 14 ದಿನಗಳ ಕಾಲ 'ಅನಸರ ಘರ್' (ಏಕಾಂತ ಕೊಠಡಿ) ನಲ್ಲಿ ಇರಿಸಲಾಗುತ್ತದೆ. ಇದರಿಂದಾಗಿ ವಾರ್ಷಿಕ ರಥಯಾತ್ರೆಯ ಹಿಂದಿನ ದಿನವಾದ ಜುಲೈ 15ರವರೆಗೆ ಭಕ್ತರಿಗೆ ದೇವರ ಸಾರ್ವಜನಿಕ ದರ್ಶನವನ್ನು ಸ್ಥಗಿತಗೊಳಿಸಲಾಗಿರುತ್ತದೆ. ಇನ್ನು ಈ ಬೃಹತ್ ಉತ್ಸವದ ಹಿನ್ನೆಲೆಯಲ್ಲಿ ಪೂರಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಒಟ್ಟು 79 ಪ್ಲಟೂನ್ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ವಲಯದ ಐಜಿ ಸತ್ಯಜಿತ್ ನಾಯಕ್ ತಿಳಿಸಿದ್ದಾರೆ.

