Women Reservation Bill| ಇದು ಪ್ರಜಾಪ್ರಭುತ್ವದ ಗೆಲುವು ಮಹಿಳಾ ಮೀಸಲಾತಿ ವಿಧೇಯಕ ವಿಫಲದ ಬಗ್ಗೆ ಪ್ರಿಯಾಂಕಾ ಹೇಳಿಕೆ
x
ಪ್ರಿಯಾಂಕಾ ಗಾಂಧಿ ಪತ್ರಿಕಾಗೋಷ್ಠಿ

Women Reservation Bill| "ಇದು ಪ್ರಜಾಪ್ರಭುತ್ವದ ಗೆಲುವು" ಮಹಿಳಾ ಮೀಸಲಾತಿ ವಿಧೇಯಕ ವಿಫಲದ ಬಗ್ಗೆ ಪ್ರಿಯಾಂಕಾ ಹೇಳಿಕೆ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ವಿಫಲವಾದ ಹಿನ್ನೆಲೆ, ಇದು ಆಡಳಿತ ಪಕ್ಷದ ಸಂಚಿಗೆ ಬಿದ್ದ ಏಟು ಎಂದು ಪ್ರಿಯಾಂಕಾ ಗಾಂಧಿ ಬಣ್ಣಿಸಿದ್ದಾರೆ.


ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರಗೊಳ್ಳದ ಬೆಳವಣಿಗೆಯನ್ನು ಪ್ರಜಾಪ್ರಭುತ್ವದ ದೊಡ್ಡ ಗೆಲುವು ಎಂದು ಬಣ್ಣಿಸಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಇದು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಸಿಕ್ಕ ಜಯ ಮತ್ತು ಆಡಳಿತ ಪಕ್ಷದ 'ಸಂಚಿಗೆ' ಬಿದ್ದ ದೊಡ್ಡ ಏಟು ಎಂದು ಹೇಳಿದ್ದಾರೆ. ಶನಿವಾರ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಫಲಿತಾಂಶವು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧದ ಜಯವಾಗಿದೆ ಎಂದರು.

ಪ್ರಿಯಾಂಕಾ ಗಾಂಧಿ ಅವರ ಭಾಷಣದ ಪ್ರಮುಖಾಂಶಗಳು:

"ನಿನ್ನೆ ನಡೆದದ್ದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಗೆಲುವು. ಅಧಿಕಾರದಲ್ಲಿರುವವರ ಮುಖದಲ್ಲಿ ಸೋಲಿನ ಆತಂಕ ಎದ್ದು ಕಾಣುತ್ತಿದೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ," ಎಂದು ಪ್ರಿಯಾಂಕಾ ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, "ಶಾಶ್ವತವಾಗಿ ಅಧಿಕಾರದಲ್ಲಿರಲು ಒಂದು ದೊಡ್ಡ ಸಂಚು ರೂಪಿಸಲಾಗಿತ್ತು. ದಿಢೀರ್ ಅಧಿವೇಶನ ಕರೆದದ್ದು ಕೂಡ ಯಾವುದೋ ಒಂದು ರೀತಿಯಲ್ಲಿ ಖಾಯಂ ಸರ್ಕಾರ ರಚಿಸುವ ಯೋಜನೆಯ ಭಾಗವಾಗಿತ್ತು," ಎಂದು ದೂರಿದರು.

"ವಿಧೇಯಕ ಅಂಗೀಕಾರವಾದರೆ ತಾವು ಮಹಿಳೆಯರ ಚಾಂಪಿಯನ್ ಎನಿಸಿಕೊಳ್ಳಬಹುದು, ಒಂದು ವೇಳೆ ವಿಫಲವಾದರೂ ಅದರ ಲಾಭ ಪಡೆಯಬಹುದು ಎಂದು ಆಡಳಿತ ಪಕ್ಷ ಭಾವಿಸಿತ್ತು. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ," ಎಂದು ಅವರು ಟಾಂಗ್ ನೀಡಿದರು.

ಕ್ಷೇತ್ರ ಮರುವಿಂಗಡಣೆ ಬಗ್ಗೆ ಪ್ರಶ್ನೆ

ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ (Delimitation) ಜೋಡಿಸಿರುವ ಸರ್ಕಾರದ ನಡೆಯನ್ನು ಪ್ರಿಯಾಂಕಾ ಪ್ರಶ್ನಿಸಿದರು. "ಸಂಸ್ಥೆಗಳ ಮೇಲೆ ಗೌರವವಿಲ್ಲದ ಸರ್ಕಾರಕ್ಕೆ, ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಲೋಕಸಭಾ ಸಂಸದರ ಸಂಖ್ಯೆಯನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬದಲಾಯಿಸಲು ವಿರೋಧ ಪಕ್ಷಗಳು ಹೇಗೆ ಅವಕಾಶ ನೀಡುತ್ತವೆ?" ಎಂದು ಅವರು ಕೇಳಿದರು.

ಮಹಿಳೆಯರ ಬಗ್ಗೆ ಸರ್ಕಾರದ ಕಾಳಜಿಯನ್ನು ಪ್ರಶ್ನಿಸಿದ ಅವರು, "ಉನ್ನಾವೋ ಮತ್ತು ಹಾಥ್ರಸ್ ಘಟನೆಗಳನ್ನು ನಾವು ನೋಡಿದ್ದೇವೆ. ಮಣಿಪುರದಲ್ಲಿ ಮಹಿಳೆಯರ ಪರವಾಗಿ ಯಾರು ಧ್ವನಿ ಎತ್ತಿದರು? ಸರ್ಕಾರದ ಈ ಹಿಂದಿನ ದಾಖಲೆಗಳು ಅವರ ಈಗಿನ ವಾದಕ್ಕೆ ಹೊಂದಿಕೆಯಾಗುತ್ತಿಲ್ಲ," ಎಂದು ಕಿಡಿಕಾರಿದರು.

ಕಾಂಗ್ರೆಸ್ ಬೇಡಿಕೆ

ಸರ್ಕಾರಕ್ಕೆ ಸವಾಲು ಹಾಕಿದ ಪ್ರಿಯಾಂಕಾ ಗಾಂಧಿ, "ನೀವು ನಿಜವಾಗಿಯೂ ಮಹಿಳೆಯರಿಗಾಗಿ ಏನಾದರೂ ಮಾಡಲು ಬಯಸಿದರೆ, 2023ರ ವಿಧೇಯಕವನ್ನು ಮರಳಿ ತನ್ನಿ, ನಾವು ಅದಕ್ಕೆ ಬೆಂಬಲ ನೀಡುತ್ತೇವೆ. ಅಸ್ತಿತ್ವದಲ್ಲಿರುವ ಸೀಟುಗಳಲ್ಲೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ವಿರೋಧ ಪಕ್ಷಗಳು ಸಿದ್ಧವಿವೆ," ಎಂದು ಸ್ಪಷ್ಟಪಡಿಸಿದರು. ಒಟ್ಟಾರೆಯಾಗಿ, ವಿರೋಧ ಪಕ್ಷಗಳು ಒಂದಾದರೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

Read More
Next Story