
ಪಿಒಕೆಯಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತನಾದ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹಮ್ಜಾ ಬುರ್ಹಾನ್.
Pulwama Attack| ಪುಲ್ವಾಮಾ ದಾಳಿ ಮಾಸ್ಟರ್‌ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ
2019ರ ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್‌ಮೈಂಡ್ ಹಮ್ಜಾ ಬುರ್ಹಾನ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತನಾಗಿದ್ದಾನೆ.
ಭಾರತೀಯ ಭದ್ರತಾ ಪಡೆಗಳ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವ 2019ರ ಪುಲ್ವಾಮಾ ಭೀಕರ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾದ ಹಮ್ಜಾ ಬುರ್ಹಾನ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ. ಪಿಒಕೆಯ ಮುಜಾಫರಾಬಾದ್‌ನಲ್ಲಿ ಅಡಗಿಕೊಂಡಿದ್ದ ಈತನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಮುಜಾಫರಾಬಾದ್‌ನಲ್ಲಿ ನಡೆದ ಈ ದಾಳಿಯಲ್ಲಿ ಹಮ್ಜಾ ಬುರ್ಹಾನ್‌ಗೆ ಹಲವು ಬಾರಿ ಗುಂಡು ತಗುಲಿದ್ದು, ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅರ್ಜುಮಂದ್ ಗುಲ್ಜಾರ್ ದಾರ್ ಅಲಿಯಾಸ್ ಹಮ್ಜಾ ಬುರ್ಹಾನ್ ಅಲಿಯಾಸ್ 'ಡಾಕ್ಟರ್' ಎಂದು ಕರೆಯಲ್ಪಡುತ್ತಿದ್ದ ಈತ ಮೂಲತಃ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರತ್ನಿಪೋರಾದ ಖರ್ಬತ್‌ಪೋರಾ ನಿವಾಸಿಯಾಗಿದ್ದನು. ನಿಷೇಧಿತ ಉಗ್ರಗಾಮಿ ಸಂಘಟನೆ 'ಅಲ್ ಬದ್ರ್' ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈತನನ್ನು ಭಾರತ ಸರ್ಕಾರವು 2022ರಲ್ಲಿ ಯುಎಪಿಎ ಕಾಯ್ದೆಯಡಿ ಭಯೋತ್ಪಾದಕ ಎಂದು ಘೋಷಿಸಿತ್ತು.
2019ರ ಫೆಬ್ರವರಿ 14 ರಂದು ಜಮ್ಮು-ಶ್ರೀನಗರ ಹೆದ್ದಾರಿಯ ಲೆಥ್‌ಪೋರಾ ಬಳಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್, ಸಿಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನಕ್ಕೆ ಸ್ಫೋಟಕ ತುಂಬಿದ ಕಾರನ್ನು ಡಿಕ್ಕಿ ಹೊಡೆಸಿದ್ದನು. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಭೀಕರ ಸ್ಫೋಟದಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಸಂಪೂರ್ಣ ಸಂಚು ರೂಪಿಸುವಲ್ಲಿ ಹಮ್ಜಾ ಬುರ್ಹಾನ್ ಪ್ರಮುಖ ಪಾತ್ರ ವಹಿಸಿದ್ದನು. ಇದೀಗ ಪಿಒಕೆಯಲ್ಲಿ ಅಪರಿಚಿತ ದಾಳಿಕೋರರು ಆತನನ್ನು ಮಟ್ಟಹಾಕಿದ್ದು, ಈ ಕೊಲೆಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ.

