Big revolt in TMC | 58 MLAs lost to Mamata; Didis empire in Bengal on the verge of collapse!
x

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಬಂಡಾಯ ಶಾಸಕ ರಿತಬ್ರತಾ ಬ್ಯಾನರ್ಜಿ

ಟಿಎಂಸಿಯಲ್ಲಿ ಮಹಾ ದಂಗೆ| ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನದ ಅಂಚಿಗೆ!

ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಹೀನಾಯವಾಗಿ ಸೋತಿದ್ದರೂ ಮಮತಾ ಅವರೇ ಪಕ್ಷದ ಸುಪ್ರೀಂ ಆಗಿದ್ದರು. ಆದರೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯ ಬಲ 215 ರಿಂದ 80 ಕ್ಕೆ ಕುಸಿದ ಬೆನ್ನಲ್ಲೇ ಈ ಬಿಕ್ಕಟ್ಟು ತಲೆದೋರಿದೆ.


Click the Play button to hear this message in audio format

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕೇವಲ ಒಂದು ತಿಂಗಳು ಕಳೆಯುವಷ್ಟರಲ್ಲೇ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಸುನಾಮಿ ಎದ್ದಿದೆ. ಚುನಾವಣಾ ಸೋಲಿಗಿಂತಲೂ ಭೀಕರವಾದ ಆಂತರಿಕ ದಂಗೆ ಉದ್ಭವಿಸಿದ್ದು, ದೀದಿ ಸಾಮ್ರಾಜ್ಯ ಪತನದ ಅಂಚಿಗೆ ಬಂದು ನಿಂತಿದೆ.

ಬುಧವಾರ ನಡೆದ ಹೈಡ್ರಾಮಾದಲ್ಲಿ ಟಿಎಂಸಿಯ ಒಟ್ಟು 80 ಶಾಸಕರ ಪೈಕಿ 58 ಭಿನ್ನಮತೀಯ ಶಾಸಕರು ಮಮತಾ ವಿರುದ್ಧ ಬಂಡಾಯ ಸಾರಿದ್ದಾರೆ. ಅಷ್ಟೇ ಅಲ್ಲದೆ, ಪಕ್ಷದಿಂದ ಉಚ್ಚಾಟಿತಗೊಂಡಿದ್ದ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನೂತನ ಮುಖ್ಯಸ್ಥರನ್ನಾಗಿ ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಅಧಿಕೃತವಾಗಿ ಗುರುತಿಸಿದ್ದಾರೆ. ಈ ಮೂಲಕ ಶಾಸಕರ ಮೇಲಿದ್ದ ಮಮತಾ ಬ್ಯಾನರ್ಜಿ ಅವರ ನಿಯಂತ್ರಣ ಸಂಪೂರ್ಣ ಕೈತಪ್ಪಿದೆ.

28 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಾ ವಿಭಜನೆ!

1998 ರಲ್ಲಿ ಟಿಎಂಸಿ ಸ್ಥಾಪನೆಯಾದಾಗಿನಿಂದ ಮಮತಾ ಬ್ಯಾನರ್ಜಿ ಇಂತಹ ಸವಾಲನ್ನು ಎಂದೂ ಎದುರಿಸಿರಲಿಲ್ಲ. ಕೇವಲ ಒಂದು ತಿಂಗಳ ಹಿಂದಷ್ಟೇ ನಡೆದ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಹೀನಾಯವಾಗಿ ಸೋತಿದ್ದರೂ ಮಮತಾ ಅವರೇ ಪಕ್ಷದ ಸುಪ್ರೀಂ ಆಗಿದ್ದರು. ಆದರೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯ ಬಲ 215 ರಿಂದ 80 ಕ್ಕೆ ಕುಸಿದ ಬೆನ್ನಲ್ಲೇ ಈ ಬಿಕ್ಕಟ್ಟು ತಲೆದೋರಿದೆ.

ದಂಗೆಗೆ ಅಸಲಿ ಕಾರಣವೇನು?

ಈ ಬಂಡಾಯ ರಾತ್ರೋರಾತ್ರಿ ಸಂಭವಿಸಿದ್ದಲ್ಲ. ಇದರ ಹಿಂದೆ ಕುಟುಂಬ ರಾಜಕಾರಣ ಹಾಗೂ ಉತ್ತರಾಧಿಕಾರದ ಬಿಕ್ಕಟ್ಟಿದೆ. ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಸುತ್ತ ಇಡೀ ಅಧಿಕಾರ ಕೇಂದ್ರೀಕೃತವಾಗುತ್ತಿರುವುದಕ್ಕೆ ಶಾಸಕರಲ್ಲಿ ತೀವ್ರ ಅಸಮಾಧಾನವಿತ್ತು. ಮೇ 22 ರಂದು ದೆಹಲಿಯ ಬಂಗಾ ಭವನದಲ್ಲಿ ಬಂಡಾಯ ನಾಯಕ ರಿತಬ್ರತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕ ಸುವೆಂದು ಅಧಿಕಾರಿ ನಡುವೆ ನಡೆದ "ಆಕಸ್ಮಿಕ" ಭೇಟಿ ಈ ದಂಗೆಗೆ ದಾರಿ ಮಾಡಿಕೊಟ್ಟಿತು.

ಸಹಿ ನಕಲಿ ವಿವಾದ ಮತ್ತು ಉಚ್ಚಾಟನೆ

ಶಾಸಕಾಂಗ ನಾಯಕತ್ವದ ದಾಖಲೆಗಳಲ್ಲಿ ಶಾಸಕರ ಸಹಿ ನಕಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಜೂನ್ 1 ರಂದು ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಆದರೆ ಈ ಕ್ರಮ ಬಿಕ್ಕಟ್ಟನ್ನು ಶಮನಗೊಳಿಸುವ ಬದಲಿಗೆ ದಂಗೆಯನ್ನು ಮತ್ತಷ್ಟು ತೀವ್ರಗೊಳಿಸಿತು. ಕೊನೆಗೆ ಬುಧವಾರ 58 ಶಾಸಕರ ಸಹಿ ಇರುವ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸುವ ಮೂಲಕ ಬಂಡಾಯ ಬಣ ಟಿಎಂಸಿ ಶಾಸಕಾಂಗ ಪಕ್ಷವನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ರಾಜಕೀಯ ಉಳಿವಿನ ಕೊನೆಯ ಹೋರಾಟದಲ್ಲಿ 'ದೀದಿ'

ಪಕ್ಷ ಹರಿದು ಹಂಚಿಹೋಗುವುದನ್ನು ತಡೆಯಲು ಮಮತಾ ಬ್ಯಾನರ್ಜಿ ಸದ್ಯ ಪ್ರಮುಖ ಸಾಂಸ್ಥಿಕ ಸಮಿತಿಗಳನ್ನು ವಿಸರ್ಜಿಸಿದ್ದಾರೆ. ಅಲ್ಲದೆ, "ಬಿಜೆಪಿ ಹಣ ಬಲ, ತನಿಖಾ ಸಂಸ್ಥೆಗಳ ಭಯ ಹಾಗೂ ಬೆದರಿಕೆಗಳನ್ನು ಒಡ್ಡಿ ನನ್ನ ಪಕ್ಷವನ್ನು ಒಡೆಯುತ್ತಿದೆ" ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ. "2011ರಲ್ಲಿ ಎಡರಂಗವನ್ನು ಅಧಿಕಾರದಿಂದ ಕೆಳಗಿಳಿಸುವುದೇ ಟಿಎಂಸಿಯ ಮುಖ್ಯ ಉದ್ದೇಶವಾಗಿತ್ತು. ಅದು ಈಡೇರಿದ ಬಳಿಕ ಪಕ್ಷಕ್ಕೆ ಯಾವುದೇ ಸೈದ್ಧಾಂತಿಕ ಆಧಾರ ಅಥವಾ ದೀರ್ಘಕಾಲೀನ ಅಭಿವೃದ್ಧಿಯ ದೃಷ್ಟಿಕೋನ ಇರಲಿಲ್ಲ. ಹೀಗಾಗಿ ಶಾಸಕರು ಸ್ವಹಿತಾಸಕ್ತಿಗಾಗಿ ಪಕ್ಷ ಬದಲಿಸುತ್ತಿದ್ದಾರೆ" ಎಂದು ರಾಜಕೀಯ ವಿಶ್ಲೇಷಕ ಶುಭೋಮೊಯ್ ಮೈತ್ರಾ ತಿಳಿಸಿದ್ದಾರೆ.

ಮಮತಾ ಯುಗ ಅಂತ್ಯವೇ?

ಮಮತಾ ಬ್ಯಾನರ್ಜಿ ಅವರಿಗೆ ಈಗ 70 ವರ್ಷ ದಾಟಿದೆ. ಕಳೆದ ನಾಲ್ಕು ದಶಕಗಳಲ್ಲಿ ಅವರು ತೋರಿದ ಅದೇ ಹೋರಾಟದ ಕಿಚ್ಚನ್ನು ಈ ವಯಸ್ಸಿನಲ್ಲಿ ಮರಳಿ ಪ್ರದರ್ಶಿಸುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ ವಿಶ್ಲೇಷಕರು. ಒಂದು ವೇಳೆ ದೀದಿ ತಮ್ಮನ್ನು "ರಾಜಕೀಯ ಪಿತೂರಿಯ ಬಲಿಪಶು" ಎಂದು ಜನರ ಮುಂದೆ ಬಿಂಬಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಮತ್ತೆ ಪುಟೇಳಬಹುದು. ಇಲ್ಲದಿದ್ದರೆ, ಇದು ಬಂಗಾಳದ ಇತಿಹಾಸದಲ್ಲೇ ಅತ್ಯಂತ ನಾಟಕೀಯ ರಾಜಕೀಯ ಸಾಮ್ರಾಜ್ಯವೊಂದರ ಪತನದ ಆರಂಭವಾಗಲಿದೆ.

Read More
Next Story