ಯೂಟ್ಯೂಬ್ ನೋಡಿ ನಕಲಿ ನೋಟು ಪ್ರಿಂಟ್‌! ತೆಲಂಗಾಣದಲ್ಲಿ ದಂಪತಿ ಬಂಧನ
x

ಯೂಟ್ಯೂಬ್ ನೋಡಿ ನಕಲಿ ನೋಟು ಪ್ರಿಂಟ್‌! ತೆಲಂಗಾಣದಲ್ಲಿ ದಂಪತಿ ಬಂಧನ

ಯೂಟ್ಯೂಬ್ ವಿಡಿಯೋ ನೋಡಿ 500 ರೂಪಾಯಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ನೋಟುಗಳು, ಪ್ರಿಂಟರ್, ಬಾಂಡ್ ಪೇಪರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಯೂಟ್ಯೂಬ್ ವಿಡಿಯೋಗಳನ್ನು ನೋಡಿ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದ ದಂಪತಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ 500 ರೂ. ಮುಖಬೆಲೆಯ ನೋಟುಗಳು, ಪ್ರಿಂಟರ್-ಸ್ಕ್ಯಾನರ್, ಬಾಂಡ್ ಪೇಪರ್ ಹಾಗೂ ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು 38 ವರ್ಷದ ಬೆಜಾವಾಡ ರಾಜೀವ್ ಅಲಿಯಾಸ್ ರಾಜು ಹಾಗೂ ಅವರ ಪತ್ನಿ 26 ವರ್ಷದ ದುರ್ಗಂ ಪಾವನಿ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಯೂಟ್ಯೂಬ್ ವಿಡಿಯೋಗಳ ಮೂಲಕ ನಕಲಿ ನೋಟು ತಯಾರಿಸುವ ವಿಧಾನವನ್ನು ಕಲಿತಿದ್ದರು. ಬಳಿಕ ಆನ್‌ಲೈನ್ ಮೂಲಕ HP ಪ್ರಿಂಟರ್, ಬಾಂಡ್ ಪೇಪರ್ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಖರೀದಿಸಿ ತಮ್ಮ ಮನೆಯಲ್ಲಿಯೇ ನಕಲಿ 500 ರೂಪಾಯಿ ನೋಟುಗಳನ್ನು ಮುದ್ರಿಸಲು ಆರಂಭಿಸಿದ್ದರು.

ನಲ್ಗೊಂಡ ಡಿಎಸ್ಪಿ ಕೆ. ಶಿವರಾಮ ರೆಡ್ಡಿ ಮಾತನಾಡಿ, "ಆರೋಪಿಗಳು ಉತ್ತಮ ಗುಣಮಟ್ಟದ ಬಾಂಡ್ ಪೇಪರ್ ಮೇಲೆ ನೋಟುಗಳನ್ನು ಮುದ್ರಿಸಿ, ಕತ್ತರಿ ಹಾಗೂ ಉಕ್ಕಿನ ಸ್ಕೇಲ್ ಬಳಸಿ ಕರೆನ್ಸಿ ಗಾತ್ರಕ್ಕೆ ಕತ್ತರಿಸುತ್ತಿದ್ದರು. ಬಳಿಕ ಅವುಗಳನ್ನು ಅಸಲಿ ನೋಟುಗಳಂತೆ ಕಾಣುವಂತೆ ಸಿದ್ಧಪಡಿಸಿ ಸಾರ್ವಜನಿಕ ವಹಿವಾಟಿನಲ್ಲಿ ಚಲಾವಣೆ ಮಾಡುತ್ತಿದ್ದರು" ಎಂದು ತಿಳಿಸಿದ್ದಾರೆ.

ಜನಜಂಗುಳಿ ಪ್ರದೇಶಗಳೇ ಟಾರ್ಗೆಟ್

ಆರೋಪಿಗಳು ವಿಶೇಷವಾಗಿ ಜನಸಂದಣಿ ಹೆಚ್ಚಿರುವ ಅಂಗಡಿಗಳು, ವಾರದ ಸಂತೆಗಳು ಹಾಗೂ ತ್ವರಿತ ವಹಿವಾಟು ನಡೆಯುವ ವ್ಯಾಪಾರ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದ್ದರು. ನಕಲಿ ನೋಟುಗಳನ್ನು ತಕ್ಷಣ ಗುರುತಿಸಲು ಸಾಧ್ಯವಾಗದ ಕಾರಣ ಇಂತಹ ಸ್ಥಳಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ವಯೋವೃದ್ಧ ಅಂಗಡಿ ಮಾಲೀಕರೇ ಇವರ ಪ್ರಮುಖ ಗುರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವೂಲ ಕಿರಣ್ ಎಂಬ ಹಾಲು ಮಾರಾಟಗಾರನಿಗೆ 500 ರೂಪಾಯಿ ನಕಲಿ ನೋಟು ಸಿಕ್ಕಿದ್ದು, ಆತ ಪೊಲೀಸರಿಗೆ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ವಿಶೇಷ ತನಿಖಾ ತಂಡವನ್ನು ರಚಿಸಿದ ಪೊಲೀಸರು ಜೂನ್ 15ರಂದು ಆರೋಪಿಗಳ ಮನೆಯಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.

ದಾಳಿಯಲ್ಲಿ ಏನು ಸಿಕ್ಕಿತು?

ಪೊಲೀಸರು ನಡೆಸಿದ ದಾಳಿಯಲ್ಲಿ 15 ನಕಲಿ 500 ರೂಪಾಯಿ ನೋಟುಗಳು (ಒಟ್ಟು ಮೌಲ್ಯ 7,500 ರೂ.), HP ಪ್ರಿಂಟರ್-ಸ್ಕ್ಯಾನರ್, 100 ಬಾಂಡ್ ಪೇಪರ್ ಶೀಟ್‌ಗಳು, ಕತ್ತರಿಸಿದ ಕಾಗದದ ತುಂಡುಗಳು, ಕತ್ತರಿ, ಉಕ್ಕಿನ ಸ್ಕೇಲ್, ಸ್ಪಾರ್ಕಲ್ ಪೆನ್ ಹಾಗೂ ನೋಂದಣಿಯಾಗದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.

ರಾಜೀವ್ ವಿರುದ್ಧ ಹಲವು ಪ್ರಕರಣಗಳು

ತನಿಖೆಯಲ್ಲಿ ರಾಜೀವ್ ಹಳೆ ಅಪರಾಧಿ ಎಂಬುದು ಬೆಳಕಿಗೆ ಬಂದಿದೆ. ಆತನ ವಿರುದ್ಧ ಒಂದು ಕೊಲೆ ಪ್ರಕರಣ, ಒಂದು ಕೊಲೆ ಯತ್ನ ಪ್ರಕರಣ ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನಕಲಿ ಕರೆನ್ಸಿಗೆ ಸಂಬಂಧಿಸಿದ ಏಳು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಮಿರ್ಯಾಲಗೂಡ ಐ ಟೌನ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ರೌಡಿ ಶೀಟ್ ಕೂಡ ತೆರೆಯಲಾಗಿದೆ. ಸದ್ಯ ಈ ಜಾಲದ ವ್ಯಾಪ್ತಿ ಎಷ್ಟಿತ್ತು ಹಾಗೂ ಇನ್ನೂ ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Read More
Next Story