
ಯಮುನಾ ನದಿ
ಯಮುನಾ ನದಿ ನೀರು ಹಂಚಿಕೆ ವಿವಾದಕ್ಕೆ ಕೊನೆಗೂ ಮುಕ್ತಿ: ಹರಿಯಾಣ-ರಾಜಸ್ಥಾನ ಐತಿಹಾಸಿಕ ಒಪ್ಪಂದಕ್ಕೆ ಸಹಿ
ಈಗ ಆಗಿರುವ ನೂತನ ಒಪ್ಪಂದದ ಅನ್ವಯ, ಮರುಭೂಮಿ ರಾಜ್ಯವಾದ ರಾಜಸ್ಥಾನಕ್ಕೆ ಮಳೆಗಾಲದ ತಿಂಗಳುಗಳಲ್ಲಿ ಹಥಿನಿಕುಂಡ್ ಬ್ಯಾರೇಜ್‌ನಿಂದ ಭೂಗತ ಜಲ ಪೈಪ್‌ಲೈನ್ ಮೂಲಕ ನೀರನ್ನು ಹರಿಸಲಾಗುವುದು.
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯಮುನಾ ನದಿ ನೀರು ಹಂಚಿಕೆ ವಿವಾದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಹರಿಯಾಣ ಮತ್ತು ರಾಜಸ್ಥಾನ ಸರ್ಕಾರಗಳು ಸೋಮವಾರ (ಜೂ. 29) ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ.
1994ರ 'ಅಪ್ಪರ್ ಯಮುನಾ ನದಿ ಮಂಡಳಿ' (UYRB) ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಕೇಂದ್ರ ಗೃಹ ಸಚಿವರು ಕೈಗೊಂಡ ದೃಢ ನಿರ್ಧಾರದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಈ ನೂತನ ಒಪ್ಪಂದದ ಪ್ರಕಾರ, ಮಳೆಗಾಲದಲ್ಲಿ ಹರಿಯಾಣದ ಹಥಿನಿಕುಂಡ್ ಬ್ಯಾರೇಜ್‌ನಿಂದ ರಾಜಸ್ಥಾನವು ತನ್ನ ಪಾಲಿನ ನೀರನ್ನು ಪಡೆದುಕೊಳ್ಳಲು ಹಾದಿ ಸುಗಮವಾಗಿದೆ ಎಂದು ಉನ್ನತ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಉಪಸ್ಥಿತಿ
ನವದೆಹಲಿಯಲ್ಲಿ ನಡೆದ ಈ ಐತಿಹಾಸಿಕ ಒಪ್ಪಂದದ ಸಹಿ ಕಾರ್ಯಕ್ರಮದಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಭಾಗವಹಿಸಿದ್ದರು. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇತಿಹಾಸಿಕ ಕ್ಷಣ: ಸಿಎಂ ಭಜನ್ ಲಾಲ್
ಒಪ್ಪಂದದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ, "ಇವತ್ತಿನ ದಿನವು ಎರಡೂ ರಾಜ್ಯಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಐತಿಹಾಸಿಕ ನಿರ್ಧಾರವು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ" ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಮಾತನಾಡಿ, "ಈ ಒಪ್ಪಂದವು ದೀರ್ಘಕಾಲದಿಂದ ಉಭಯ ರಾಜ್ಯಗಳ ನಡುವೆ ನಡೆಯುತ್ತಿದ್ದ ನಿರಂತರ ಚರ್ಚೆಗಳು, ಸಭೆಗಳು ಮತ್ತು ಸತತ ಪ್ರಯತ್ನಗಳ ಫಲಿತಾಂಶವಾಗಿದೆ" ಎಂದು ತಿಳಿಸಿದರು.
32 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಒಪ್ಪಂದ
ಮೇ 12, 1994 ರಂದು ಯಮುನಾ ಜಲಾನಯನ ಪ್ರದೇಶದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ, ರಾಜಸ್ಥಾನಕ್ಕೆ ನೀರು ಸರಬರಾಜು ಮಾಡಲು ಸೂಕ್ತ ಕಾಲುವೆ ವ್ಯವಸ್ಥೆ ಇಲ್ಲದ ಕಾರಣ, ಕಳೆದ 32 ವರ್ಷಗಳಿಂದ ಈ ಒಪ್ಪಂದ ಕೇವಲ ಕಾಗದದ ಮೇಲಷ್ಟೇ ಉಳಿದಿತ್ತು.
ಪೈಪ್‌ಲೈನ್ ಮೂಲಕ ನೀರು
ಈಗ ಆಗಿರುವ ನೂತನ ಒಪ್ಪಂದದ ಅನ್ವಯ, ಮರುಭೂಮಿ ರಾಜ್ಯವಾದ ರಾಜಸ್ಥಾನಕ್ಕೆ ಮಳೆಗಾಲದ ತಿಂಗಳುಗಳಲ್ಲಿ ಹಥಿನಿಕುಂಡ್ ಬ್ಯಾರೇಜ್‌ನಿಂದ ಭೂಗತ ಜಲ ಪೈಪ್‌ಲೈನ್ ಮೂಲಕ ನೀರನ್ನು ಹರಿಸಲಾಗುವುದು. ಇದರಿಂದಾಗಿ ರಾಜಸ್ಥಾನದ ಕುಡಿಯುವ ನೀರು ಹಾಗೂ ನೀರಾವರಿ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

