
ಮನ್ ಕೀ ಬಾತ್‌ನಲ್ಲಿ ಮೋದಿ ಮೆಚ್ಚಿದ್ದ ಬೆಂಗಳೂರಿನ ನಿಂಗಮ್ಮಗೆ ಸಂಕಷ್ಟ- ಫುಟ್‌ಪಾತ್ ಹೋಟೆಲ್ ತೆರವಿಗೆ ಸೂಚನೆ
“ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು ಎಂದಾಕ್ಷಣ ಕಾನೂನು ಬದಲಾಗುವುದಿಲ್ಲ” ಎಂದು ತೆರವು ಕಾರ್ಯಾಚರಣೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದ ಬೆಂಗಳೂರಿನ ಹೊಸಹಳ್ಳಿ ಬೀದಿಬದಿ ವ್ಯಾಪಾರಿ ಟಿ.ಎಸ್. ನಿಂಗಮ್ಮ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಭಾಗವಾಗಿ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ತಳ್ಳುಗಾಡಿ ಹೋಟೆಲ್ ನಡೆಸುತ್ತಿರುವ ನಿಂಗಮ್ಮ ಅವರಿಗೆ ವ್ಯಾಪಾರ ಮಾಡದಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಇದರಿಂದ ಜೀವನಕ್ಕೆ ಆಸರೆಯಾಗಿದ್ದ ಹೋಟೆಲ್‌ನ್ನು ಬಂದ್ ಮಾಡಬೇಕಾದ ಪರಿಸ್ಥಿತಿ ಎದುರಾಗುವ ಆತಂಕ ನಿಂಗಮ್ಮ ಅವರ ಕುಟುಂಬಕ್ಕೆ ಎದುರಾಗಿದೆ.
ನಿಂಗಮ್ಮ ಅವರು ‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಫುಟ್‌ಪಾತ್‌ನಲ್ಲಿ ತಳ್ಳುಗಾಡಿ ಹೋಟೆಲ್ ಆರಂಭಿಸಿ ತಮ್ಮ ಜೀವನ ಕಟ್ಟಿಕೊಂಡಿದ್ದರು. ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇಡ್ಲಿ ಸೇರಿದಂತೆ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುತ್ತಾ ಬಂದಿರುವ ಅವರು, ಇದೇ ಆದಾಯದಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗುತ್ತಿದ್ದಾರೆ. ಬೀದಿಬದಿ ವ್ಯಾಪಾರದಲ್ಲಿ ಯಶಸ್ಸು ಕಂಡಿರುವ ನಿಂಗಮ್ಮ ಅವರ ಕುರಿತು ಆಗಸ್ಟ್ 30ರಂದು ಪ್ರಸಾರವಾದ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಆದರೆ ಇದೀಗ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿಂಗಮ್ಮ ಅವರ ವ್ಯಾಪಾರಕ್ಕೂ ಪರಿಣಾಮ ಬಿದ್ದಿದೆ. ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಫುಟ್‌ಪಾತ್‌ನಲ್ಲಿ ಅಂಗಡಿ ಹಾಕದಂತೆ ಜಿಬಿಎ ಅಧಿಕಾರಿಗಳು ನಿಂಗಮ್ಮ ಅವರಿಗೆ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಮೆಚ್ಚುಗೆ ಪಡೆದಿದ್ದ ಬೀದಿಬದಿ ವ್ಯಾಪಾರಿಯ ಅಂಗಡಿ ತೆರವಿಗೆ ಸೂಚಿಸಿರುವ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ.
ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, “ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು ಎಂದಾಕ್ಷಣ ಕಾನೂನು ಬೇರೆ ಆಗುವುದಿಲ್ಲ” ಎಂದು ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು ಮತ್ತು ಫುಟ್‌ಪಾತ್‌ಗಳಿಂದ ಗೂಡಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಯಾರದ್ದೋ ಬಗ್ಗೆ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಕಾನೂನು ಮತ್ತು ನಿಯಮಗಳನ್ನು ಬದಲಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಉಲ್ಲಂಘಿಸಲು ಅವಕಾಶ ನೀಡಿದರೆ ಕೊನೆಗೆ ಜನರಿಂದಲೇ ಸರ್ಕಾರ ಬೈಯಿಸಿಕೊಳ್ಳಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

