
ರಕ್ಷಣಾ ಸಚಿವಾಲಯದ ಸಿಬ್ಬಂದಿ, ಗರ್ಭಿಣಿ ಅನುಮಾನಾಸ್ಪದ ಸಾವು; ಅತ್ತೆ-ಮಾವರಿಂದ ಕಿರುಕುಳ ಆರೋಪ
ಮೂರು ತಿಂಗಳ ಗರ್ಭಿಣಿಯಾಗಿದ್ದ ರಕ್ಷಣಾ ಸಚಿವಾಲಯದ ಸಿಬ್ಬಂದಿ ನಾಜಿಯಾ ಖಾನಂ ಸಾವಿನ ಪ್ರಕರಣದಲ್ಲಿ ಕುಟುಂಬಸ್ಥರ ವಿರುದ್ಧ ಗಂಭೀರ ಆರೋಪದ ನಡುವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ದೆಹಲಿಯ ದ್ವಾರಕಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತಳ ಕುಟುಂಬಸ್ಥರು ಪತಿ ಹಾಗೂ ಅತ್ತೆ-ಮಾವನ ಕಡೆಯವರಿಂದ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದು, ಸಾವಿನ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ಮೃತರನ್ನು 30 ವರ್ಷದ ನಾಜಿಯಾ ಖಾನಂ ಎಂದು ಗುರುತಿಸಲಾಗಿದೆ. ಅವರು ಇದೇ ವರ್ಷದ ಏಪ್ರಿಲ್ 11ರಂದು ಅಜ್ಮ್ ಅಲಿ ಖಾನ್ ಅವರನ್ನು ವಿವಾಹವಾಗಿದ್ದರು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೂರು ತಿಂಗಳ ಗರ್ಭಿಣಿಯಾಗಿದ್ದ ನಾಜಿಯಾ
ನಾಜಿಯಾ ಖಾನಂ ಅವರು ಮೃತಪಡುವ ಸಂದರ್ಭದಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪತಿ, ಅತ್ತೆ, ಮಾವ ಹಾಗೂ ಪತಿಯ ಕುಟುಂಬದ ಇತರ ಸದಸ್ಯರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವನ್ನು ನಾಜಿಯಾ ಅವರ ತಂದೆ ತವಾಬ್ ಖಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಾಡಿದ್ದಾರೆ.
ನಿಂದನೆ, ದೈಹಿಕ ಹಲ್ಲೆ ಹಾಗೂ ಮನೆಯಿಂದ ಹೊರಹಾಕುವ ಬೆದರಿಕೆ ಮಾತ್ರವಲ್ಲದೆ ಜೀವ ಬೆದರಿಕೆಯನ್ನೂ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ನಾಜಿಯಾ ಅವರು ದೂರವಾಣಿ ಮೂಲಕ ತಮ್ಮ ಕುಟುಂಬದವರಿಗೆ ಹಲವು ಬಾರಿ ಮಾಹಿತಿ ನೀಡಿದ್ದರು ಎಂದು ತಂದೆ ಹೇಳಿದ್ದಾರೆ.
ಆಗಸ್ಟ್ 21ರಂದು ಸಾವಿನ ಮಾಹಿತಿ
ಆಗಸ್ಟ್ 21ರಂದು ಮುಂಜಾನೆ ಸುಮಾರು 4 ಗಂಟೆಗೆ ನಾಜಿಯಾ ಸಾವನ್ನಪ್ಪಿರುವ ಕುರಿತು ಕುಟುಂಬದವರಿಗೆ ಮಾಹಿತಿ ದೊರಕಿತ್ತು. ಆದರೆ, ಇದು ಕೇವಲ ಆತ್ಮಹತ್ಯೆಯಲ್ಲ; ನಾಜಿಯಾ ಅವರನ್ನು ಕೊಲೆ ಮಾಡಿ ನಂತರ ಅದನ್ನು ಆತ್ಮಹತ್ಯೆಯಂತೆ ಬಿಂಬಿಸುವ ಪ್ರಯತ್ನ ನಡೆದಿರಬಹುದು ಎಂಬ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದಲೇ ನಾಜಿಯಾ ಈ ನಿರ್ಧಾರಕ್ಕೆ ತಳ್ಳಲ್ಪಟ್ಟಿರಬಹುದು ಎಂದು ಕುಟುಂಬ ಆರೋಪಿಸಿದೆ. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅವರು ಒತ್ತಾಯಿಸಿದ್ದಾರೆ.
ಪತಿಯ ಹೇಳಿಕೆ ಏನು?
ಘಟನೆ ನಡೆದ ಮನೆಗೆ ಉಪನಿರೀಕ್ಷಕ ಸತ್ಪಾಲ್ ದಾಗರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಪತ್ನಿಯೊಂದಿಗೆ ಜಗಳವಾದ ನಂತರ ಅವರು ಕೋಣೆಯೊಂದರಲ್ಲಿ ತಮ್ಮನ್ನು ತಾವು ಬಂದಿಸಿಕೊಂಡಿದ್ದರು. ಬಳಿಕ ಹೊರಬಂದು ನೋಡಿದಾಗ ನಾಜಿಯಾ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ದ್ವಾರಕಾ ಅಪರಾಧ ತನಿಖಾ ತಂಡವನ್ನೂ ಕರೆಸಿ ಪರಿಶೀಲನೆ ಮತ್ತು ಛಾಯಾಚಿತ್ರ ದಾಖಲಾತಿ ಮಾಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡಿಡಿಯು ಆಸ್ಪತ್ರೆಗೆ ರವಾನಿಸಲಾಗಿದೆ.
ಸಾವಿನ ಸುತ್ತ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ಸಮಗ್ರ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ತನಿಖಾ ಪ್ರಕ್ರಿಯೆ ಹಾಗೂ ಸಾಕ್ಷ್ಯ ಸಂಗ್ರಹಣೆಯ ವಿಡಿಯೊ ದಾಖಲಾತಿ ನಡೆಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಆಗಸ್ಟ್ 21ರಂದು ಕಾರ್ಯನಿರ್ವಾಹಕ ದಂಡಾಧಿಕಾರಿಯ ಮುಂದೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದ ಕಾರಣ ಅಂದೇ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ನಾಜಿಯಾ ಅವರ ತಂದೆ ಮತ್ತು ಸಹೋದರ ಕಾರ್ಯನಿರ್ವಾಹಕ ದಂಡಾಧಿಕಾರಿಯ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ಕಾರ್ಯನಿರ್ವಾಹಕ ದಂಡಾಧಿಕಾರಿಗೆ ಸಲ್ಲಿಸಲಾದ ಪ್ರತ್ಯೇಕ ಹೇಳಿಕೆಯಲ್ಲಿ ನಾಜಿಯಾ ಅವರ ತಂದೆ, ತಮ್ಮ ಮಗಳ ಸಾವಿಗೆ ಅಳಿಯನೇ ಕಾರಣ ಎಂದು ಆರೋಪಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 85 ಮತ್ತು 108ನೇ ವಿಧಿಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ನಾಜಿಯಾ ಅವರ ಸಾವಿಗೆ ನಿಖರ ಕಾರಣವೇನು, ಕುಟುಂಬದವರು ಮಾಡಿರುವ ಕಿರುಕುಳ ಮತ್ತು ಕೊಲೆ ಆರೋಪಗಳಲ್ಲಿ ಎಷ್ಟು ಸತ್ಯವಿದೆ ಎಂಬುದರ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

