West Bengal | ಬಂಗಾಳದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ಹೈಡ್ರಾಮಾ: ಟಿಎಂಸಿ ಕಚೇರಿಗಳ ಮೇಲೆ ದಾಳಿ
x
ಟಿಎಂಸಿ ಕಚೇರಿ ಮೇಲೆ ದಾಳಿ

West Bengal | ಬಂಗಾಳದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ಹೈಡ್ರಾಮಾ: ಟಿಎಂಸಿ ಕಚೇರಿಗಳ ಮೇಲೆ ದಾಳಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ರಾಜ್ಯದಾದ್ಯಂತ ರಾಜಕೀಯ ಸಂಘರ್ಷ ಸ್ಫೋಟಗೊಂಡಿದೆ.


ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿದ ಬೆನ್ನಲ್ಲೇ, ರಾಜ್ಯದ ವಿವಿಧೆಡೆ ಇರುವ ತೃಣಮೂಲ ಕಾಂಗ್ರೆಸ್ (TMC) ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಫ್ಲೆಕ್ಸ್ ಬೋರ್ಡ್‌ಗಳು ಮತ್ತು ಪಕ್ಷದ ಬ್ಯಾನರ್‌ಗಳನ್ನು ಹಾನಿಗೊಳಿಸಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಆದರೆ, ಈ ಘಟನೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಕಚೇರಿಗಳ ಧ್ವಂಸ

ದಕ್ಷಿಣ 24 ಪರಗಣದ ಬರುಯಿಪುರ, ಕೂಚ್ ಬೆಹಾರ್‌ನ ತುಫಾಂಗಂಜ್ ಮತ್ತು ಉತ್ತರ 24 ಪರಗಣದ ಪಾನಿಹಟಿಯಲ್ಲಿ ಟಿಎಂಸಿ ಕಚೇರಿಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಬರುಯಿಪುರದಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ಭಾವಚಿತ್ರಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದು ಸ್ಥಳೀಯ ನಾಯಕರು ದೂರಿದ್ದಾರೆ.

ಬೆಂಕಿ ಮತ್ತು ವಿಧ್ವಂಸಕ ಕೃತ್ಯ: ಪಶ್ಚಿಮ ಬರ್ಧಮಾನ್ ಜಿಲ್ಲೆಯ ಜಮುರಿಯಾದಲ್ಲಿ ಟಿಎಂಸಿ ಕಚೇರಿಗೆ ಬೆಂಕಿ ಹಚ್ಚಲಾಗಿದ್ದರೆ, ಅಸನ್ಸೋಲ್‌ನಲ್ಲಿ ಕಚೇರಿಯ ಪೀಠೋಪಕರಣಗಳನ್ನು ಪುಡಿ ಮಾಡಲಾಗಿದೆ. ಪಾನಿಹಟಿಯಲ್ಲಿ ಟಿಎಂಸಿ ಧ್ವಜಗಳನ್ನು ಕಿತ್ತೆಸೆದು, ಕಚೇರಿಗೆ ಕೇಸರಿ ಬಣ್ಣ ಬಳಿದು ಕಮಲದ ಗುರುತುಗಳನ್ನು ಹಾಕುವ ಮೂಲಕ ಕಚೇರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ.

ಅಭ್ಯರ್ಥಿ ಮೇಲೆ ಹಲ್ಲೆ

ಬ್ಯಾರಕ್‌ಪುರದ ಮತ ಎಣಿಕೆ ಕೇಂದ್ರದಿಂದ ಹೊರಬರುತ್ತಿದ್ದ ನೌಪಾರಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ತೃಣಾಂಕುರ್ ಭಟಾಚಾರ್ಯ ಅವರ ಮೇಲೆ ಬಿಜೆಪಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇದು ಟಿಎಂಸಿ ಒಳಗಿನ ಆಂತರಿಕ ಕಲಹದ ಫಲಿತಾಂಶ ಎಂದು ಬಿಜೆಪಿ ನಾಯಕ ಅರ್ಜುನ್ ಸಿಂಗ್ ತಿರುಗೇಟು ನೀಡಿದ್ದಾರೆ.

ಪೊಲೀಸ್ ಮತ್ತು ಚುನಾವಣಾ ಆಯೋಗದ ಕ್ರಮ

ಪರಿಸ್ಥಿತಿ ಕೈಮೀರದಂತೆ ತಡೆಯಲು ಪೋಲೀಸರು ಮತ್ತು ಕೇಂದ್ರ ಸಶಸ್ತ್ರ ಪಡೆಗಳು ಹರಸಾಹಸ ಪಡುತ್ತಿವೆ. ಕಸ್ಬಾ ಪ್ರದೇಶದ ರೂಬಿ ಮೋರ್ ಎಂಬಲ್ಲಿ ಕ್ಲಬ್ ಧ್ವಂಸ ಮಾಡುತ್ತಿದ್ದ ಗುಂಪನ್ನು ಪೊಲೀಸರು ಚದುರಿಸಿದ್ದಾರೆ. ಯಾವುದೇ ಪಕ್ಷದ ಅಭ್ಯರ್ಥಿ ಅಥವಾ ಬೆಂಬಲಿಗರ ಮೇಲೆ ದಾಳಿ ನಡೆಯದಂತೆ ಎಚ್ಚರಿಕೆ ವಹಿಸಲು ಮತ್ತು ಶಾಂತಿ ಕಾಪಾಡಲು ಚುನಾವಣಾ ಆಯೋಗವು ಕಟ್ಟುನಿಟ್ಟಿನ ಆದೇಶ ನೀಡಿದೆ. ದಾಳಿ ನಡೆಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

Read More
Next Story