
Parliament Session 2026 |ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ನʼಪಾಸುʼ; ಕೇಂದ್ರಕ್ಕೆ ಮುಖಭಂಗ
ವಿರೋಧ ಪಕ್ಷಗಳು ಅಪರೂಪದ ಮತ ವಿಭಜನೆಗೆ ಒತ್ತಾಯಿಸಿವೆ, ಕ್ಷೇತ್ರ ಮರುಹಂಚಿಕೆ ಆಧಾರಿತ ಕಾನೂನುಗಳ ವಿರುದ್ಧ ಒಗ್ಗಟ್ಟಿನ ಹೋರಾಟದ ಸೂಚನೆ ನೀಡಿವೆ.
ಸಂಸತ್‌ನ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ಮಂಡನೆಯಾಗಿದ್ದು, ಸದನದಲ್ಲಿ ಈ ವಿಧೇಯಕಕ್ಕೆ ಸೋಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ.
ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬಲು ಕೇಂದ್ರ ಸರ್ಕಾರ ಈ ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿತ್ತು. ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಈ ಬಿಲ್ ಫೇಲ್ ಆಗಿದೆ.
ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ಬಗ್ಗೆ ಪರ ವಿರೋಧ ಚರ್ಚೆಯಾಗಿತ್ತು. ಸಂಸತ್ ನಲ್ಲಿ ನಡೆದ ಚರ್ಚೆಯಲ್ಲಿ ಪ್ರತಿಪಕ್ಷಗಳು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಸದನದ ಎರಡನೇ ಮೂರರಷ್ಟು ಬಹುಮತ ಬೇಕಾಗಿದ್ದು, ವಿಧೇಯಕ ಪಾಸ್ ಆಗಲು 360 ಮತಗಳು ಬೇಕು. ಆಡಳಿತ ರೂಢ ಎನ್‌ಡಿಎ 293 ಸದಸ್ಯರಿದ್ದು, ವಿರೋಧ ಪಕ್ಷವಾದ ಕಾಂಗ್ರೇಸ್ ನೇತೃತ್ವದ ಇಂಡಿ ಒಕ್ಕೂಟದ 234 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮೀಸಲಾತಿ ಕಾನೂನಿನ ತಿದ್ದುಪಡಿ ಮತ್ತು ಕ್ಷೇತ್ರ ಪುನರ್ವಿಂಗಡಣಾ ಆಯೋಗದ ರಚನೆಗೆ ಸಂಬಂಧಿಸಿದ ಮೂರು ವಿಧೇಯಕಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಹಾಸ್ಯಭರಿತವಾಗಿ ವಾಗ್ದಾಳಿ ನಡೆಸಿದರು.
ಪ್ರಿಯಾಂಕಾ ಗಾಂಧಿ ಅವರ ಮಾತುಗಳು
ಅಮಿತ್ ಶಾ ಅವರತ್ತ ನೋಡಿ ನಗುತ್ತಾ ಮಾತನಾಡಿದ ಪ್ರಿಯಾಂಕಾ, "ಗೃಹ ಸಚಿವರು ನಗುತ್ತಿದ್ದಾರೆ. ಅವರು ಇಡೀ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಒಂದು ವೇಳೆ ಚಾಣಕ್ಯ ಇಂದು ಬದುಕಿದ್ದರೆ, ನಿಮ್ಮ ಈ ರಾಜಕೀಯ ಚತುರತೆ (ಕುಟಿಲತೆ) ಕಂಡು ಅವರೂ ಸಹ ಬೆಚ್ಚಿಬೀಳುತ್ತಿದ್ದರು" ಎಂದು ತಮಾಷೆಯಾಗಿ ಚುಚ್ಚಿದರು. "ಅವರು (ಶಾ) ಇಡೀ ಯೋಜನೆಯನ್ನು ರೂಪಿಸಿದ್ದಾರೆ ಮತ್ತು ಈಗ ನಗುತ್ತಿದ್ದಾರೆ. ಅವರು ನನ್ನ ಮಾತನ್ನು ಒಪ್ಪುತ್ತಾರೆ ಎಂಬುದು ಅವರ ನಗು ನೋಡಿದರೆ ತಿಳಿಯುತ್ತದೆ" ಎಂದರು. ಪ್ರಿಯಾಂಕಾ ಅವರ ಈ 'ಚಾಣಕ್ಯ' ಕಾಮೆಂಟ್‌ಗೆ ಅಮಿತ್ ಶಾ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸದೆ ಮುಗುಳ್ನಕ್ಕರು.
ಮಸೂದೆಯ ಬಗ್ಗೆ ಪ್ರಿಯಾಂಕಾ ಎತ್ತಿದ ಪ್ರಶ್ನೆಗಳು:
ನಂತರ ಮಸೂದೆಯ ಗಂಭೀರ ಅಂಶಗಳ ಬಗ್ಗೆ ಮಾತನಾಡಿದ ಅವರು ಸರ್ಕಾರದ ರಾಜಕೀಯ ಉದ್ದೇಶವನ್ನು ಪ್ರಶ್ನಿಸಿದರು. 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣಾ ಆಯೋಗದ ಮೂಲಕ ಲೋಕಸಭೆಯ ಸೀಟುಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಇದು ಮೇಲ್ನೋಟಕ್ಕೆ ಸರಿ ಎನಿಸಿದರೂ, ಒಳಗಿನ ಅರ್ಥ ಓದಿದಾಗ ಇದರಲ್ಲಿ ರಾಜಕೀಯದ ವಾಸನೆ ಬಡಿಯುತ್ತಿದೆ ಎಂದು ಅವರು ಆರೋಪಿಸಿದರು.
ತಕ್ಷಣದ ಮೀಸಲಾತಿಗೆ ಆಗ್ರಹ:
"ಇಂದೇ ಇರುವ 543 ಲೋಕಸಭಾ ಸ್ಥಾನಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಯಾಕೆ ಸಾಧ್ಯವಿಲ್ಲ? ಅನಗತ್ಯ ಕ್ಷೇತ್ರ ಪುನರ್ವಿಂಗಡಣೆ ಮಾಡದೆ ಇಂದೇ ಈ ಮೀಸಲಾತಿಯನ್ನು ಜಾರಿಗೆ ತರಬಹುದು" ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಪ್ರಾಮಾಣಿಕತೆಯ ಕೊರತೆ
ಪ್ರಧಾನಮಂತ್ರಿಯವರು ಈ ಐತಿಹಾಸಿಕ ಹೆಜ್ಜೆಯನ್ನು ಪ್ರಾಮಾಣಿಕವಾಗಿ ಇಟ್ಟಿದ್ದರೆ ಇಡೀ ಸದನ ಅದನ್ನು ಬೆಂಬಲಿಸುತ್ತಿತ್ತು. ಆದರೆ ಮಸೂದೆಯ ಸಣ್ಣ ಅಕ್ಷರಗಳನ್ನು ಓದಿದಾಗ, ಮೂವರು ಸದಸ್ಯರ ಕ್ಷೇತ್ರ ಪುನರ್ವಿಂಗಡಣಾ ಆಯೋಗವು ರಾಜ್ಯಗಳ ಭವಿಷ್ಯ ಮತ್ತು ಸಂಸತ್ತಿನಲ್ಲಿ ಅವುಗಳ ಪ್ರಾತಿನಿಧ್ಯವನ್ನು ನಿರ್ಧರಿಸಲಿದೆ ಎಂಬುದು ತಿಳಿಯುತ್ತದೆ ಎಂದು ಕಿಡಿಕಾರಿದರು.
"ಒಂದೆಡೆ ಮಹಿಳಾ ಮೀಸಲಾತಿಯ ಬಗ್ಗೆ ದೊಡ್ಡದಾಗಿ ಮಾತನಾಡಲಾಗುತ್ತಿದೆ, ಇನ್ನೊಂದೆಡೆ ಒಬಿಸಿ (OBC) ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಸಣ್ಣ ರಾಜ್ಯಗಳ ಪ್ರಭಾವವನ್ನು ಕುಗ್ಗಿಸುವ ಮೂಲಕ ಪ್ರಜಾಪ್ರಭುತ್ವವನ್ನು ತುಂಡು ಮಾಡಿ ಮುಂದಿನ ಚುನಾವಣೆಗೆ ಭದ್ರ ಬುನಾದಿ ಹಾಕಿಕೊಳ್ಳಲಾಗುತ್ತಿದೆ" ಎಂದು ಪ್ರಿಯಾಂಕಾ ಗಾಂಧಿ ಗಂಭೀರವಾಗಿ ಆರೋಪಿಸಿದರು.
ಒಟ್ಟಾರೆಯಾಗಿ, ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಮತ್ತು ದೇಶದ ಸಮಗ್ರತೆಯ ಮೇಲೆ ದಾಳಿ ಮಾಡುತ್ತಿದೆ ಎಂದು ಅವರು ತಮ್ಮ ಭಾಷಣದಲ್ಲಿ ದೂರಿದರು.
Live Updates
- 17 April 2026 1:27 PM IST
ಮಹಿಳಾ ಮೀಸಲಾತಿ ಮಸೂದೆ 'ಪ್ರಜಾಪ್ರಭುತ್ವದ ಮೇಲಿನ ದಾಳಿ': ಕೇಂದ್ರದ ವಿರುದ್ಧ ಸಂಸದ ಕಲ್ಯಾಣ್ ಬ್ಯಾನರ್ಜಿ ಕಿಡಿ
ಪಾರ್ಲಿಮೆಂಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದು, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳನ್ನು 'ಪ್ರಜಾಪ್ರಭುತ್ವದ ಮೇಲಿನ ದಾಳಿ' ಎಂದು ಕರೆದಿದ್ದಾರೆ.
ಕೇಂದ್ರದ ಈ ನಡೆಯು ಕೇವಲ ಚುನಾವಣಾ ತಂತ್ರಗಾರಿಕೆಯ ಒಂದು ಭಾಗವಾಗಿದ್ದು, ಜನರ ಭಾವನೆಗಳೊಂದಿಗೆ ಆಟವಾಡಲು ಮಹಿಳಾ ಮೀಸಲಾತಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಮತ್ತು ಸೀಟುಗಳ ಮರುಹೊಂದಾಣಿಕೆ ಮಾಡುವುದೇ ಈ ಮಸೂದೆಗಳ ಹಿಂದಿರುವ ನೈಜ ಉದ್ದೇಶವಾಗಿದೆ. ಒಂದು ವೇಳೆ ಕೇಂದ್ರಕ್ಕೆ ಪ್ರಾಮಾಣಿಕ ಉದ್ದೇಶವಿದ್ದರೆ, ಈಗಿರುವ ಸೀಟುಗಳಲ್ಲೇ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡುವ ಸ್ವತಂತ್ರ ಮಸೂದೆಯನ್ನು ತರಲಿ, ಅದಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಬಿಜೆಪಿಯ ಒಳಗಡೆ ಮಹಿಳೆಯರಿಗೆ ಇರುವ ಪ್ರಾತಿನಿಧ್ಯದ ಬಗ್ಗೆಯೂ ಪ್ರಶ್ನಿಸಿದ ಅವರು, ಉತ್ತರ ಪ್ರದೇಶದ ಚುನಾವಣೆಯಲ್ಲಿ ಶೇಕಡಾ 50 ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯ ಬಿಜೆಪಿಗೆ ಇದೆಯೇ ಎಂದು ಪ್ರಶ್ನಿಸಿದರು. ಅಲ್ಲದೆ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವಾಗ ಇಂತಹ ಮಸೂದೆಗಳನ್ನು ಮಂಡಿಸಿರುವುದು ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುವ ಉದ್ದೇಶ ಹೊಂದಿದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಚುನಾವಣೆ ನಡೆಯುವಾಗ ಇಂತಹ ತುರ್ತು ಇರುವುದಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸದರು, ಈ ಹಿಂದೆ ಹೊಸ ಜನಗಣತಿಯ ಆಧಾರದ ಮೇಲೆ ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈಗ 2011ರ ಹಳೆಯ ಜನಗಣತಿಯನ್ನು ಆಧರಿಸಿರುವುದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ. ಕೇವಲ ಮೀಸಲಾತಿಯ ಮಾತುಗಳನ್ನಾಡುವ ಬದಲು ಸಂಸತ್ತು, ಸಚಿವ ಸಂಪುಟ ಮತ್ತು ಸ್ಪೀಕರ್ ಸ್ಥಾನದಲ್ಲೂ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಲು ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ತಿದ್ದುಪಡಿಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕಾಯಿದೆಯ ಅಧಿಸೂಚನೆ ಹೊರಡಿಸಿರುವುದು ಸಂಸತ್ತಿನ ಮರ್ಯಾದೆಯನ್ನು ಹರಾಜು ಹಾಕಿದಂತೆ ಎಂದು ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- 17 April 2026 12:10 PM IST
ಕ್ಷೇತ್ರ ಮರುವಿಂಗಡಣೆಯಿಂದ ಮಹಿಳಾ ಮೀಸಲಾತಿ ಬೇರ್ಪಡಿಸಿ: ಕೇಂದ್ರಕ್ಕೆ ಶಶಿ ತರೂರ್ ಆಗ್ರಹ
ಮಹಿಳಾ ಮೀಸಲಾತಿ ಜಾರಿಯನ್ನು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯೊಂದಿಗೆ ಬೆಸೆದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಟೀಕಿಸಿದ್ದಾರೆ. ದೇಶದಲ್ಲಿ ಮಹಿಳಾ ಮೀಸಲಾತಿ ಪರವಾಗಿ ಸರ್ವಾನುಮತದ ಒಪ್ಪಿಗೆಯಿದ್ದರೂ, ಸರ್ಕಾರವು ಅದನ್ನು `ಜನಸಂಖ್ಯಾಶಾಸ್ತ್ರದ ಗಣಿ'ಯಂತಿರುವ ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಕ್ಷೇತ್ರ ಮರುವಿಂಗಡಣೆಯು ದೇಶದ ರಾಜಕೀಯ ಅಧಿಕಾರ ರಚನೆಯಲ್ಲಿ ದೊಡ್ಡ ಬದಲಾವಣೆ ತರಲಿದ್ದು, ಇದರಿಂದ ಉತ್ತರ ಮತ್ತು ದಕ್ಷಿಣದ ರಾಜ್ಯಗಳ ನಡುವೆ ರಾಜಕೀಯ ಅಂತರ ಹೆಚ್ಚಾಗಬಹುದು ಎಂದು ತರೂರ್ ಎಚ್ಚರಿಸಿದ್ದಾರೆ. ಮುಖ್ಯವಾಗಿ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ಈ ಮರುವಿಂಗಡಣೆಯಿಂದ ಅನ್ಯಾಯವಾಗುವ ಸಾಧ್ಯತೆಯಿದೆ ಮತ್ತು ಇದು ಆರ್ಥಿಕವಾಗಿಯೂ ಸಣ್ಣ ರಾಜ್ಯಗಳ ಪಾಲಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ನಿಲುವನ್ನು ಮರುಪರಿಶೀಲಿಸಬೇಕು ಮತ್ತು ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯಿಂದ ಕೂಡಲೇ ಬೇರ್ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಯ ಕುರಿತು ಜಂಟಿ ಸಂಸದೀಯ ಸಮಿತಿಯ ಮೂಲಕ ಪ್ರತ್ಯೇಕವಾಗಿ ಮತ್ತು ವಿವರವಾಗಿ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದ ಅವರು, ಸದ್ಯ ಇರುವ ಲೋಕಸಭೆ ಮತ್ತು ವಿಧಾನಸಭೆಗಳ ಸದಸ್ಯ ಬಲದ ಆಧಾರದ ಮೇಲೆ ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
- 17 April 2026 11:55 AM IST
ಮಹಿಳಾ ಮೀಸಲಾತಿ ಮಸೂಧೆ ‘ರಾಜಕೀಯ ತಂತ್ರ’: ಕನಿಮೊಳಿ ವಾಗ್ದಾಳಿ
ಮಹಿಳಾ ಮೀಸಲಾತಿ ಮಸೂದೆಯ ಕುರಿತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಕನಿಮೊಳಿ, ಈ ವಿಧೇಯಕಗಳನ್ನು ಚುನಾವಣೆಗಳ ಮಧ್ಯೆ ರಾಜಕೀಯ ಲಾಭಕ್ಕಾಗಿ ತರಲಾಗಿದೆಯೇ ಹೊರತು ಮಹಿಳೆಯರಿಗೆ ನ್ಯಾಯ ಒದಗಿಸುವ ಉದ್ದೇಶದಿಂದಲ್ಲ ಎಂದು ಟೀಕಿಸಿದರು. ಕಳೆದ ಒಂದು ದಶಕದಿಂದ ಈ ಬಗ್ಗೆ ಯಾವುದೇ ತುರ್ತು ತೋರದ ಸರ್ಕಾರ, ಈಗ ಕೆಲವು ದಿನಗಳ ಕಾಲವೂ ಕಾಯಲಾಗದಷ್ಟು ಅವಸರದಲ್ಲಿರುವುದು ಅವರ 'ಚುನಾವಣಾ ರಕ್ಷಣಾ ತಂತ್ರ'ವನ್ನು ಎತ್ತಿ ತೋರಿಸುತ್ತದೆ ಮತ್ತು ಹಿಂದಿ ಭಾಷಿಕ ರಾಜ್ಯಗಳ ಮೂಲಕ ರಾಜಕೀಯ ಲಾಭ ಪಡೆಯುವ ಉದ್ದೇಶ ಇದಕ್ಕಿದೆ ಎಂದು ಅವರು ಆರೋಪಿಸಿದರು. ಒಂದು ವೇಳೆ ಸರ್ಕಾರದ ಉದ್ದೇಶ ಪ್ರಾಮಾಣಿಕವಾಗಿದ್ದರೆ, ಈಗಿರುವ ಕ್ಷೇತ್ರಗಳಲ್ಲೇ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಬಹುದಿತ್ತು ಎಂದು ಪ್ರಶ್ನಿಸಿದ ಅವರು, ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ಲೋಕಸಭಾ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದು ದಕ್ಷಿಣದ ರಾಜ್ಯಗಳ ಪ್ರಭಾವವನ್ನು ಕುಗ್ಗಿಸುತ್ತದೆ ಮತ್ತು ಹಿಂದಿ ರಾಜ್ಯಗಳ ಸಂಖ್ಯಾಬಲದ ಮೂಲಕ ಸಂವಿಧಾನಕ್ಕೆ ತಿದ್ದುಪಡಿ ತರುವುದನ್ನು ಕೇಂದ್ರಕ್ಕೆ ಸುಲಭವಾಗಿಸುತ್ತದೆ ಎಂದು ಕನಿಮೊಳಿ ಎಚ್ಚರಿಸಿದರು.


