
'370 ರೂ. ಬಿರಿಯಾನಿ' ವಿವಾದ: ಮತ್ತೊಮ್ಮೆ ಕ್ಷಮೆ ಕೇಳಿದ ಕಾಮಿಡಿಯನ್ ಪ್ರಣಿತ್ ಮೋರೆ
370 ರೂ. ಬಿರಿಯಾನಿ ವಿವಾದದ ಹಿನ್ನೆಲೆಯಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪ್ರಣಿತ್ ಮೋರೆ ಮತ್ತೊಮ್ಮೆ ಕ್ಷಮೆ ಕೇಳಿದ್ದಾರೆ. "ನನಗೆ ಸಿಗುತ್ತಿರುವ ದ್ವೇಷಕ್ಕೆ ನಾನು ಅರ್ಹ" ಎಂದು ಹೇಳಿರುವ ಅವರು, ಆಕ್ಷೇಪಾರ್ಹ ಹೇಳಿಕೆಯನ್ನು ತಡೆಯದಿರುವುದು ತಮ್ಮ ತಪ್ಪು ಎಂದು ಒಪ್ಪಿಕೊಂಡಿದ್ದಾರೆ.
'370 ರೂಪಾಯಿ ಬಿರಿಯಾನಿ' ಹೇಳಿಕೆ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಕಾರ್ಯಕ್ರಮದ ವೇಳೆ ವಿವಾದಾತ್ಮಕ ಹೇಳಿಕೆಗೆ ತಕ್ಷಣ ಆಕ್ಷೇಪ ವ್ಯಕ್ತಪಡಿಸದಿರುವುದು ತಮ್ಮ ತಪ್ಪು ನಿರ್ಧಾರ ಎಂದು ಒಪ್ಪಿಕೊಂಡಿರುವ ಅವರು, ತಮಗೆ ಮತ್ತೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಎದುರಿಸಿದ ನಂತರ ಪ್ರಣಿತ್ ಮೋರೆ ಅವರ ಇನ್‌ಸ್ಟಾಗ್ರಾಮ್ ಖಾತೆ ನಿಷ್ಕ್ರಿಯಗೊಂಡಿತ್ತು. ಇದೇ ವೇಳೆ ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯ ಪ್ರಸಾರ ಮಾಡಿದ ಆರೋಪದಡಿ ಸೈಬರ್ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.
ಏನಿದು 370 ರೂ. ಬಿರಿಯಾನಿ ವಿವಾದ?
ಗುರುಗ್ರಾಮದಲ್ಲಿ ನಡೆದ ಸ್ಟ್ಯಾಂಡ್‌ಅಪ್ ಕಾಮಿಡಿ ಕಾರ್ಯಕ್ರಮದ ವೇಳೆ ಪ್ರಣಿತ್ ಮೋರೆ ಪ್ರೇಕ್ಷಕರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ವೆಬ್ ಡೆವಲಪರ್ ಆಗಿರುವ ಹಿಮಾಂಶು ಜಂಗ್ರಾ ಎಂಬಾತ ತನ್ನ ಡೇಟ್ ಅನುಭವವನ್ನು ಹಂಚಿಕೊಂಡಿದ್ದ.
ಅವನು 370 ರೂಪಾಯಿ ನೀಡಿ ಚಿಕನ್ ಬಿರಿಯಾನಿ ಖರೀದಿಸಿದ್ದಾಗಿ ಹೇಳಿದ್ದ. ಬಳಿಕ ಆ ಯುವತಿ ಮನೆಗೆ ಬಿಡುವಂತೆ ಕೇಳಿದಾಗ, ಬಿರಿಯಾನಿಗೆ ಖರ್ಚು ಮಾಡಿದ ಹಣಕ್ಕೆ ಪ್ರತಿಯಾಗಿ ಆತ ಆ ಹುಡುಗಿಯ ಜೊತೆ ಅನುಚಿತವಾಗಿ ವರ್ತಿಸಿದ್ದ ಬಗ್ಗೆ ಹೇಳಿದ್ದ. ಈ ಹೇಳಿಕೆಗೆ ಪ್ರಣಿತ್ ಮೋರೆ ನಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಹಿಮಾಂಶು ಜಂಗ್ರಾ ಮತ್ತು ಪ್ರಣಿತ್ ಮೋರೆ ಇಬ್ಬರೂ ಕ್ಷಮೆ ಕೇಳಿದ್ದರು. ಆದರೆ ಟೀಕೆಗಳು ಮುಂದುವರಿದಿದ್ದವು.
" ಟೀಕೆಗೆ ನಾನು ಅರ್ಹ"
ಶನಿವಾರ ಬಿಡುಗಡೆ ಮಾಡಿದ ಹೊಸ ಕ್ಷಮಾಪಣೆಯಲ್ಲಿ ಪ್ರಣಿತ್ ಮೋರೆ, "ನನಗೆ ಸಿಗುತ್ತಿರುವ ಈ ಟೀಕೆಗೆ ನಾನು ಅರ್ಹ. ಆ ವ್ಯಕ್ತಿ ಹಲವಾರು ಅವಹೇಳನಕಾರಿ ಮಾತುಗಳನ್ನು ಹೇಳಿದ್ದ. ಆದರೆ ಎಲ್ಲರೂ ನಗುತ್ತಿದ್ದ ಕಾರಣ ನಾನು ಕೂಡ ಅದರಲ್ಲಿ ಮುಳುಗಿ ಹೋದೆ. ಅದು ನನ್ನ ದೊಡ್ಡ ತಪ್ಪು" ಎಂದು ಹೇಳಿದ್ದಾರೆ.
"ಆ ಕ್ಷಣದಲ್ಲೇ ನಾನು ಅವನನ್ನು ತಡೆಯಬಹುದಿತ್ತು. ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ನಾನು ಅವನಿಗೆ ಅವಕಾಶ ನೀಡಿದ್ದು, ವಿಷಯ ಇಷ್ಟು ದೊಡ್ಡ ಮಟ್ಟಕ್ಕೆ ಹೋಗಲು ಕಾರಣವಾಯಿತು. ಇದರಿಂದ ನೋವು ಅನುಭವಿಸಿದ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ" ಎಂದು ಹೇಳಿದ್ದಾರೆ.
ತಾವು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದು, ತಮ್ಮ ಮುಂದಿನ ಕೆಲಸಗಳ ಮೂಲಕ ಅದನ್ನು ಸಾಬೀತುಪಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಎನ್‌ಸಿಡಬ್ಲ್ಯೂ ಸಮನ್ಸ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀ ಮಹಿಳಾ ಆಯೋಗ ಪ್ರಣಿತ್ ಮೋರೆ ಮತ್ತು ಹಿಮಾಂಶು ಜಂಗ್ರಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಇಬ್ಬರ ಹೇಳಿಕೆಗಳು ಹಾಗೂ ವರ್ತನೆ ಮಹಿಳೆಯ ಮೇಲಿನ ಬಲವಂತದ ಮತ್ತು ಸಮ್ಮತಿಯಿಲ್ಲದ ಲೈಂಗಿಕ ವರ್ತನೆಯನ್ನು ವೈಭವೀಕರಿಸುವಂತಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ವಿವಾದದ ಬಳಿಕ ಹಿಮಾಂಶು ಜಂಗ್ರಾ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯು ಅವರ ಉದ್ಯೋಗವನ್ನೂ ರದ್ದುಗೊಳಿಸಿದೆ.
ಮತ್ತೊಂದು ವಿವಾದವೂ ಭುಗಿಲೆದ್ದಿತ್ತು
ಪ್ರಣಿತ್ ಮೋರೆ ಅವರ ಕಾರ್ಯಕ್ರಮದ ಮತ್ತೊಂದು ವಿಡಿಯೋ ಕೂಡ ವಿವಾದಕ್ಕೆ ಕಾರಣವಾಗಿತ್ತು. ವೈದ್ಯಕೀಯ ವಿದ್ಯಾರ್ಥಿನಿ Sejal Pawar ಶವಪರೀಕ್ಷೆ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ಬಳಸುವ ಮೃತದೇಹಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳು ಮೃತರ ಘನತೆಗೆ ಧಕ್ಕೆ ತರುವಂತಿವೆ ಎಂದು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸೇಜಲ್ ಪವಾರ್ ಕೂಡ ಕ್ಷಮೆಯಾಚಿಸಿದ್ದರು. ಈ ಹಿನ್ನೆಲೆಯಲ್ಲಿ KEM ಆಸ್ಪತ್ರೆಯ ಆಡಳಿತ ಎರಡು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ.
ಫಡ್ನವಿಸ್ ಏನು ಹೇಳಿದರು?
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತೊಬ್ಬರ ಘನತೆಗೆ ಧಕ್ಕೆ ತರುವ ಪರವಾನಗಿ ಎಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ. "ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ನಾನು ಸ್ವತಃ ಸ್ಟ್ಯಾಂಡ್‌ಅಪ್ ಕಾಮಿಡಿ ನೋಡುತ್ತೇನೆ. ಅದು ಮನರಂಜನೆಯ ಒಂದು ಮಾಧ್ಯಮ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಯಾವುದೇ ಮಿತಿ ಇಲ್ಲ ಎಂಬುದಲ್ಲ. ಒಬ್ಬರ ಅಭಿವ್ಯಕ್ತಿ ಮತ್ತೊಬ್ಬರ ಘನತೆಯೊಂದಿಗೆ ಬದುಕುವ ಹಕ್ಕಿಗೆ ಧಕ್ಕೆ ತರುವಂತಿರಬಾರದು" ಎಂದು ಅವರು ಹೇಳಿದ್ದಾರೆ.
ಮುಂಬೈ ಮೇಯರ್ ರಿತು ತಾವ್ಡೆ ಕೂಡ ಮನರಂಜನೆಯ ಹೆಸರಿನಲ್ಲಿ ಅಶ್ಲೀಲತೆ, ದ್ವೇಷ ಮತ್ತು ಮಹಿಳಾ ವಿರೋಧಿ ಮನೋಭಾವವನ್ನು ಉತ್ತೇಜಿಸುವ ವಿಷಯಗಳನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

