
ಸಿಕ್ಕಿಂನ ಎನ್‌ಎಚ್‌ಪಿಸಿ ತೀಸ್ತಾ-VI ಜಲವಿದ್ಯುತ್ ಯೋಜನೆಯ ಸುರಂಗ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ.
ಸಿಕ್ಕಿಂ ಸುರಂಗ ದುರಂತ: 7 ಮಂದಿ ಸಾವು, ಭರದಿಂದ ಸಾಗಿದ ರಕ್ಷಣಾ ಕಾರ್ಯ
ಸಿಕ್ಕಿಂನ ಎನ್‌ಎಚ್‌ಪಿಸಿ ತೀಸ್ತಾ-VI ಜಲವಿದ್ಯುತ್ ಯೋಜನೆಯ ಸುರಂಗ ಕುಸಿದು 7 ಮಂದಿ ಮೃತಪಟ್ಟಿದ್ದಾರೆ. ಸುರಂಗದೊಳಗೆ ಸಿಲುಕಿರುವ ಹಲವು ಕಾರ್ಮಿಕರ ರಕ್ಷಣೆಗೆ NDRF ಕಾರ್ಯಾಚರಣೆ ಮುಂದುವರಿದಿದೆ.
ಸಿಕ್ಕಿಂನ ನಾಮ್ಚಿ ಜಿಲ್ಲೆಯ ಸಮರ್‌ಡುಂಗ್‌ನ ಜೊಲುಂಗೇಯಲ್ಲಿ ನಿರ್ಮಾಣ ಹಂತದಲ್ಲಿದ್ದ ಎನ್‌ಎಚ್‌ಪಿಸಿ ತೀಸ್ತಾ ಸ್ಟೇಜ್ VI ಜಲವಿದ್ಯುತ್ ಯೋಜನೆಯ ಸುರಂಗ ಕುಸಿದು ಏಳು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಸೋಮವಾರ ಮಧ್ಯಾಹ್ನ (ಜುಲೈ 20) ಸುರಂಗದೊಳಗೆ ಸಂಭವಿಸಿದ ಶಂಕಿತ ವಿಷಕಾರಿ ಅನಿಲ ಸೋರಿಕೆಯಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಅನಿಲ ಸೋರಿಕೆಯ ಪರಿಣಾಮ ಕಾರ್ಮಿಕರು ಒಳಗೆಯೇ ಸಿಲುಕಿಕೊಂಡಿದ್ದು, ತಕ್ಷಣವೇ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ಆದರೆ ದುರಂತಕ್ಕೆ ನಿಖರವಾದ ಕಾರಣ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಮೃತದೇಹಗಳು ಆಸ್ಪತ್ರೆಗೆ ರವಾನೆ
ಜಿಲ್ಲಾಡಳಿತದ ಮಾಹಿತಿಯಂತೆ, ದುರಂತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಸಿಂಗ್‌ತಮ್ ಜಿಲ್ಲಾ ಆಸ್ಪತ್ರೆ, ಗ್ಯಾಂಗ್‌ಟಾಕ್‌ನ ಎಸ್‌ಟಿಎನ್‌ಎಮ್ ಆಸ್ಪತ್ರೆ ಹಾಗೂ ನಾಮ್ಚಿ ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ಹೊರತರಲು ರಕ್ಷಣಾ ಪಡೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಕನಿಷ್ಠ 12 ರಿಂದ 27 ಕಾರ್ಮಿಕರು ಒಳಗೆ ಸಿಲುಕಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದು, ಅವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹೊರತರುವ ಕಾರ್ಯಾಚರಣೆ ಮುಂದುವರಿದಿದೆ.
ನಾಮ್ಚಿ ಜಿಲ್ಲಾಡಳಿತದ ನೇತೃತ್ವದಲ್ಲಿ ಎನ್‌ಎಚ್‌ಪಿಸಿ ಅಧಿಕಾರಿಗಳು, ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF), ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ಸಿಕ್ಕಿಂ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SSDMA) ಇಡೀ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ.
ಕಾರ್ಮಿಕರ ಸಂಖ್ಯೆಯ ಬಗ್ಗೆ ಗೊಂದಲ
ನಾಮ್ಚಿ ಜಿಲ್ಲಾಧಿಕಾರಿ ಅನುಪಿ ತಮ್ಲಿಂಗ್ ಅವರು ಮಾತನಾಡಿ, ಸುರಂಗದೊಳಗೆ ಪ್ರಸ್ತುತ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಸುಮಾರು 27 ಕಾರ್ಮಿಕರು ಒಳಗೆ ಸಿಲುಕಿರುವ ಸಾಧ್ಯತೆಯಿದೆ. ಆದರೆ, ಸುರಂಗದ ಒಳಗಿನ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಇನ್ನೂ ಸಿಗದ ಕಾರಣ ನಿಖರ ಸಂಖ್ಯೆಯನ್ನು ತಕ್ಷಣವೇ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್ ತಂಡವು ಸುರಂಗದೊಳಗೆ ಪ್ರವೇಶಿಸಿದ್ದು, ಅವರು ಹೊರಬಂದ ಮೇಲಷ್ಟೇ ಕಾರ್ಮಿಕರ ಸಂಖ್ಯೆ ಮತ್ತು ಅವರ ಆರೋಗ್ಯ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಪ್ರಸ್ತುತ ಸುರಂಗದ ಬಳಿ ರಕ್ಷಣಾ ಕಾರ್ಯ ತೀವ್ರಗತಿಯಲ್ಲಿ ಸಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

