ಪ್ರಧಾನಿ ಮೋದಿಯಿಂದ ಮತ್ತೊಂದು ಸೆಲ್ಫಿ ವಿಡಿಯೋ- ರಾಹುಲ್‌ ಗಾಂಧಿಗೆ ಟಾಂಗ್‌
x

ಪ್ರಧಾನಿ ಮೋದಿಯಿಂದ ಮತ್ತೊಂದು ಸೆಲ್ಫಿ ವಿಡಿಯೋ- ರಾಹುಲ್‌ ಗಾಂಧಿಗೆ ಟಾಂಗ್‌

ಭಾರತದ ಜಿಡಿಪಿ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಇನ್ಸ್ಟಾಗ್ರಾಂನಲ್ಲಿ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದಾರೆ. ‘ಜೂಠ್ ಕಿ ಗೂಂಜ್’ ಹೇಳಿಕೆ ರಾಹುಲ್ ಗಾಂಧಿ ಅಭಿಯಾನಕ್ಕೆ ತಿರುಗೇಟು ಎನ್ನಲಾಗುತ್ತಿದೆ.


ದೇಶದ ಯುವಜನತೆ, ಅದರಲ್ಲೂ Gen Z ಜೊತೆ ನೇರವಾಗಿ ಕನೆಕ್ಟ್ ಆಗುವ ಪ್ರಯತ್ನವಾಗಿ ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದಾರೆ. 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮ ಆರ್ಥಿಕ ಬೆಳವಣಿಗೆ ದಾಖಲಿಸಿರುವುದನ್ನು ಪ್ರಸ್ತಾಪಿಸಿರುವ ಮೋದಿ, ದೇಶದಲ್ಲಿ ಹರಡಲಾಗುತ್ತಿರುವ “ಸುಳ್ಳಿನ ಪ್ರತಿಧ್ವನಿ” (Jhooth Ki Goonj) ವಿರುದ್ಧವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಆರ್ಥಿಕತೆ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ 7.8ರಷ್ಟು ಬೆಳವಣಿಗೆ ದಾಖಲಿಸಿರುವುದನ್ನು ಮೋದಿ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಯುದ್ಧ, ಬಿಕ್ಕಟ್ಟು ಹಾಗೂ ಅನಿಶ್ಚಿತತೆ ಮುಂದುವರಿದಿದ್ದರೂ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಮೋದಿ ಬಳಸಿರುವ “ಜೂಠ್ ಕಿ ಗೂಂಜ್” ಎಂಬ ಪದ ಬಳಕೆ ಇದೀಗ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುವಜನರನ್ನು ತಲುಪುವ ಉದ್ದೇಶದಿಂದ ನಡೆಸುತ್ತಿರುವ ‘ಛಾತ್ರೋಂ ಕಿ ಗೂಂಜ್’ (Chhatron Ki Goonj) ಅಭಿಯಾನಕ್ಕೆ ಪರೋಕ್ಷ ತಿರುಗೇಟು ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಯುವಜನರನ್ನು ಸೆಳೆಯಲು ರಾಹುಲ್ ಗಾಂಧಿ ‘ಛಾತ್ರೋಂ ಕಿ ಗೂಂಜ್’ ಅಭಿಯಾನದ ಮೂಲಕ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದೊಂದಿಗೆ ಸಂವಾದ ನಡೆಸುತ್ತಿರುವ ಸಂದರ್ಭದಲ್ಲಿ, ಮೋದಿ ಕೂಡ ಸಾಮಾಜಿಕ ಜಾಲತಾಣದ ಮೂಲಕ Gen Z ಅನ್ನು ಗುರಿಯಾಗಿಸಿಕೊಂಡು ಸಂದೇಶ ನೀಡಿರುವುದು ಗಮನ ಸೆಳೆದಿದೆ.

ಮೋದಿ ವಿಡಿಯೊದಲ್ಲೇನಿದೆ?

ಸೋಮವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7.8ಕ್ಕೆ ಏರಿಕೆಯಾಗಿದೆ. ಈ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಅಂದಾಜು ಮಾಡಿದ್ದ ಬೆಳವಣಿಗೆ ದರಕ್ಕಿಂತಲೂ ಹೆಚ್ಚಿನ ಸಾಧನೆಯನ್ನು ದೇಶದ ಆರ್ಥಿಕತೆ ದಾಖಲಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ವಿಡಿಯೊವೊಂದನ್ನು ರಿಲೀಸ್‌ ಮಾಡಿದ್ದಾರೆ.

“ದೇಶದ ಜನರಿಗೆ ಅನೇಕ ಅಭಿನಂದನೆಗಳು. ಶೇ.7.8ರಷ್ಟು ಬೆಳವಣಿಗೆ ದಾಖಲಾಗಿದ್ದು, ದೇಶದಲ್ಲಿ ಸಂತಸ ಮೂಡಿದೆ. ಆದರೆ ಇದು ಕೇವಲ ಒಂದು ಅಂಕಿ-ಅಂಶವಲ್ಲ. ದೇಶದ ಜನರ ಸಂಕಲ್ಪಶಕ್ತಿ ಮತ್ತು ಪರಿಶ್ರಮಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ನಮ್ಮ ಸಾಮೂಹಿಕ ಶಕ್ತಿಯ ಪ್ರತಿಬಿಂಬ” ಎಂದು ಮೋದಿ ಹೇಳಿದ್ದಾರೆ.

ಯುದ್ಧ, ಬಿಕ್ಕಟ್ಟಿನ ನಡುವೆಯೂ ಭಾರತದ ಪ್ರಗತಿ

ಜಗತ್ತು ಯುದ್ಧದ ಪರಿಸ್ಥಿತಿಯಲ್ಲಿ ಸಿಲುಕಿದೆ. ಎಲ್ಲೆಡೆ ಯುದ್ಧದ ಸುದ್ದಿಗಳು ಕೇಳಿಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಹಲವು ಬಿಕ್ಕಟ್ಟುಗಳು ಎದುರಾಗಿದ್ದು, ಪೂರೈಕೆ ಸರಪಳಿಯೂ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

“2020ರಲ್ಲಿ ಕೋವಿಡ್‌ ಕಾಲದಿಂದ ಇಂದಿನವರೆಗೂ ಜಗತ್ತಿನಲ್ಲಿ ಎಲ್ಲಿಯೂ ಸ್ಥಿರತೆ ಕಂಡುಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ” ಎಂದು ಮೋದಿ ಹೇಳಿದ್ದಾರೆ.

ಜಾಗತಿಕ ಅನಿಶ್ಚಿತತೆ, ಯುದ್ಧದ ಪರಿಸ್ಥಿತಿ ಮತ್ತು ಪೂರೈಕೆ ಸರಪಳಿಯಲ್ಲಿನ ವ್ಯತ್ಯಯಗಳ ನಡುವೆಯೂ ಭಾರತದ ಆರ್ಥಿಕತೆ ತೋರಿಸಿರುವ ಸ್ಥಿರತೆ ದೇಶದ ಆರ್ಥಿಕ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Read More
Next Story