
5 ಕೋಟಿ ರೂ. ಕೊಟ್ಟರೆ ಅತ್ಯಾಚಾರ ಪ್ರಕರಣ ಇತ್ಯರ್ಥ- ಪಂಜಾಬ್ ಸಿಎಂ ವಿರುದ್ಧ ಗಂಭೀರ ಆರೋಪ
ಬಿಜೆಪಿ ಆಡಿಯೋವೊಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ ಓರ್ವ ವ್ಯಕ್ತಿ ತನಗೆ ರಾಜಕೀಯ ನಾಯಕರ ಜೊತೆ ಇರುವ ಸಂಪರ್ಕಗಳ ಬಗ್ಗೆ ಮಾತನಾಡುತ್ತಾ ಅತ್ಯಾಚಾರ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಿಸುವ ಕುರಿತು ಮಾತನಾಡುತ್ತಿರುವುದು ಕೇಳಿ ಬಂದಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅವರ ಪತ್ನಿ ಗುರ್ಪ್ರೀತ್ ಕೌರ್ ವಿರುದ್ಧ ಬಿಜೆಪಿ ಗುರುವಾರ ಗಂಭೀರ ಆರೋಪಗಳನ್ನು ಮಾಡಿದೆ. ಮಧ್ಯವರ್ತಿಗಳ ಮೂಲಕ ಅತ್ಯಾಚಾರ ಪ್ರಕರಣಗಳನ್ನು 5 ಕೋಟಿ ರೂ. ಪಡೆದು ಕೋರ್ಟ್‌ನ ಹೊರಗೆ ‘ಇತ್ಯರ್ಥ’ ಮಾಡಿಸುವ ಜಾಲವನ್ನು ಮುಖ್ಯಮಂತ್ರಿ ಮತ್ತು ಅವರ ಪತ್ನಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಗುರ್ವಿಂದರ್ ಸಿಂಗ್ ಚಹಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪಗಳು ಕೇಳಿಬಂದಿವೆ. ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೆಲವು ತಿಂಗಳ ಹಿಂದೆ ಬಂಧಿಸಲಾಗಿದ್ದ ಚಹಾಲ್ ಅವರನ್ನು ಪಂಜಾಬ್ ಪೊಲೀಸರು ಈ ವಾರದ ಆರಂಭದಲ್ಲಿ ಬಿಡುಗಡೆ ಮಾಡಿದ್ದರು.
ಆಡಿಯೋ ಕ್ಲಿಪ್ ರಿಲೀಸ್
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಪತ್ರಿಕಾಗೋಷ್ಠಿ ನಡೆಸಿ, ಈ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಹೇಳಲಾದ ಕೆಲವು ಆಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡಿದರು. ಆಡಿಯೋದಲ್ಲಿ ಓರ್ವ ವ್ಯಕ್ತಿ ತನ್ನ ರಾಜಕೀಯ ಸಂಪರ್ಕಗಳನ್ನು ಉಲ್ಲೇಖಿಸಿ ಅತ್ಯಾಚಾರ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಿಸುವ ಕುರಿತು ಮಾತನಾಡುತ್ತಿರುವುದು ಕೇಳಿಸುತ್ತದೆ ಎಂದು ಬಿಜೆಪಿ ಹೇಳಿದೆ.
ಆದರೆ, ಆಡಿಯೋ ಕ್ಲಿಪ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅಥವಾ ಅವರ ಪತ್ನಿ ಗುರ್ಪ್ರೀತ್ ಕೌರ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. “ಭಗವಂತ್ ಮಾನ್ ಮತ್ತು ಅವರ ಪತ್ನಿ ಲೂಟಿ ಹಾಗೂ ಭ್ರಷ್ಟಾಚಾರದ ಜಾಲವನ್ನು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಮಧ್ಯವರ್ತಿಗಳನ್ನು ಬಳಸಿಕೊಂಡು ಅತ್ಯಾಚಾರ ಪ್ರಕರಣಗಳನ್ನು 5 ಕೋಟಿ ರೂ. ಪಡೆದು ಇತ್ಯರ್ಥ ಮಾಡಲಾಗುತ್ತಿದೆ,” ಎಂದು ಪ್ರದೀಪ್ ಭಂಡಾರಿ ಆರೋಪಿಸಿದರು.
“ಈ ಆಡಿಯೋ ಕ್ಲಿಪ್‌ಗಳು ಮೇಲ್ನೋಟಕ್ಕೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮುಖ್ಯಮಂತ್ರಿ ಸ್ವತಃ ಪ್ರಕರಣವೊಂದನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುತ್ತಿದ್ದಾರೆಯೇ? ಮುಖ್ಯಮಂತ್ರಿಯ ನಿವಾಸವೇ ಡೀಲ್‌ಗಳು ನಡೆಯುವ ಸ್ಥಳವಾಗಿ ಮಾರ್ಪಟ್ಟಿದೆಯೇ? ಕಮಿಷನ್ ಹಣ ಪಂಜಾಬ್‌ನ ಸೂಪರ್ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ತಲುಪುತ್ತಿದೆಯೇ?” ಎಂದು ಭಂಡಾರಿ ಪ್ರಶ್ನಿಸಿದರು. ಆದಾಗ್ಯೂ, ಬಿಜೆಪಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅಥವಾ ಅವರ ಪತ್ನಿ ಗುರ್ಪ್ರೀತ್ ಕೌರ್ ಅವರಿಂದ ಯಾವುದೇ ಪ್ರತಿಕ್ರಿಯೆ ಈ ವರದಿಯ ಸಂದರ್ಭದಲ್ಲಿ ಲಭ್ಯವಾಗಿಲ್ಲ.

