
PM Modi| ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲ್ಲ; ಇದು ನನ್ನ ಗ್ಯಾರಂಟಿ: ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭರವಸೆ
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯ ಅಥವಾ ಪ್ರಾಂತ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಭರವಸೆ ನೀಡಿದ್ದಾರೆ.
ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ (Delimitation) ಮತ್ತು ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂಬ ಬಲವಾದ ಭರವಸೆ ನೀಡಿದ್ದಾರೆ. "ಉತ್ತರವಿರಲಿ, ದಕ್ಷಿಣವಿರಲಿ ಅಥವಾ ಸಣ್ಣ ರಾಜ್ಯವಿರಲಿ, ದೊಡ್ಡ ರಾಜ್ಯವಿರಲಿ - ನಮ್ಮ ಪ್ರಕ್ರಿಯೆಯಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ಇದು ಕೇವಲ ಮಾತಲ್ಲ, ನನ್ನ ಗ್ಯಾರಂಟಿ!
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವ ಪಕ್ಷಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ, "ಕೆಲವರು ಕೇವಲ ರಾಜಕೀಯ ಲಾಭಕ್ಕಾಗಿ ಆತಂಕ ಸೃಷ್ಟಿಸುತ್ತಿದ್ದಾರೆ. ಈ ಪವಿತ್ರ ಸದನದಲ್ಲಿ ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ, ಈ ಪ್ರಕ್ರಿಯೆಯು ಯಾರ ವಿರುದ್ಧವೂ ತಾರತಮ್ಯ ಮಾಡುವುದಿಲ್ಲ. ನಿಮಗೆ 'ಗ್ಯಾರಂಟಿ' ಎಂಬ ಪದ ಬೇಕಿದ್ದರೆ, ನಾನು ಅದನ್ನು ನೀಡಲು ಸಿದ್ಧ; ನಿಮಗೆ 'ಭರವಸೆ' ಬೇಕಿದ್ದರೆ ಅದನ್ನೂ ನೀಡುತ್ತೇನೆ. ನನ್ನ ಉದ್ದೇಶ ಸ್ಪಷ್ಟವಾಗಿದೆ," ಎಂದು ಮಾರ್ಮಿಕವಾಗಿ ಹೇಳಿದರು.
ಅನುಪಾತದಲ್ಲಿ ಬದಲಾವಣೆ ಇರುವುದಿಲ್ಲ
ಹಳೆಯ ಕ್ಷೇತ್ರ ಮರುವಿಂಗಡಣೆ ಸಮಯದಲ್ಲಿ ಅನುಸರಿಸಲಾದ ಅನುಪಾತಗಳಲ್ಲೇ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ ಎಂದು ಮೋದಿ ತಿಳಿಸಿದರು. ಯಾವುದೇ ಪ್ರಾಂತ್ಯ ಅಥವಾ ವಿಭಾಗಕ್ಕೆ ಇದರಿಂದ ಹಾನಿಯಾಗದಂತೆ ಸಮಾನತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಅವರು ಪುನರುಚ್ಚರಿಸಿದರು.
ವಿರೋಧ ಪಕ್ಷಗಳಿಗೆ ಎಚ್ಚರಿಕೆ
ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಪಕ್ಷಗಳಿಗೆ ಇತಿಹಾಸದ ಉದಾಹರಣೆ ನೀಡಿದ ಪ್ರಧಾನಿ, "ಹಿಂದೆ ಯಾರು ಈ ಮಸೂದೆಯನ್ನು ವಿರೋಧಿಸಿದ್ದರೋ, ಅವರನ್ನು ದೇಶದ ಮಹಿಳೆಯರು ಕ್ಷಮಿಸಿಲ್ಲ. ಅವರು ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಆದ್ದರಿಂದ ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ, ದೇಶದ ಹಿತದೃಷ್ಟಿಯಿಂದ ಬೆಂಬಲಿಸಿ," ಎಂದು ಮನವಿ ಮಾಡಿದರು.
ಚರ್ಚೆಯಲ್ಲಿರುವ ಪ್ರಮುಖ ಮಸೂದೆಗಳು
ಗುರುವಾರ ಲೋಕಸಭೆಯಲ್ಲಿ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದ್ದು, ಮಹಿಳಾ ಮೀಸಲಾತಿ ಕಾನೂನಿನಲ್ಲಿ ಬದಲಾವಣೆ ತರುವ ಸಂವಿಧಾನದ 131ನೇ ತಿದ್ದುಪಡಿ ಮಸೂದೆ, ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಗಾಗಿ ಕ್ಷೇತ್ರ ಮರುವಿಂಗಡಣೆ ಮಸೂದೆ (Delimitation Bill) ಹಾಗೂ ದೆಹಲಿ, ಪುದುಚೇರಿ ಮತ್ತು ಜಮ್ಮು ಕಾಶ್ಮೀರದಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಗಳನ್ನು ಮಂಡಿಸಲಾಯಿತು. ಸದನದಲ್ಲಿ ನಡೆದ ತೀವ್ರ ಚರ್ಚೆ ಮತ್ತು ಮತದಾನದ ನಂತರ, 131ನೇ ತಿದ್ದುಪಡಿ ಮಸೂದೆಯ ಪರವಾಗಿ 251 ಸದಸ್ಯರು ಮತ ಚಲಾಯಿಸಿದರೆ, 185 ಸದಸ್ಯರು ವಿರುದ್ಧವಾಗಿ ಮತ ಹಾಕಿದರು. ಈ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಮಹತ್ವದ ಶಾಸನಾತ್ಮಕ ಪ್ರಕ್ರಿಯೆಗಳಿಗೆ ಲೋಕಸಭೆಯಲ್ಲಿ ಚಾಲನೆ ಸಿಕ್ಕಂತಾಗಿದೆ.

