ಒರಾಕಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ; ‘ಇಂದೇ ಕೊನೆಯ ಕೆಲಸದ ದಿನ’ ಎಂದು ಉದ್ಯೋಗಿಗಳಿಗೆ ಇ-ಮೇಲ್
x

ಒರಾಕಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ; ‘ಇಂದೇ ಕೊನೆಯ ಕೆಲಸದ ದಿನ’ ಎಂದು ಉದ್ಯೋಗಿಗಳಿಗೆ ಇ-ಮೇಲ್

ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ಕೇಂದ್ರಗಳಿಗೆ ಭಾರಿ ಹೂಡಿಕೆ ಮಾಡುತ್ತಿರುವ ಒರಾಕಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ ಆರಂಭವಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 21 ಸಾವಿರ ಉದ್ಯೋಗ ಕಡಿತಗೊಂಡಿತ್ತು.


Click the Play button to hear this message in audio format

ಕೃತಕ ಬುದ್ಧಿಮತ್ತೆ ಹಾಗೂ ಕ್ಲೌಡ್‌ ಟೆಕ್ನಾಲಜಿ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಡೇಟಾ ಸೆಂಟರ್‌ಗಳ ಮೂಲಸೌಕರ್ಯ ವಿಸ್ತರಣೆಗೆ ಕೋಟ್ಯಂತರ ಡಾಲರ್ ಹೂಡಿಕೆ ಮಾಡುತ್ತಿರುವ ಒರಾಕಲ್ ಸಂಸ್ಥೆ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

ಬಿಸಿನೆಸ್ ಇನ್‌ಸೈಡರ್ ವರದಿ ಪ್ರಕಾರ, ಸೋಮವಾರ ಬೆಳಗಿನ ಜಾವ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಲಾಗಿದ್ದು, ಸಂಸ್ಥೆಯಲ್ಲಿನ ವ್ಯಾಪಕ ಪುನರ್‌ರಚನೆಯ ಭಾಗವಾಗಿ ಅವರ ಹುದ್ದೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ. ಉದ್ಯೋಗ ಕಡಿತಕ್ಕೆ ಒಳಗಾದ ಕೆಲವರು ಲಿಂಕ್ಡ್‌ಇನ್, ರೆಡ್ಡಿಟ್ ಮತ್ತು ಬ್ಲೈಂಡ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಆದರೆ ಈ ಬಾರಿ ಎಷ್ಟು ಮಂದಿ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬುದನ್ನು ಒರಾಕಲ್ ಬಹಿರಂಗಪಡಿಸಿಲ್ಲ. ಆಂತರಿಕವಾಗಿ ಕಳುಹಿಸಲಾದ ಸೂಚನೆಯ ಪ್ರಕಾರ, ‘ವ್ಯಾಪಕ ಸಾಂಸ್ಥಿಕ ಬದಲಾವಣೆ’ಯ ಭಾಗವಾಗಿ ಉದ್ಯೋಗಿಗಳ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಅಲ್ಲದೆ, ಸೂಚನೆ ಬಂದ ದಿನವೇ ಅವರ ಕೊನೆಯ ಕೆಲಸದ ದಿನವಾಗಿತ್ತು ಎಂದು ವರದಿ ತಿಳಿಸಿದೆ.

ಕೃತಕ ಬುದ್ಧಿಮತ್ತೆ ಮೂಲಸೌಕರ್ಯಕ್ಕೆ ಭಾರಿ ಹೂಡಿಕೆ

ಒರಾಕಲ್‌ನಲ್ಲಿ ಉದ್ಯೋಗ ಕಡಿತ ನಡೆಯುತ್ತಿರುವ ಸಮಯದಲ್ಲೇ ಸಂಸ್ಥೆ ಕೃತಕ ಬುದ್ಧಿಮತ್ತೆ ಹಾಗೂ ಕ್ಲೌಡ್‌ ಸೇವೆಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದತ್ತಾಂಶ ಕೇಂದ್ರಗಳ ಮೂಲಸೌಕರ್ಯ ವಿಸ್ತರಣೆಗೆ ಭಾರಿ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿದೆ.

2027ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒರಾಕಲ್ 28.5 ಬಿಲಿಯನ್ ಡಾಲರ್‌ ಬಂಡವಾಳ ವೆಚ್ಚ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಂಸ್ಥೆಯ ಬಂಡವಾಳ ವೆಚ್ಚ 8.5 ಬಿಲಿಯನ್ ಡಾಲರ್‌ ಆಗಿತ್ತು. ಅಂದರೆ ಒಂದೇ ವರ್ಷದಲ್ಲಿ ಹೂಡಿಕೆ ಮೂರು ಪಟ್ಟು ಹೆಚ್ಚಾಗಿದೆ. ಡೇಟಾ ಸೆಂಟರ್‌ ಮತ್ತು ಕೃತಕ ಬುದ್ಧಿಮತ್ತೆ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ವೇಗಗೊಳಿಸಿರುವ ಒರಾಕಲ್, ಇಡೀ ಹಣಕಾಸು ವರ್ಷದಲ್ಲಿ 90ರಿಂದ 95 ಬಿಲಿಯನ್ ಡಾಲರ್‌ ಬಂಡವಾಳ ವೆಚ್ಚ ಮಾಡುವ ತನ್ನ ಅಂದಾಜನ್ನೂ ಮುಂದುವರಿಸಿದೆ.

ಕೃತಕ ಬುದ್ಧಿಮತ್ತೆ ಆಧಾರಿತ ಕ್ಲೌಡ್‌ ಸರ್ವಿಸ್‌ಗಳಿಗೂ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ತ್ರೈಮಾಸಿಕದಲ್ಲಿ 30 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಹೆಚ್ಚುವರಿ ಕೃತಕ ಬುದ್ಧಿಮತ್ತೆ ಕ್ಲೌಡ್‌ ಸರ್ವಿಸ್‌ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಒರಾಕಲ್ ತಿಳಿಸಿದೆ. ಇದರೊಂದಿಗೆ ಸಂಸ್ಥೆಯ ಬಾಕಿ ಕಾರ್ಯನಿರ್ವಹಣಾ ಬಾಧ್ಯತೆಗಳ ಒಟ್ಟು ಮೌಲ್ಯ, ಅಂದರೆ ಒಪ್ಪಂದದಡಿ ಭವಿಷ್ಯದಲ್ಲಿ ಬರಲಿರುವ ಆದಾಯದ ಮೊತ್ತ, 664 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

ಈಗಾಗಲೇ 21 ಸಾವಿರ ಉದ್ಯೋಗ ಕಡಿತ

ಪ್ರಸ್ತುತ ನಡೆದಿರುವ ಉದ್ಯೋಗ ಕಡಿತವು ಒರಾಕಲ್‌ನಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಉದ್ಯೋಗ ಕಡಿತದ ಮುಂದುವರಿದ ಭಾಗವಾಗಿದೆ. 2026ರ ಮೇ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಒರಾಕಲ್‌ನ ಜಾಗತಿಕ ಉದ್ಯೋಗಿಗಳ ಸಂಖ್ಯೆ ಸುಮಾರು 21 ಸಾವಿರದಷ್ಟು, ಅಂದರೆ ಶೇ.13ರಷ್ಟು ಕಡಿಮೆಯಾಗಿದೆ.

ಸಂಸ್ಥೆಯ ವಾರ್ಷಿಕ ವರದಿ ಪ್ರಕಾರ, ಆ ಅವಧಿಯ ಅಂತ್ಯದಲ್ಲಿ ಒರಾಕಲ್‌ನಲ್ಲಿ ಸುಮಾರು 1.41 ಲಕ್ಷ ಉದ್ಯೋಗಿಗಳು ಇದ್ದರು. ಹಿಂದಿನ ವರ್ಷ ಈ ಸಂಖ್ಯೆ ಸುಮಾರು 1.62 ಲಕ್ಷವಾಗಿತ್ತು. 2026ರ ಹಣಕಾಸು ವರ್ಷದಲ್ಲಿ ಪುನರ್‌ರಚನೆಗೆ ಸಂಬಂಧಿಸಿದ ಪರಿಹಾರಧನ ಮತ್ತು ಇತರ ನಿರ್ಗಮನ ವೆಚ್ಚಗಳಿಗಾಗಿ ಒರಾಕಲ್ ಸುಮಾರು 1.84 ಬಿಲಿಯನ್ ಡಾಲರ್‌ ಖರ್ಚು ಮಾಡಿದೆ. ಹಿಂದಿನ ವರ್ಷ ಈ ವೆಚ್ಚ 374 ಮಿಲಿಯನ್ ಡಾಲರ್‌ ಆಗಿತ್ತು.

ಸಂಸ್ಥೆಯ ಕಾರ್ಯಾಚರಣೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಅಳವಡಿಕೆ ಹೆಚ್ಚುತ್ತಿರುವುದು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕ್ರಮಕ್ಕೆ ಒಂದು ಕಾರಣವಾಗಿದೆ ಎಂದು ಒರಾಕಲ್ ಈ ಹಿಂದೆ ತಿಳಿಸಿತ್ತು.

Read More
Next Story