
ಖಾತೆದಾರರು ಖುದ್ದಾಗಿ ಬರಬೇಕೆಂಬ ಬ್ಯಾಂಕ್ ನಿಯಮಕ್ಕೆ ಬೇಸತ್ತು, ವ್ಯಕ್ತಿಯೊಬ್ಬರು ತಮ್ಮ ಮೃತ ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತು ತಂದ ಘಟನೆ ಓಡಿಶಾದಲ್ಲಿ ನಡೆದಿದೆ.
ಹಣಕ್ಕಾಗಿ ಮೃತ ಸಹೋದರಿಯ ಅಸ್ಥಿಪಂಜರವನ್ನು ಬ್ಯಾಂಕ್‌ಗೆ ತಂದ!
20,000 ರೂ. Odisha Bank Incidentಹಣ ನೀಡದ ಬ್ಯಾಂಕ್ ಅಧಿಕಾರಿಗಳ ನಡೆಗೆ ಬೇಸತ್ತು, ಮೃತ ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತು ತಂದಿದ್ದಾರೆ.
ಓಡಿಶಾದ ಕಿಯೋಂಜಹರ್ ಜಿಲ್ಲೆಯ ಪಾಟ್ನಾ ಬ್ಲಾಕ್ ವ್ಯಾಪ್ತಿಯ ಮಾಲಿಪೋಸಿ ಎಂಬಲ್ಲಿರುವ ಓಡಿಶಾ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಅಮಾನವೀಯ ಹಾಗೂ ಮನಕಲಕುವ ಘಟನೆಯೊಂದು ನಡೆದಿದೆ. ತನ್ನ ಮೃತ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಹರಸಾಹಸ ಪಟ್ಟ ವ್ಯಕ್ತಿಯೊಬ್ಬರು, ಕೊನೆಗೆ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತು ತರುವ ಮೂಲಕ ತಮ್ಮ ಆಕ್ರೋಶ ಮತ್ತು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ದಿಯಾನಾಲಿ ಗ್ರಾಮದ ನಿವಾಸಿ ಜೀತು ಮುಂಡಾ ಎಂಬುವವರ ಸಹೋದರಿ ಕಾಲ್ರಾ ಮುಂಡಾ ಕಳೆದ ಜನವರಿ 26 ರಂದು ನಿಧನರಾಗಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ಸುಮಾರು 20,000 ರೂಪಾಯಿ ಹಣವಿತ್ತು. ಜೀವನೋಪಾಯಕ್ಕಾಗಿ ಆ ಹಣದ ಅವಶ್ಯಕತೆಯಿದ್ದ ಜೀತು ಮುಂಡಾ ಹಲವಾರು ಬಾರಿ ಬ್ಯಾಂಕ್‌ಗೆ ಅಲೆದಿದ್ದರು. ಆದರೆ ಅಜ್ಞಾನ ಮತ್ತು ಅನಕ್ಷರತೆಯ ಕಾರಣದಿಂದ ಅವರಿಗೆ ಬ್ಯಾಂಕ್ ನಿಯಮಗಳು ಅರ್ಥವಾಗಿರಲಿಲ್ಲ. ಪ್ರತಿ ಬಾರಿ ಅವರು ಬ್ಯಾಂಕ್‌ಗೆ ಹೋದಾಗಲೂ ಅಧಿಕಾರಿಗಳು 'ಹಣ ಪಡೆಯಬೇಕಾದರೆ ಖಾತೆದಾರರು ಖುದ್ದಾಗಿ ಬರಬೇಕು' ಎಂದು ಹೇಳುತ್ತಿದ್ದರು ಎನ್ನಲಾಗಿದೆ. ತನ್ನ ಸಹೋದರಿ ಮೃತಪಟ್ಟಿರುವುದಾಗಿ ಅವರು ಪದೇ ಪದೇ ಹೇಳಿದರೂ ಬ್ಯಾಂಕ್ ಸಿಬ್ಬಂದಿ ಅದನ್ನು ಪರಿಗಣಿಸಿರಲಿಲ್ಲ.
ಬ್ಯಾಂಕ್ ಅಧಿಕಾರಿಗಳ ಈ ಹಠಮಾರಿತನದಿಂದ ಬೇಸತ್ತ ಜೀತು ಮುಂಡಾ, ಅಂತಿಮವಾಗಿ ಸ್ಮಶಾನಕ್ಕೆ ಹೋಗಿ ಹೂತುಹಾಕಿದ್ದ ತನ್ನ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಹೊರತೆಗೆದಿದ್ದಾರೆ. ನಂತರ ಆ ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ ನೇರವಾಗಿ ಬ್ಯಾಂಕ್‌ಗೆ ತಂದು ಅಧಿಕಾರಿಗಳ ಮುಂದೆ ಇಟ್ಟಿದ್ದಾರೆ. "ಖಾತೆದಾರರನ್ನು ಕರೆತನ್ನಿ ಎಂದು ಹೇಳುತ್ತಿದ್ದರಲ್ಲವೇ? ಈಗ ಇವರೇ ಖಾತೆದಾರರು, ಹಣ ಕೊಡಿ" ಎಂದು ಕೇಳಿದಾಗ ಬ್ಯಾಂಕ್ ಸಿಬ್ಬಂದಿ ಮತ್ತು ಅಲ್ಲಿಗೆ ಬಂದಿದ್ದ ಸಾರ್ವಜನಿಕರು ಆತಂಕಕ್ಕೊಳಗಾದರು.
ಮಾಹಿತಿ ತಿಳಿದ ಪಾಟ್ನಾ ಪೊಲೀಸರು ತಕ್ಷಣ ಬ್ಯಾಂಕ್‌ಗೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಕುರಿತು ಮಾತನಾಡಿದ ಪೊಲೀಸ್ ನಿರೀಕ್ಷಕ ಕಿರಣ್ ಪ್ರಸಾದ್ ಸಾಹು ಅವರು, ಇದೊಂದು ಸಂವಹನದ ಕೊರತೆಯಿಂದ ನಡೆದ ಘಟನೆಯಾಗಿದೆ ಎಂದು ತಿಳಿಸಿದ್ದಾರೆ.
ಜೀತು ಮುಂಡಾ ಒಬ್ಬ ಅನಕ್ಷರಸ್ಥ ಆದಿವಾಸಿ ವ್ಯಕ್ತಿಯಾಗಿದ್ದು, ಅವರಿಗೆ ವಾರಸುದಾರರ ಪ್ರಮಾಣಪತ್ರ ಅಥವಾ ನಾಮಿನಿಯಂತಹ ಕಾನೂನು ಪ್ರಕ್ರಿಯೆಗಳ ಬಗ್ಗೆ ಅರಿವಿರಲಿಲ್ಲ. ಬ್ಯಾಂಕ್ ಅಧಿಕಾರಿಗಳು ಕೂಡ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಸ್ಥಳೀಯ ಆಡಳಿತವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು, ಜೀತು ಮುಂಡಾ ಅವರಿಗೆ ಬರಬೇಕಾದ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಬ್ಯಾಂಕ್‌ಗೆ ಸೂಚನೆ ನೀಡಿದೆ. ಪೊಲೀಸರ ಸಮ್ಮುಖದಲ್ಲಿ ಸಹೋದರಿಯ ಅಸ್ಥಿಪಂಜರವನ್ನು ಮತ್ತೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.

