ಗ್ಯಾಂಗ್ಟಾಕ್‌ನಲ್ಲಿ ಯುವ ಮಿತ್ರರೊಂದಿಗೆ ಫುಟ್‌ಬಾಲ್ ಆಡಿದ ಪ್ರಧಾನಿ ಮೋದಿ; ಚಿತ್ರಗಳು ವೈರಲ್
x

 ಗ್ಯಾಂಗ್ಟಾಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮುಂಜಾನೆ ಯುವಕರೊಂದಿಗೆ ಫುಟ್‌ಬಾಲ್ ಆಡಿದ್ದಾರೆ. 

ಗ್ಯಾಂಗ್ಟಾಕ್‌ನಲ್ಲಿ 'ಯುವ ಮಿತ್ರರೊಂದಿಗೆ' ಫುಟ್‌ಬಾಲ್ ಆಡಿದ ಪ್ರಧಾನಿ ಮೋದಿ; ಚಿತ್ರಗಳು ವೈರಲ್

ಭಾರತದ ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಮಿಜೋರಾಂ, ಮಣಿಪುರ, ಮೇಘಾಲಯ ಮುಂತಾದೆಡೆ ಫುಟ್‌ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ.


Click the Play button to hear this message in audio format

ಸೊಬಗಿನ ನಗರಿ ಗ್ಯಾಂಗ್ಟಾಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮುಂಜಾನೆ ಯುವಕರೊಂದಿಗೆ ಫುಟ್‌ಬಾಲ್ ಆಡುವ ಮೂಲಕ ದಿನವನ್ನು ಆರಂಭಿಸಿದರು. ಸಿಕ್ಕಿಂನ 50ನೇ ವರ್ಷದ ರಾಜ್ಯೋತ್ಸವದ ಸಮಾರೋಪ ಸಮಾರಂಭಕ್ಕಾಗಿ ಗ್ಯಾಂಗ್ಟಾಕ್‌ಗೆ ಆಗಮಿಸಿರುವ ಅವರು, ಈ 'ಚೈತನ್ಯದಾಯಕ ಕ್ಷಣ'ಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಗ್ಯಾಂಗ್ಟಾಕ್‌ನ ಸುಂದರ ಮುಂಜಾವಿನಲ್ಲಿ ಸಿಕ್ಕಿಂನ ನನ್ನ ಯುವ ಮಿತ್ರರೊಂದಿಗೆ ಫುಟ್‌ಬಾಲ್ ಆಡುವುದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ!" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ, ನೀಲಿ ಬಣ್ಣದ ಕ್ರೀಡಾ ಜಾಕೆಟ್ ತೊಟ್ಟು ಮೈದಾನದಲ್ಲಿ ಯುವಕರೊಂದಿಗೆ ಸಂವಾದ ನಡೆಸುತ್ತಿರುವ ಹಾಗೂ ಚೆಂಡು ಒದೆಯುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. "ಈ ಯುವಕರೊಂದಿಗಿನ ಫುಟ್‌ಬಾಲ್ ಸೆಷನ್ ನಿಜಕ್ಕೂ ಎನರ್ಜಿಟಿಕ್ ಆಗಿತ್ತು!" ಎಂದೂ ಅವರು ಉಲ್ಲೇಖಿಸಿದ್ದಾರೆ.

ಭಾರತದ ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಮಿಜೋರಾಂ, ಮಣಿಪುರ, ಮೇಘಾಲಯ ಮುಂತಾದೆಡೆ ಫುಟ್‌ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಕ್ರಿಕೆಟ್‌ಗಿಂತಲೂ ಮಿಗಿಲಾಗಿ ಫುಟ್‌ಬಾಲ್ ಕ್ರೀಡೆಯನ್ನು ಇಲ್ಲಿನವರು ಆರಾಧಿಸುತ್ತಾರೆ. ದೇಶದ ಒಟ್ಟು ಜನಸಂಖ್ಯೆಯ ಶೇ 3.8ರಷ್ಟು ಮಾತ್ರವಿರುವ ಎಂಟು ಈಶಾನ್ಯ ರಾಜ್ಯಗಳು (ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ), ಇಂಡಿಯನ್ ಸೂಪರ್ ಲೀಗ್ ಹಾಗೂ ಇತರ ಉನ್ನತ ಲೀಗ್‌ಗಳಿಗೆ ಮೂರನೇ ಒಂದು ಭಾಗದಷ್ಟು ಶ್ರೇಷ್ಠ ಫುಟ್‌ಬಾಲ್ ಆಟಗಾರರನ್ನು ನೀಡುತ್ತಿರುವುದು ವಿಶೇಷ.

ಸಿಕ್ಕಿಂ ರಾಜ್ಯ ಉದಯವಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಗ್ಯಾಂಗ್ಟಾಕ್‌ಗೆ ಆಗಮಿಸಿದ್ದಾರೆ. ಆಗಮನದ ಬಳಿಕ ಸಾಂಪ್ರದಾಯಿಕ ನೇಪಾಳಿ ಟೋಪಿ ಧರಿಸಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರೊಂದಿಗೆ 2 ಕಿ.ಮೀ ಉದ್ದದ ಸಾಂಸ್ಕೃತಿಕ ರೋಡ್‌ಶೋನಲ್ಲಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ನೆರೆದಿದ್ದ ಸಾವಿರಾರು ಜನರು ತ್ರಿವರ್ಣ ಧ್ವಜ ಹಿಡಿದು ಪ್ರಧಾನಿಯವರನ್ನು ಸ್ವಾಗತಿಸಿದರು. ಇದೇ ವೇಳೆ, ಪದ್ಮ ಪ್ರಶಸ್ತಿ ಪುರಸ್ಕೃತರು, ಸಮಾಜ ಸೇವಕರು, ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರೊಂದಿಗೂ ಪ್ರಧಾನಿ 'ಫಲಪ್ರದ ಸಂವಾದ' ನಡೆಸಿದರು.

ಮಂಗಳವಾರ (ಏಪ್ರಿಲ್ 28) ಗ್ಯಾಂಗ್ಟಾಕ್‌ನಲ್ಲಿರುವ ವಿಶ್ವದರ್ಜೆಯ ಆರ್ಕಿಡೇರಿಯಂಗೆ ಭೇಟಿ ನೀಡಲಿರುವ ಪ್ರಧಾನಿ, ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆಯುವ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಕೃಷಿ ಸೇರಿದಂತೆ 4,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. ನಾಮಚಿಯ 100 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ, ಎನ್‌ಐಟಿ ದೇವ್ರಾಲಿಯಲ್ಲಿ 30 ಹಾಸಿಗೆಗಳ ಇಂಟಿಗ್ರೇಟೆಡ್ ಸೋವಾ ರಿಗ್ಪಾ ಆಸ್ಪತ್ರೆ, ಸಿಕ್ಕಿಂ ವಿಶ್ವವಿದ್ಯಾಲಯದ ಖಾಯಂ ಕ್ಯಾಂಪಸ್ ಸೇರಿದಂತೆ ಹಲವು ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ.

Read More
Next Story