
ನಿಸ್ವಾರ್ಥ ಸೇವೆಯ ಸಂಭ್ರಮ: ಪದ್ಮ ಪ್ರಶಸ್ತಿಗಳ ಮೂಲಕ ಸಾಧಕರಿಗೆ ಸನ್ಮಾನ
ಸಮಾರಂಭದಲ್ಲಿ ಒಟ್ಟು 65 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ ಎರಡು ಪದ್ಮ ವಿಭೂಷಣ, ಏಳು ಪದ್ಮ ಭೂಷಣ ಮತ್ತು 56 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.
ಭಾರತೀಯ ಸಂಸ್ಕೃತಿ, ಕಲೆ, ಕ್ರೀಡೆ, ಸಮಾಜ ಸೇವೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಿದರು.
ಪದ್ಮ ಪ್ರಶಸ್ತಿ ಸಮಾರಂಭವು ಕೇವಲ ಪ್ರಶಸ್ತಿ ಪ್ರದಾನಕ್ಕೆ ಸೀಮಿತವಾಗದೆ, ದೇಶದ ವಿವಿಧ ಮೂಲೆಗಳಿಂದ ಬಂದ ಅಪ್ರತಿಮ ಸಾಧಕರ ಕಥೆಗಳನ್ನು ಪರಿಚಯಿಸುವ ವೇದಿಕೆಯಾಯಿತು. ಈ ಬಾರಿಯ ಸಮಾರಂಭದಲ್ಲಿ ಒಟ್ಟು 65 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ ಎರಡು ಪದ್ಮ ವಿಭೂಷಣ, ಏಳು ಪದ್ಮ ಭೂಷಣ ಮತ್ತು 56 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.
ಸಾರ್ವಜನಿಕ ವ್ಯವಹಾರಗಳಲ್ಲಿನ ಸೇವೆಗಾಗಿ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಮತ್ತು ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ನೀಡಿ ಗೌರವಿಸಲಾಯಿತು. ಗಾಯಕಿ ಅಲ್ಕಾ ಯಾಗ್ನಿಕ್, ಮಲಯಾಳಂ ನಟ ಮಮ್ಮೂಟ್ಟಿ, ಅಮೆರಿಕದ ಆಂಕೊಲಜಿಸ್ಟ್ ದತ್ತಾತ್ರೇಯುಡು ನೋರಿ, ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್, ಕೈಗಾರಿಕೋದ್ಯಮಿ ಎಸ್.ಕೆ.ಎಂ. ಮೈಲಾನಂದನ್ ಮತ್ತು ಸಮಾಜ ಸೇವಕ ವೆಲ್ಲಪ್ಪಳ್ಳಿ ನಟೇಶನ್ ಅವರು ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದರು. ಜೆಎಂಎಂ ಸ್ಥಾಪಕ ದಿವಂಗತ ಶಿಬು ಸೊರೆನ್ ಅವರ ಪರವಾಗಿ ಅವರ ಪತ್ನಿ ರೂಪಾ ಸೊರೆನ್ ಅವರು ಪದ್ಮ ಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಕ್ರೀಡಾ ಲೋಕದ ತಾರೆಯರಾದ ರೋಹಿತ್ ಶರ್ಮಾ ಮತ್ತು ಹಾಕಿ ಆಟಗಾರ್ತಿ ಸವಿತಾ ಪುನಿಯಾ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು. ಭಾರತೀಯ ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್ ಮತ್ತು ರವಿ ದಹಿಯಾ ಅವರಿಗೆ ತರಬೇತಿ ನೀಡಿದ್ದ ಜಾರ್ಜಿಯಾದ ಕೋಚ್ ವ್ಲಾಡಿಮಿರ್ ಮೆಸ್ತ್ವಿರಿಶ್ವಿಲಿ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ಅವರ ಪತ್ನಿ ಸ್ವೀಕರಿಸಿದರು.
ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಅಸಂಖ್ಯಾತ ಸಾಧಕರ ಮಿಂಚು
ಸಮಾರಂಭದಲ್ಲಿ ಗಮನ ಸೆಳೆದ ಪ್ರಮುಖ ಅಂಶವೆಂದರೆ, ಸಾಂಪ್ರದಾಯಿಕ ಉಡುಗೆತೊಡುಗೆಯಲ್ಲಿ ಬಂದಿದ್ದ ಸಾಧಕರು. ನಾಗಾಲ್ಯಾಂಡ್‌ನ 83 ವರ್ಷದ ಜಾನಪದ ಕಲಾವಿದ ಮತ್ತು ಸಾಂಸ್ಕೃತಿಕ ರಕ್ಷಕ ಗುರು ಸನ್ಯುಸಾಂಗ್ ಪೊಂಗೆನರ್ ಅವರು ತಮ್ಮ ಸಾಂಪ್ರದಾಯಿಕ ನಾಗಾ ಉಡುಗೆಯಲ್ಲಿ ವೇದಿಕೆಗೆ ಬಂದಾಗ ಇಡೀ ಸಭೆಯೇ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿತು. ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಅವರ ಸಾಂಸ್ಕೃತಿಕ ನಿಷ್ಠೆಯನ್ನು ಕೊಂಡಾಡಿದರು. ಅಂತೆಯೇ, ನಕ್ಸಲ್ ಪೀಡಿತ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ ಬುಧರಿ ತಾಟಿ ಅವರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲೇ ವೇದಿಕೆಗೆ ಆಗಮಿಸಿ ಗಮನ ಸೆಳೆದರು.
ಸಿನಿಮಾ ಹಾಗೂ ಇತರ ಕ್ಷೇತ್ರಗಳ ಸಾಧಕರು
ಹಿಂದಿ ಚಲನಚಿತ್ರ ರಂಗದ ನಟ ಸತೀಶ್ ಶಾ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. 'ಯೇ ಜೋ ಹೈ ಜಿಂದಗಿ', 'ಸಾರಾಭಾಯ್ vs ಸಾರಾಭಾಯ್' ನಂತಹ ಜನಪ್ರಿಯ ಸರಣಿಗಳ ಮೂಲಕ ಮನೆಮಾತಾಗಿದ್ದ ಅವರ ಪರವಾಗಿ ಅವರ ಸಹೋದರ ಪ್ರಶಸ್ತಿ ಸ್ವೀಕರಿಸಿದರು. ನಟ ಆರ್. ಮಾಧವನ್, ಬಾಹ್ಯಾಕಾಶ ವಿಜ್ಞಾನಿ ಚಂದ್ರಮೌಳಿ ಗಡ್ಡಮನುಗು, ದಲಿತ ಚಮ್ಮಾರ ಕುಟುಂಬದಿಂದ ಬಂದು ಯಶಸ್ವಿ ಉದ್ಯಮಿಯಾಗಿ ಬೆಳೆದ ಅಶೋಕ್ ಖಾಡೆ, ಮತ್ತು ರೈಲ್ವೇ ಗಾರ್ಡ್ ಆಗಿ ಕೆಲಸ ಮಾಡುತ್ತಲೇ ಸಾಹಿತ್ಯ ಕೃಷಿ ಮಾಡಿದ ಅಶೋಕ್ ಕುಮಾರ್ ಹಲ್ದಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು 'ಎಕ್ಸ್' ನಲ್ಲಿ ಪ್ರತಿಕ್ರಿಯಿಸಿ, ಪದ್ಮ ಪ್ರಶಸ್ತಿಗಳು ವಿವಿಧ ಕ್ಷೇತ್ರಗಳಲ್ಲಿನ ಅಸಾಧಾರಣ ಸೇವೆ ಮತ್ತು ಸಮರ್ಪಣಾ ಮನೋಭಾವವನ್ನು ಸಂಭ್ರಮಿಸುತ್ತವೆ. ಪ್ರತಿಯೊಬ್ಬ ಪ್ರಶಸ್ತಿ ವಿಜೇತರು ಸಮಾಜಕ್ಕೆ ನಾವು ನೀಡುವ ಕೊಡುಗೆಯ ಅತ್ಯುತ್ತಮ ಸಂಕೇತವಾಗಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ, ಪದ್ಮ ಪ್ರಶಸ್ತಿಗಳು ಇಂದು ನೈಜ ಬದಲಾವಣೆ ತರುವ ಗುರುತಿಸಲ್ಪಡದ ಸಾಧಕರು ಅವರನ್ನು ಗೌರವಿಸುವ ವೇದಿಕೆಯಾಗಿ ಬದಲಾಗಿವೆ. ಇದು ಜನಸಾಮಾನ್ಯರನ್ನು ದೇಶದ ಬದಲಾವಣೆಯಲ್ಲಿ ಪಾಲುದಾರರನ್ನಾಗಿ ಮಾಡುತ್ತಿದೆ" ಎಂದರು. ಗೃಹ ಸಚಿವರು ಈ ಸಾಧಕರಿಗಾಗಿ ವಿಶೇಷ ಔತಣಕೂಟವನ್ನೂ ಏರ್ಪಡಿಸಿದ್ದರು.
ಭಾರತದ ಪದ್ಮ ಪ್ರಶಸ್ತಿಗಳು ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ, ಎಂಜಿನಿಯರಿಂಗ್, ವ್ಯಾಪಾರ, ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಹಾಗೂ ಕ್ರೀಡೆಯಂತಹ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ನೀಡುವ ಅತ್ಯುನ್ನತ ನಾಗರಿಕ ಗೌರವಗಳಾಗಿವೆ. ಜ. 26ರಂದು ಒಟ್ಟು 131 ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಮೇ 25 ರಂದು ಮೊದಲ ಹಂತದಲ್ಲಿ 65 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು, ಉಳಿದ 65 ಪ್ರಶಸ್ತಿಗಳನ್ನು ಈ ಎರಡನೇ ಹಂತದ ಸಮಾರಂಭದಲ್ಲಿ ಪ್ರದಾನ ಮಾಡಲಾಗಿದೆ.

