ಭಾರಿ ಮಳೆಗೆ ತ್ರಿಪುರ ತತ್ತರ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ಮಾಣಿಕ್‌ ಸಾಹಾ ಪರಿಶೀಲನೆ
x

ಸಂತ್ರಸ್ತರ ಭೇಟಿ ಮಾಡಿದ ಸಿಎಂ ಮಾಣಿಕ್ ಸಾಹಾ

ಭಾರಿ ಮಳೆಗೆ ತ್ರಿಪುರ ತತ್ತರ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ಮಾಣಿಕ್‌ ಸಾಹಾ ಪರಿಶೀಲನೆ

ಭಾರಿ ಮಳೆಯ ಪರಿಣಾಮ ಅಗರ್ತಲಾ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಹಾಗೂ ತೀವ್ರ ಜಲಾವೃತ ಪರಿಸ್ಥಿತಿ ವರದಿಯಾಗಿದೆ. ಉಪವಿಭಾಗೀಯ ಆಡಳಿತ, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ಸಕ್ರಿಯವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.


Click the Play button to hear this message in audio format

ತ್ರಿಪುರದಲ್ಲಿ ನಿರಂತರ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಭಾನುವಾರ ಸಂಜೆ ಅಗರ್ತಲಾದ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಜನರ ಸ್ಥಿತಿಗತಿ ಹಾಗೂ ಸ್ಥಳೀಯ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬರ್ಡೋವಾಲಿಯ ವಿವೇಕಾನಂದ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಶಿಬಿರಕ್ಕೂ ಸಿಎಂ ಭೇಟಿ ನೀಡಿದರು. ಪ್ರವಾಹದಿಂದ ಮನೆ ತೊರೆದು ಶಿಬಿರದಲ್ಲಿ ಆಶ್ರಯ ಪಡೆದಿರುವ ಕುಟುಂಬಗಳೊಂದಿಗೆ ಮಾತನಾಡಿ ಅವರ ಆರೋಗ್ಯ ಹಾಗೂ ಅಗತ್ಯಗಳ ಬಗ್ಗೆ ವಿಚಾರಿಸಿದರು. ಶಿಬಿರದಲ್ಲಿ ಸರ್ಕಾರದಿಂದ ಒದಗಿಸಲಾಗುತ್ತಿರುವ ಆಹಾರ, ಆಶ್ರಯ ಸೇರಿದಂತೆ ವಿವಿಧ ನೆರವು ವ್ಯವಸ್ಥೆಗಳನ್ನೂ ಪರಿಶೀಲಿಸಿದರು.

ಪ್ರವಾಹ ಪೀಡಿತರಿಗೆ ಅಗತ್ಯವಿರುವ ಎಲ್ಲ ಆಡಳಿತಾತ್ಮಕ ನೆರವು ನೀಡಲಾಗುವುದು. ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಗಮನಿಸುತ್ತಿದ್ದು, ಜನರ ಸುರಕ್ಷತೆ ಹಾಗೂ ಪರಿಹಾರ ಕಾರ್ಯಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಣಿಕ್ ಸಾಹಾ ಭರವಸೆ ನೀಡಿದರು.

ಹೌರಾ ನದಿಯಲ್ಲಿ ಅಪಾಯದ ಮಟ್ಟ ಮೀರಿದ ನೀರು

ಈ ನಡುವೆ, ಕೇಂದ್ರ ಜಲ ಆಯೋಗ (CWC) ತ್ರಿಪುರದ ಪಶ್ಚಿಮ ತ್ರಿಪುರ ಜಿಲ್ಲೆಯ ಹೌರಾ ನದಿಗೆ ಪ್ರವಾಹದ ಎಚ್ಚರಿಕೆ ನೀಡಿದೆ. ನದಿಯಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು, ತೀವ್ರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದೆ. ಬೆಳಗ್ಗೆ 8 ಗಂಟೆಗೆ ಹೌರಾ ನದಿಯ ನೀರಿನ ಮಟ್ಟ 10.72 ಮೀಟರ್‌ಗೆ ತಲುಪಿತ್ತು. ನದಿಯ ಅಪಾಯದ ಮಟ್ಟ 10.70 ಮೀಟರ್ ಆಗಿದ್ದು, ಇದೀಗ 0.02 ಮೀಟರ್‌ನಷ್ಟು ಹೆಚ್ಚಾಗಿದೆ. ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಪ್ರವೃತ್ತಿ ಮುಂದುವರಿದಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.

ಅಗರ್ತಲಾದ ಹಲವು ಕಡೆ ಜಲಾವೃತ

ಭಾರಿ ಮಳೆಯ ಪರಿಣಾಮ ಅಗರ್ತಲಾ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಹಾಗೂ ತೀವ್ರ ಜಲಾವೃತ ಪರಿಸ್ಥಿತಿ ವರದಿಯಾಗಿದೆ. ಜನರ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ಉಪವಿಭಾಗೀಯ ಆಡಳಿತ, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಪರಿಹಾರ ಒದಗಿಸುವುದು ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಕಾರ್ಯ ನಡೆಯುತ್ತಿದೆ.

Read More
Next Story