ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಯನ್ನಾಗಿ ರೂಪಿಸುವ ಗುರಿ – ಪ್ರಧಾನಿ ನರೇಂದ್ರ ಮೋದಿ
x

ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಯನ್ನಾಗಿ ರೂಪಿಸುವ ಗುರಿ – ಪ್ರಧಾನಿ ನರೇಂದ್ರ ಮೋದಿ

5 -15 ವರ್ಷದೊಳಗಿನ ಮಕ್ಕಳಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ರಾಷ್ಟ್ರವ್ಯಾಪಿ ಪ್ರತಿಭಾನ್ವೇಷಣೆ ನಡೆಯಲಿದೆ. ಮಗು ಯಾವುದರಲ್ಲಿ ಆಸಕ್ತಿ ಹೊಂದಿದೆ ಎಂಬುದನ್ನುಗುರುತಿಸುವ ಅಗತ್ಯ ಇದೆ.


Click the Play button to hear this message in audio format

ಭಾರತವನ್ನು 21ನೇ ಶತಮಾನದ ಪ್ರಮುಖ ಕ್ರೀಡಾ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರವು ಸಂಪೂರ್ಣ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಖೇಲೋ ಇಂಡಿಯಾ ಸಂವಾದ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರತಿಭೆಗಳಿಗೆ ಪ್ರತಿಯೊಂದು ಹಂತದಲ್ಲೂ ಬೆಂಬಲ ನೀಡುವಂತಹ ಆಧುನಿಕ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರತಿಪಾದಿಸಿದರು. ಕ್ರೀಡೆಯನ್ನು ಕೇವಲ ಪದಕಗಳನ್ನು ಗೆಲ್ಲುವ ಸಾಧನವಾಗಿ ನೋಡಬಾರದು. ಕ್ರೀಡೆಯು ಭಾರತದ ಯುವ ಶಕ್ತಿ ಮತ್ತು ಕ್ರೀಡಾ ಕೌಶಲ್ಯವನ್ನು ಒಂದುಗೂಡಿಸಿ, ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ಒಂದು ಮಹಾನ್ ಮಿಷನ್ ಆಗಿದೆ. ದೇಶದ ಪ್ರತಿಯೊಂದು ಜಿಲ್ಲೆಗೂ ಜಾಗತಿಕ ಕ್ರೀಡಾ ಭೂಪಟದಲ್ಲಿ ಮಿಂಚುವ ಸಾಮರ್ಥ್ಯವಿದೆ ಎಂದು ಹೇಳಿದರು.

5 ರಿಂದ 15 ವರ್ಷದೊಳಗಿನ ಪ್ರತಿಭೆಗಳ ಅನ್ವೇಷಣೆ

5 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಾನ್ವೇಷಣೆ ನಡೆಯಲಿದೆ. ಮಗು ಯಾವುದರಲ್ಲಿ ಆಸಕ್ತಿ ಹೊಂದಿದೆ ಎಂಬುದರ ಜತೆಗೆ, ಯಾವ ಕ್ರೀಡೆಗೆ ಆ ಮಗು ಹೆಚ್ಚು ಹೊಂದಿಕೆಯಾಗುತ್ತದೆ ಎಂಬುದನ್ನು ಗುರುತಿಸುವುದು ಅತ್ಯಗತ್ಯ. ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಇಂದು ಭಾರತದಲ್ಲಿ ಕ್ರೀಡೆಯು ಒಂದು ಅತ್ಯುತ್ತಮ ವೃತ್ತಿ ಅಥವಾ ಉದ್ಯೋಗವಾಗಿ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ. ಕ್ರೀಡೆಯು ಚಾಂಪಿಯನ್‌ಗಳನ್ನು ಮಾತ್ರವಲ್ಲದೆ, ಉತ್ತಮ ಸ್ಪರ್ಧಿಗಳನ್ನು ತಯಾರು ಮಾಡುತ್ತದೆ. ಖೇಲೋ ಇಂಡಿಯಾ ಸಂವಾದವು ಕೇವಲ ಚರ್ಚೆಯ ವೇದಿಕೆಯಲ್ಲ, ಬದಲಾಗಿ ಯುವಕರ ಹೊಸ ಆಲೋಚನೆಗಳು ದೇಶದ ಕ್ರೀಡಾ ದೃಷ್ಟಿಕೋನಕ್ಕೆ ಹೊಸ ದಿಕ್ಕನ್ನು ನೀಡುವ ವೇದಿಕೆಯಾಗಿದೆ ಎಂದರು.

ಕ್ರೀಡೆಯೇ ರಾಷ್ಟ್ರೀಯ ಆದ್ಯತೆ: ಮನ್ಸೂಖ್ ಮಾಂಡವೀಯ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕ್ರೀಡೆಯು ಈಗ ರಾಷ್ಟ್ರೀಯ ಆದ್ಯತೆಯಾಗಿ ಮತ್ತು ಯುವ ಸಬಲೀಕರಣದ ಪ್ರಮುಖ ಸಾಧನವಾಗಿ ಹೊರಹೊಮ್ಮಿದೆ. ಫಿಟ್ ಇಂಡಿಯಾ ಮೂವ್‌ಮೆಂಟ್ ಮತ್ತು ಸಂಡೇ ಆನ್ ಸೈಕಲ್ ನಂತಹ ಉಪಕ್ರಮಗಳು ಕ್ರೀಡಾ ಮೂಲಸೌಕರ್ಯಗಳನ್ನು ಮೀರಿ, ಸಾಮಾನ್ಯ ನಾಗರಿಕರ ದಿನಚರಿಯಲ್ಲಿ ದೈಹಿಕ ಫಿಟ್‌ನೆಸ್ ಅನ್ನು ಭಾಗವಾಗಿಸಿವೆ. ದೇಶದ ಕ್ರೀಡಾ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರಲು 'ನ್ಯಾಷನಲ್ ಸ್ಪೋರ್ಟ್ಸ್ ಗವರ್ನೆನ್ಸ್ ಆ್ಯಕ್ಟ್' ಜಾರಿಗೊಳಿಸಲಾಗುತ್ತಿದೆ. ಇದು ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಸರ್ಕಾರವು ಯುವಕರನ್ನು ವಿಕಸಿತ ಭಾರತದ ಪಯಣದ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ನುಡಿದರು.

ರಾಷ್ಟ್ರೀಯ ಕ್ರೀಡಾ ದಿನದ ಸಂಭ್ರಮ

ರಾಷ್ಟ್ರೀಯ ಕ್ರೀಡಾ ದಿನ 2026ರ ಅಂಗವಾಗಿ ಮೇರಾ ಯುವ ಭಾರತ್ ಆಯೋಜಿಸಿದ್ದ ಈ ಕಾರ್ಯಕ್ರಮವು ದೇಶಾದ್ಯಂತ ವ್ಯಾಪಕವಾಗಿ ನಡೆಯಿತು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿಯೊಂದು ಜಿಲ್ಲೆಯ ಎರಡು ಕಾಲೇಜುಗಳಲ್ಲಿ ಯುವಕರು ಭಾಗವಹಿಸುವ ಮೂಲಕ ಈ ಸಂವಾದಕ್ಕೆ ಸಾಕ್ಷಿಯಾದರು. ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂಸೇವೆ ಮತ್ತು ರಾಷ್ಟ್ರ ನಿರ್ಮಾಣದಂತಹ ವಿಷಯಗಳು ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಚರ್ಚಿಸಲ್ಪಟ್ಟವು. ಖೇಲೋ ಇಂಡಿಯಾ ಸಂವಾದದ ಮೂಲಕ ಯುವಕರು ನೇರವಾಗಿ ದೇಶದ ಕ್ರೀಡಾ ಮಹತ್ವಾಕಾಂಕ್ಷೆಗಳ ಜೊತೆ ಬೆರೆಯುವ ಅವಕಾಶ ಪಡೆದರು. ಈ ಸಂವಾದದಲ್ಲಿ ವ್ಯಕ್ತವಾದ ಯುವಕರ ಹೊಸ ಆಲೋಚನೆಗಳು ಮತ್ತು ದೃಷ್ಟಿಕೋನಗಳು, ಮುಂದಿನ ದಿನಗಳಲ್ಲಿ ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗಲಿವೆ.

Read More
Next Story