
ಮೋದಿ 76ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯೋಗಿ ಸೇರಿ ಬಿಜೆಪಿ ನಾಯಕರು ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ 76ನೇ ಜನ್ಮದಿನದ ಸಂಭ್ರಮ: ದೇಶಾದ್ಯಂತ ಒಂದು ತಿಂಗಳ 'ಸೇವಾ ಸಂಕಲ್ಪ ಅಭಿಯಾನ'ಕ್ಕೆ ಚಾಲನೆ
ಮೋದಿ 76ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಸೆ.17ರಿಂದ ಅ.17ರವರೆಗೆ ಸೇವಾ ಸಂಕಲ್ಪ ಅಭಿಯಾನ ನಡೆಯಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು, ಸೆಪ್ಟೆಂಬರ್ 17ರಂದು ತಮ್ಮ 76ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಮುಖ ನಾಯಕರು ಮತ್ತು ಗಣ್ಯರು ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಪ್ರಧಾನಿಯವರ ಹುಟ್ಟುಹಬ್ಬದ ಹಿನ್ನೆಲೆ ಬಿಜೆಪಿಯು ದೇಶಾದ್ಯಂತ ಒಂದು ತಿಂಗಳ ಕಾಲ ನಡೆಯಲಿರುವ ಬೃಹತ್ 'ಸೇವಾ ಸಂಕಲ್ಪ ಅಭಿಯಾನ'ಕ್ಕೆ ಚಾಲನೆ ನೀಡಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ಮೋದಿ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17ರಿಂದ ಆರಂಭವಾಗಿ ಅಕ್ಟೋಬರ್ 17ರವರೆಗೆ 'ಸೇವಾ ಸಂಕಲ್ಪ ಅಭಿಯಾನ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ದೇಶಾದ್ಯಂತ ಬೃಹತ್ ರಕ್ತದಾನ ಶಿಬಿರಗಳು, ಸ್ವಚ್ಛತಾ ಅಭಿಯಾನಗಳು, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ವ್ಯಾಪಕ ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ನಿರ್ಧರಿಸಿದೆ.
ಸಾರ್ವಜನಿಕ ಜೀವನದ 25 ವರ್ಷಗಳ ಮೈಲಿಗಲ್ಲು
ಈ ಅಭಿಯಾನದ ಮೂಲಕ ಪ್ರಧಾನಿ ಮೋದಿ ಅವರ ಸಾರ್ವಜನಿಕ ಜೀವನದ 25 ಯಶಸ್ವಿ ವರ್ಷಗಳನ್ನು ಗುರುತಿಸಲಾಗುತ್ತಿದೆ. 2001ರ ಅಕ್ಟೋಬರ್ 7ರಂದು ಪ್ರಥಮ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ನರೇಂದ್ರ ಮೋದಿ ಅವರು, 2026ರ ಅಕ್ಟೋಬರ್ 7ಕ್ಕೆ ತಮ್ಮ ಸಾರ್ವಜನಿಕ ಸೇವಾ ಜೀವನದಲ್ಲಿ ಭವ್ಯ 25 ವರ್ಷಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ವಾರಾಣಸಿ ಮತ್ತು ವಡನಗರ ನಡುವೆ ಐತಿಹಾಸಿಕ ಬೈಕ್ ರ‍್ಯಾಲಿ
ಜನ್ಮದಿನದ ವಿಶೇಷವಾಗಿ ಪ್ರಧಾನಿಯವರ ಜನ್ಮಸ್ಥಳವಾದ ಗುಜರಾತ್‌ನ ವಡನಗರ ಹಾಗೂ ಅವರ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿ ನಡುವೆ ಬೃಹತ್ ಬೈಕ್ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ. ವಡನಗರದಿಂದ ಹೊರಡುವ ಬೈಕ್ ರ್ಯಾಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದರೆ, ವಾರಾಣಸಿಯಿಂದ ಆರಂಭವಾಗುವ ರ್ಯಾಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಈ ಪ್ರಮುಖ ಕಾರ್ಯಕ್ರಮಗಳಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.
ದೇಶಾದ್ಯಂತ 'ಸೇವಾ ದಿವಸ್' ಹಾಗೂ 'ಆಶೀರ್ವಾದ ಕಾ ದಿಯಾ'
ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ಬಿಜೆಪಿಯು 'ಸೇವಾ ದಿವಸ್' ಆಗಿ ಆಚರಿಸುತ್ತಿದ್ದು, ದೇಶದ ಪ್ರತಿಯೊಂದು ಭಾಗದಲ್ಲೂ ಸಾರ್ವಜನಿಕ ಸೇವಾ ಚಟುವಟಿಕೆಗಳು ರಭಸದಿಂದ ನಡೆಯಲಿವೆ. ಸಂಜೆ ವೇಳೆಗೆ ದೇಶದ ಪ್ರಮುಖ ನಗರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಧಾನಿಯವರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ 'ಆಶೀರ್ವಾದ ಕಾ ದಿಯಾ' ಹೆಸರಿನಲ್ಲಿ ದೀಪ ಬೆಳಗಿಸುವ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

