
ದೆಹಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡನೆ; ಕೇಂದ್ರ ಸರ್ಕಾರ ಕ್ಷಮೆ ಕೇಳಬೇಕು; ಪಾಫ್ರ ಆಗ್ರಹ
ಕೇಂದ್ರ ಸರ್ಕಾರ ವಿದ್ಯಾರ್ಥಿ-ಯುವಜನರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಅಸಂವಿಧಾನಿಕ ಹಾಗೂ ಅಪ್ರಜಾಸತ್ತಾತ್ಮಕ ಕ್ರಮಕ್ಕೆ ಮುಂದಾಗಿದೆ ಎಂದು ಶಿಕ್ಷಣ ಕ್ಷೇತ್ರದ ಪರಿಣತರು ಆರೋಪಿಸಿದ್ದಾರೆ.
ದೆಹಲಿಯಲ್ಲಿ ನೀಟ್ ಪರೀಕ್ಷೆ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಸಂಸತ್ತಿನತ್ತ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್, ದೈಹಿಕ ಹಲ್ಲೆ ಹಾಗೂ ಅಶ್ರುವಾಯು ದಾಳಿಯನ್ನು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಾಫ್ರೆ, ಕೇಂದ್ರ ಸರ್ಕಾರ ವಿದ್ಯಾರ್ಥಿ-ಯುವಜನರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಅಸಂವಿಧಾನಿಕ ಹಾಗೂ ಅಪ್ರಜಾಸತ್ತಾತ್ಮಕ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದೆ.
ನೀಟ್ ರದ್ದು ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
ಪಾಫ್ರೆ ಹೇಳಿಕೆಯ ಪ್ರಕಾರ, ನೀಟ್ ಪರೀಕ್ಷೆ ನಿರ್ವಹಣೆಯಲ್ಲಿ ಉಂಟಾಗಿರುವ ಗೊಂದಲ ಮತ್ತು ಅಕ್ರಮಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಹಾಗೂ ರಾಜಕೀಯ ಮತ್ತು ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಮಾತುಕತೆಗೆ ಬದಲು ಬಲಪ್ರಯೋಗ ನಡೆಸಿದ ಸರ್ಕಾರ: ಆರೋಪ
ಶಾಂತಿಯುತ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಹಾಗೂ ಇತರ ವಿದ್ಯಾರ್ಥಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸುವ ಬದಲು, ಕೇಂದ್ರ ಸರ್ಕಾರ ದೆಹಲಿಯಲ್ಲಿ ಬೃಹತ್ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದೆ ಎಂದು ಪಾಫ್ರೆ ಆರೋಪಿಸಿದೆ.
ಬ್ಯಾರಿಕೇಡ್‌ಗಳನ್ನು ನಿರ್ಮಿಸುವುದು, ಮೆಟ್ರೋ ನಿಲ್ದಾಣಗಳನ್ನು ಮುಚ್ಚುವುದು, ಇಂಟರ್ನೆಟ್ ಹಾಗೂ ದೂರವಾಣಿ ಸಂಪರ್ಕವನ್ನು ಸ್ಥಗಿತಗೊಳಿಸುವುದು ಮತ್ತು ವಿವಿಧ ಹಂತಗಳಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿ ನಡೆಸಿರುವುದು ಸಂವಿಧಾನ ವಿರೋಧಿ ನಡೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಪ್ರಕರಣ ದಾಖಲಿಸುವ ಬೆದರಿಕೆ ಅಮಾನವೀಯ
ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ನಡೆಸಿದ ಬಳಿಕ ಅವರ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಬೆದರಿಕೆ ಹಾಕುತ್ತಿರುವುದು ದಬ್ಬಾಳಿಕೆಯ ಪರಮಾವಧಿಯಾಗಿದೆ ಎಂದು ಪಾಫ್ರೆ ಟೀಕಿಸಿದೆ.
ಈ ಬರ್ಬರ ಕೃತ್ಯದ ಸಂಪೂರ್ಣ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊತ್ತುಕೊಳ್ಳಬೇಕು. ಜೊತೆಗೆ ದೇಶದ ಪ್ರಧಾನಿ ವಿದ್ಯಾರ್ಥಿಗಳು ಮತ್ತು ಯುವಜನರ ಬಳಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ದೇಶವ್ಯಾಪಿ ಪ್ರತಿಭಟನೆಗೆ ಕರೆ
ದೆಹಲಿ ಪೊಲೀಸರ ಕ್ರಮವನ್ನು ವಿರೋಧಿಸಿ ದೇಶದ ಪ್ರಜ್ಞಾವಂತ ನಾಗರಿಕರು ವ್ಯಾಪಕ ಪ್ರತಿಭಟನೆ ನಡೆಸುವ ಮೂಲಕ ವಿದ್ಯಾರ್ಥಿ-ಯುವಜನರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪಾಫ್ರೆ ಕರೆ ನೀಡಿದೆ.
ಶಿಕ್ಷಣದ ಕೇಂದ್ರೀಕರಣ, ಖಾಸಗೀಕರಣ, ವಾಣಿಜ್ಯೀಕರಣ, ಭ್ರಷ್ಟಾಚಾರ ಹಾಗೂ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸುತ್ತಿರುವ ಕೋಚಿಂಗ್ ಮಾಫಿಯಾದ ವಿರುದ್ಧ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದೆ.
ಎನ್‌ಇಪಿ 2020 ವಿರುದ್ಧ ಹೋರಾಟ ಬಲಪಡಿಸಲು ಮನವಿ
ರಾಷ್ಟ್ರೀಯ ಶಿಕ್ಷಣ ನೀತಿ (NEP-2020)ಯಲ್ಲಿ ಜಾರಿಗೆ ತಂದಿರುವ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಹೋರಾಟವನ್ನು ಇನ್ನಷ್ಟು ಬಲಪಡಿಸಬೇಕೆಂದು ಪಾಫ್ರೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳಿಗೆ ಮನವಿ ಮಾಡಿದೆ.
ಹೇಳಿಕೆಗೆ ಸಹಿ ಹಾಕಿದ ಪ್ರಮುಖರು
ಪತ್ರಿಕಾ ಪ್ರಕಟಣೆಗೆ ಪಾಫ್ರೆ ಪ್ರಧಾನ ಸಂಚಾಲಕ ಪ್ರೊ. ನಿರಂಜನಾರಾಧ್ಯ ವಿ.ಪಿ., ಎಐಟಿಯುಸಿ ಅಧ್ಯಕ್ಷ ಪ್ರೊ. ಬಾಬು ಮಾಥ್ಯು, ಎಐಪಿಟಿಎಫ್ ಅಧ್ಯಕ್ಷ ಬಸವರಾಜ ಗುರಿಕಾರ, ರೈತ ಮುಖಂಡ ವೀರಸಂಗಯ್ಯ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟದ ಎಂ. ಜಯಮ್ಮ, ಎಸ್‌ಡಿಎಮ್‌ಸಿಸಿಎಫ್ ಅಧ್ಯಕ್ಷ ಉಮೇಶ್ ದೊಡ್ಡಗಂಗವಾಡಿ, ಬಿಜಿವಿಎಸ್‌ನ ಎಫ್.ಸಿ. ಚೇಗಾ ರೆಡ್ಡಿ ಹಾಗೂ ಶುಭಂಕರ್ ಚಕ್ರವರ್ತಿ, ವಿದ್ಯಾರ್ಥಿ-ಪಾಲಕರ ಸಮನ್ವಯ ವೇದಿಕೆಯ ಯೋಗಾನಂದ ಬಿ.ಎನ್., ಎಐಎಸ್‌ಎಫ್ ರಾಜ್ಯಾಧ್ಯಕ್ಷೆ ಕುಮಾರಿ ವೀಣ ಎಲ್.ವೈ., ಎಐಎಸ್‌ಎ ರಾಜ್ಯ ಸಂಚಾಲಕಿ ಲೇಖ ಅಡವಿ, ಪ್ರಬುದ್ಧ ಫೌಂಡೇಶನ್‌ನ ಸೌಮ್ಯಾ ಕೆ.ಆರ್., ಫೋರ್ತ್ವೇವ್ ಫೌಂಡೇಶನ್‌ನ ಜಿ. ರವಿ ಹಾಗೂ ಸಮ-ಸಮಾಜದ ಗೆಳೆಯರ ಬಳಗದ ಗಂಗಾಧರ್ ಸಹಿ ಹಾಕಿದ್ದಾರೆ.

