From Bhutan to Slovakia; PM Modis 100th foreign visit a success
x
ಪ್ರಧಾನಿ ನರೇಂದ್ರ ಮೋದಿ ವಿವಿಧ ದೇಶಗಳಿಗೆ ಭೇಟಿ ನೀಡಿದ ಅಪರೂಪದ ಚಿತ್ರಗಳು 

ಭೂತಾನ್‌ನಿಂದ ಸ್ಲೋವಾಕಿಯಾಕ್ಕೆ; ಪ್ರಧಾನಿ ಮೋದಿ 100ನೇ ವಿದೇಶಿ ಭೇಟಿ ಯಶಸ್ವಿ

ಕಳೆದ 12 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ಪ್ರಯಾಣಿಸಿದ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಮೋದಿ, ವಲಸಿಗರ ಸಂಪರ್ಕ ಮತ್ತು ಕಾರ್ಯತಂತ್ರವನ್ನು ದೇಶದ ವಿದೇಶಾಂಗ ನೀತಿಯ ಪ್ರಮುಖ ಆಧಾರಸ್ತಂಭಗಳನ್ನಾಗಿ ಮಾಡಿಕೊಂಡಿದ್ದಾರೆ.


Click the Play button to hear this message in audio format

ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಸ್ಲೋವಾಕಿಯಾ ದೇಶಗಳ ಯಶಸ್ವಿ ರಾಜತಾಂತ್ರಿಕ ಪ್ರವಾಸವನ್ನು ಮುಗಿಸಿ ರಾಜಧಾನಿ ನವದೆಹಲಿಗೆ ಮರಳಿದ್ದಾರೆ. ಈ ಭೇಟಿಯೊಂದಿಗೆ, 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿಯವರು ತಮ್ಮ 100 ನೇ ವಿದೇಶ ಪ್ರವಾಸದ ಮೈಲಿಗಲ್ಲನ್ನು ತಲುಪಿದ್ದಾರೆ.

ಕಳೆದ 12 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ಪ್ರಯಾಣಿಸಿದ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಮೋದಿ, ವಲಸಿಗರ ಸಂಪರ್ಕ ಮತ್ತು ಕಾರ್ಯತಂತ್ರವನ್ನು ದೇಶದ ವಿದೇಶಾಂಗ ನೀತಿಯ ಪ್ರಮುಖ ಆಧಾರಸ್ತಂಭಗಳನ್ನಾಗಿ ಮಾಡಿಕೊಂಡಿದ್ದಾರೆ.

ಮೂರು ಅವಧಿಗಳ ಪ್ರವಾಸದ ಲೆಕ್ಕಾಚಾರ

ಪ್ರಧಾನ ಮಂತ್ರಿ ಕಚೇರಿ (PMO) ನೀಡಿರುವ ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ ಸತತ ಮೂರು ಅವಧಿಗಳಲ್ಲಿ ಇದುವರೆಗೆ 78 ದೇಶಗಳಿಗೆ ಒಟ್ಟು 100 ಭೇಟಿಗಳನ್ನು ನೀಡಿದ್ದಾರೆ. ಮೊದಲ ಅವಧಿಯಲ್ಲಿ (2014-2019) 49 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದರು. ಅವರ ಮೊದಲ ಪ್ರವಾಸ ಜೂ. 2014 ರಲ್ಲಿ ಭೂತಾನ್‌ಗೆ ತೆರಳಿದ್ದರು. ಎರಡನೇ ಅವಧಿಯಲ್ಲಿ (2019-2024) 27 ವಿದೇಶಿ ಪ್ರವಾಸಗಳು ಹಾಗೂ ಮೂರನೇ ಅವಧಿ (2024 ರಿಂದ ಪ್ರಸ್ತುತ) ಕೇವಲ ಎರಡು ವರ್ಷಗಳಲ್ಲಿ ದಾಖಲೆಯ 24 ವಿದೇಶಗಳಿಗೆ ಭೇಟಿ ನೀಡಿದ್ದಾರೆ.

ಮುರಿದ ದಶಕಗಳ ಇತಿಹಾಸ

ದಶಕಗಳಿಂದ ಭಾರತೀಯ ನಾಯಕರು ಭೇಟಿ ನೀಡದ ಹಲವು ದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿ ರಾಜತಾಂತ್ರಿಕ ಬರಗಾಲವನ್ನು ಕೊನೆಗೊಳಿಸಿದ್ದಾರೆ. 1993 ರಲ್ಲಿ ದೇಶ ಸ್ವತಂತ್ರವಾದ ನಂತರ ಸ್ಲೋವಾಕಿಯಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಇದರೊಂದಿಗೆ ಇಸ್ರೇಲ್ (2017), ಮಂಗೋಲಿಯಾ (2015) ಮತ್ತು ಉಕ್ರೇನ್ (2024) ದೇಶಗಳಿಗೆ ಭೇಟಿ ನೀಡಿದ ಮೊದಲ ಪ್ರಧಾನಿ ಇವರಾಗಿದ್ದಾರೆ.

57 ವರ್ಷಗಳ ನಂತರದ ಭೇಟಿ

45 ವರ್ಷಗಳ ನಂತರ ಪೋಲೆಂಡ್, 41 ವರ್ಷಗಳ ನಂತರ ಆಸ್ಟ್ರಿಯಾ, 43 ವರ್ಷಗಳ ನಂತರ ನಾರ್ವೆ ಮತ್ತು 57 ವರ್ಷಗಳ ಸುದೀರ್ಘ ಅಂತರದ ನಂತರ ಅರ್ಜೆಂಟೀನಾಕ್ಕೆ ಭೇಟಿ ನೀಡಿದ ದಾಖಲೆ ಬರೆದಿದ್ದಾರೆ. ಅಲ್ಲದೆ, ಪ್ಯಾಲೆಸ್ಟೈನ್‌ಗೆ ಭೇಟಿ ನೀಡಿದ ಏಕೈಕ ಭಾರತೀಯ ಪ್ರಧಾನಿ ಇವರಾಗಿದ್ದಾರೆ.

ಶಿಷ್ಟಾಚಾರ ಬದಿಗಿಟ್ಟು ಜಾಗತಿಕ ಗೌರವ

ಪ್ರಧಾನಿ ಮೋದಿಯವರ ಭೇಟಿಯ ವೇಳೆ ಜಾಗತಿಕ ನಾಯಕರು ಹಲವು ಬಾರಿ ಶಿಷ್ಟಾಚಾರಗಳನ್ನು ಮುರಿದು ಗೌರವ ಸಲ್ಲಿಸಿದ್ದಾರೆ. ಪಪುವಾ ನ್ಯೂಗಿನಿಯಾದಲ್ಲಿ ಸೂರ್ಯಾಸ್ತದ ನಂತರ ಅಧಿಕೃತ ಸ್ವಾಗತ ನೀಡುವ ಸಂಪ್ರದಾಯವಿಲ್ಲದಿದ್ದರೂ, ಅಲ್ಲಿನ ಪ್ರಧಾನಿ ಜೇಮ್ಸ್ ಮರಾಪೆ ವಿಮಾನ ನಿಲ್ದಾಣಕ್ಕೆ ಬಂದು ಮೋದಿ ಅವರನ್ನು ಸ್ವಾಗತಿಸಿದ್ದರು. ಅಮೆರಿಕದಲ್ಲಿ ಬರಾಕ್ ಒಬಾಮಾ ಅವರು ಮೋದಿಯವರನ್ನು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸ್ಮಾರಕಕ್ಕೆ ಕರೆದೊಯ್ದರೆ, ಫ್ರಾನ್ಸ್‌ನ ನೈಸ್ ನಗರದ ಮೇಯರ್ ಸಿಟಿ ಹಾಲ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಗೌರವಿಸಿದ್ದರು.

ಹೆಚ್ಚು ಭೇಟಿ ನೀಡಿದ ದೇಶಗಳು

ಭಾರತದ ಕಾರ್ಯತಂತ್ರದ ಆದ್ಯತೆಗಳ ಭಾಗವಾಗಿ ಮೋದಿ ಅವರು ಅಮೆರಿಕ ಮತ್ತು ಫ್ರಾನ್ಸ್‌ಗೆ ತಲಾ 10 ಬಾರಿ ಹಾಗೂ ಜಪಾನ್ ಮತ್ತು ಯುಎಇ ದೇಶಗಳಿಗೆ ತಲಾ 8 ಬಾರಿ ಪ್ರಯಾಣಿಸಿದ್ದಾರೆ.

ವಿರೋಧ ಪಕ್ಷಗಳ ಟೀಕೆಯೇನು?

ವಿದೇಶಾಂಗ ಸಚಿವಾಲಯ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ, 2015 ರಿಂದ 2025 ರ ನಡುವೆ ಪ್ರಧಾನಿಯವರ ವಿದೇಶ ಪ್ರವಾಸಗಳಿಗಾಗಿ ಭಾರತ ಸರ್ಕಾರ ಸುಮಾರು 762 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದರಲ್ಲಿ ಅಮೆರಿಕ ಪ್ರವಾಸಕ್ಕೆ ಅತಿ ಹೆಚ್ಚು ವೆಚ್ಚವಾಗಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಈ ವ್ಯಾಪಕ ಪ್ರವಾಸಗಳನ್ನು ತೀವ್ರವಾಗಿ ಟೀಕಿಸಿವೆ. 100 ಕ್ಕೂ ಹೆಚ್ಚು ವಿದೇಶಿ ಭೇಟಿಗಳ ಹೊರತಾಗಿಯೂ, ನೆರೆಹೊರೆಯ ದೇಶಗಳೊಂದಿಗೆ ಭದ್ರತಾ ಉದ್ವಿಗ್ನತೆ ಹೆಚ್ಚಿರುವಾಗ ಭಾರತಕ್ಕೆ ನಿರೀಕ್ಷಿತ ಅಂತರರಾಷ್ಟ್ರೀಯ ಬೆಂಬಲ ಸಿಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ವಿಶೇಷವಾಗಿ, ಜಾಗತಿಕ ಆರ್ಥಿಕ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ಮೀಸಲನ್ನು ಉಳಿಸಲು "ಅನಿವಾರ್ಯವಲ್ಲದ ವಿದೇಶಿ ಪ್ರಯಾಣವನ್ನು ತಪ್ಪಿಸಿ" ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿರುವುದನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಚಾಟಿ ಬೀಸಿದ್ದಾರೆ. ಸ್ವತಃ 100 ಪ್ರವಾಸ ಮಾಡಿರುವ ಪ್ರಧಾನಿಗಳು ಜನರಿಗೆ ಹೀಗೆ ಹೇಳುವುದು "ವಿರೋಧಾಭಾಸ" ಎಂದು ವಿಪಕ್ಷಗಳು ಕಟುವಾಗಿ ಟೀಕಿಸಿವೆ.

ಸರ್ಕಾರದ ಸಮರ್ಥನೆ

ವಿಪಕ್ಷಗಳ ಟೀಕೆಗಳನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ಪ್ರಧಾನಿಯವರ ಈ ಭೇಟಿಗಳು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಬಲಪಡಿಸಿವೆ ಎಂದು ಸಮರ್ಥಿಸಿಕೊಂಡಿದೆ. ಈ ರಾಜತಾಂತ್ರಿಕತೆಯು ದೇಶಕ್ಕೆ ಬೃಹತ್ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ, ರಕ್ಷಣಾ ಸಹಕಾರವನ್ನು ಹೆಚ್ಚಿಸಿದೆ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತದ ಪ್ರಭಾವವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಸರ್ಕಾರ ಹೇಳಿದೆ.

Read More
Next Story