
ಫ್ಲೈದುಬೈ ವಿಮಾನದಲ್ಲಿ ನಡೆದ ಗಂಭೀರ ಘಟನೆಯ ಬಳಿಕ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿ, ಅವರ ಧೈರ್ಯವನ್ನು ಶ್ಲಾಘಿಸಿ ಶೀಘ್ರ ಗುಣಮುಖರಾಗಲು ಹಾರೈಸಿದರು.
"ಅದ್ಭುತ ಧೈರ್ಯ ಮೆರೆದಿದ್ದಾರೆ": ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಚಾರ್ಗೆ ಮೋದಿ ಅಭಿನಂದನೆ
ಗಾಯಗೊಂಡ ಸ್ಥಿತಿಯಲ್ಲೇ ಸ್ಮಿತ್ ಮಚ್ಚಾರ್ ಕಾಕ್ಪಿಟ್ ಬಾಗಿಲು ತೆರೆದಿದ್ದು, ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಪ್ರವೇಶಿಸಿ ಆರೋಪಿತ ಸಹ ಪೈಲಟ್ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೆರವಾದರು.
ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಅಪಾಯದ ವೇಳೆ ನೂರಾರು ಪ್ರಯಾಣಿಕರ ಜೀವ ರಕ್ಷಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸ ಮತ್ತು ಧೈರ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಬರೆದುಕೊಂಡಿರುವ ಪ್ರಧಾನಿ, ತೀವ್ರ ಗಾಯಗೊಂಡಿದ್ದರೂ ಅಪಾಯದ ಸನ್ನಿವೇಶದಲ್ಲಿ ಪೈಲಟ್ ತೋರಿಸಿದ ಅದಮ್ಯ ಧೈರ್ಯ ಅಭಿನಂದನೀಯ. ಕ್ಯಾಪ್ಟನ್ ಸ್ಮಿತ್ ಅವರ ಸಮಯಪ್ರಜ್ಞೆಯಿಂದಾಗಿ ನೂರಾರು ಜನರ ಜೀವ ಉಳಿದಿದೆ ಹಾಗೂ ಅವರ ಈ ಕಾರ್ಯದಿಂದ ಭಾರತ ದೇಶವೇ ಹೆಮ್ಮೆಪಡುತ್ತದೆ ಎಂದು ತಿಳಿಸಿದ್ದಾರೆ.
ವಿಮಾನದಲ್ಲಿ ನಡೆದಿದ್ದೇನು?
ದುಬೈಯಿಂದ ಇಸ್ರೇಲ್ನ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ 170ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಹಾರಾಟದ ಸಮಯದಲ್ಲಿ ಸಹ ಪೈಲಟ್ ವಿಮಾನದ ನಿಯಂತ್ರಣವನ್ನು ಕಸಿದುಕೊಂಡು ಅಪಾಯ ತಂದೊಡ್ಡಲು ಯತ್ನಿಸಿದ್ದಾನೆ. ಇದನ್ನು ತಡೆಯಲು ಮುಂದಾದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಸಹ ಪೈಲಟ್ ಚೂರಿಯಿಂದ ದಾಳಿ ನಡೆಸಿದ್ದನೆಂದು ವರದಿಯಾಗಿದೆ.
ಕಾಕ್ಪಿಟ್ ಬಾಗಿಲು ತೆರೆದು ಪ್ರಯಾಣಿಕರ ನೆರವು ಪಡೆದ ಪೈಲಟ್
ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದರೂ ಧೃತಿಗೆಡದ ಸ್ಮಿತ್ ಮಚ್ಚಾರ್ ಅವರು ಸಹ ಪೈಲಟ್ಗೆ ಸತತ ಪ್ರತಿರೋಧ ಒಡ್ಡಿದ್ದಾರೆ. ಜೊತೆಗೆ ಕಾಕ್ಪಿಟ್ನ ಬಾಗಿಲನ್ನು ತೆರೆದು ಹೊರಗಿದ್ದ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಗೆ ಸುಳಿವು ನೀಡಿದ್ದಾರೆ. ತಕ್ಷಣವೇ ಒಳಗ ಪ್ರವೇಶಿಸಿದ ಪ್ರಯಾಣಿಕರು ಹಾಗೂ ಸಿಬ್ಬಂದಿ ಆರೋಪಿ ಸಹ ಪೈಲಟ್ನನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ತರುವಾಯ ವಿಮಾನದಲ್ಲಿದ್ದ ಇಬ್ಬರು ರಿಲೀಫ್ ಪೈಲಟ್ಗಳು ವಿಮಾನದ ನಿಯಂತ್ರಣ ವಹಿಸಿಕೊಂಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಸುರಕ್ಷಿತ ಲ್ಯಾಂಡಿಂಗ್
ಘಟನೆಯ ತೀವ್ರತೆಯನ್ನು ಮನಗಂಡು ವಿಮಾನವನ್ನು ತಕ್ಷಣವೇ ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತುರ್ತು ತಿರುವು ನೀಡಿ, ಸುರಕ್ಷಿತವಾಗಿ ಇಳಿಸಲಾಯಿತು. ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹಾಗೂ ಆರೋಪಿ ಸಹ ಪೈಲಟ್ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಪ್ರಯಾಣಿಕರಿಗೂ ವಿಮಾನ ನಿಲ್ದಾಣದಲ್ಲಿ ಅಗತ್ಯ ವೈದ್ಯಕೀಯ ತಪಾಸಣೆ ಒದಗಿಸಲಾಯಿತು.
13 ವರ್ಷಕ್ಕೂ ಹೆಚ್ಚು ವಿಮಾನಯಾನ ಅನುಭವ
ಭಾರತೀಯ ಮೂಲದ ಸ್ಮಿತ್ ಮಚ್ಚಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಫ್ಲೈದುಬೈ ಸಂಸ್ಥೆಯಲ್ಲಿ ವಾಣಿಜ್ಯ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಸುಮಾರು 10 ವರ್ಷಗಳ ಕಾಲ ಸ್ಪೈಸ್ಜೆಟ್ನಲ್ಲಿ ಕಾರ್ಯನಿರ್ವಹಿಸಿದ್ದರು. ಬೋಯಿಂಗ್ 737 ಮಾದರಿಯ ವಿಮಾನಗಳಲ್ಲಿ 13 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಇವರು, ಒಟ್ಟು 9,750ಕ್ಕೂ ಹೆಚ್ಚು ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ ನುರಿತ ಅನುಭವ ಹೊಂದಿದ್ದಾರೆ.
ಸಹ ಪೈಲಟ್ ಈ ರೀತಿಯ ಕೃತ್ಯ ಎಸಗಲು ಕಾರಣವೇನು ಎಂಬ ಬಗ್ಗೆ ಅಧಿಕೃತ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಬರಬೇಕಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೈಲಟ್ಗಳ ಆರೋಗ್ಯ ಸ್ಥಿತಿಗತಿಯ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದ್ದಾರೆ.

