West Bengal Election 2026 | ಪಶ್ಚಿಮ ಬಂಗಾಳದ ಈ ಕ್ಷೇತ್ರದಲ್ಲಿ ಮರುಮತದಾನ; ಮೇ 24ಕ್ಕೆ ಎಲ್ಲಾ 285 ಬೂತ್‌ಗಳ ರಿಸಲ್ಟ್!
x
ಫಾಲ್ಟಾದಲ್ಲಿ ಮರು ಮತದಾನ(ಸಂಗ್ರಹ ಚಿತ್ರ)

West Bengal Election 2026 | ಪಶ್ಚಿಮ ಬಂಗಾಳದ ಈ ಕ್ಷೇತ್ರದಲ್ಲಿ ಮರುಮತದಾನ; ಮೇ 24ಕ್ಕೆ ಎಲ್ಲಾ 285 ಬೂತ್‌ಗಳ ರಿಸಲ್ಟ್!

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಎಲ್ಲಾ 285 ಬೂತ್‌ಗಳಲ್ಲಿ ಮರುಮತದಾನಕ್ಕೆ ಆದೇಶಿಸಿದೆ.


ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳ ಭವಿಷ್ಯ ಮೇ 4 ರಂದು ನಿರ್ಧಾರವಾಗಲಿದೆ. ಆದರೆ, ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ (Falta) ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರಕ್ಕೆ ಮರುಚುನಾವಣೆ ಘೋಷಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗ ಸಂಚಲನ ಮೂಡಿಸಿದೆ.

ಎಲ್ಲಾ 285 ಬೂತ್‌ಗಳಲ್ಲೂ ಮರುಮತದಾನ

ಏಪ್ರಿಲ್ 29 ರಂದು ನಡೆದ ಎರಡನೇ ಹಂತದ ಮತದಾನದ ವೇಳೆ ಫಾಲ್ಟಾದಲ್ಲಿ ವ್ಯಾಪಕ ಅಕ್ರಮಗಳು ನಡೆದ ವರದಿಗಳ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶಿಸಿದೆ. ಈ ಮರುಮತದಾನವು ಮೇ 21 ರಂದು ನಡೆಯಲಿದ್ದು, ಫಲಿತಾಂಶವು ಮೇ 24 ರಂದು ಪ್ರಕಟವಾಗಲಿದೆ; ಇದರಿಂದಾಗಿ ಪಶ್ಚಿಮ ಬಂಗಾಳದ ಉಳಿದ ಕ್ಷೇತ್ರಗಳ ಫಲಿತಾಂಶ ಮೇ 4 ರಂದೇ ಹೊರಬಿದ್ದರೂ, ಫಾಲ್ಟಾ ಕ್ಷೇತ್ರದ ಕುತೂಹಲ ಮಾತ್ರ ಮೇ 24 ರವರೆಗೆ ಮುಂದುವರಿಯಲಿದೆ.

ಮರುಚುನಾವಣೆಗೆ ಕಾರಣವೇನು?

ಚುನಾವಣಾ ವೀಕ್ಷಕರ ವರದಿಗಳ ಪ್ರಕಾರ, ಫಾಲ್ಟಾದಲ್ಲಿ ಮತದಾರರ ಮೇಲೆ ಬೆದರಿಕೆ, ಬೂತ್‌ಗಳ ಒಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಮತ್ತು ಇವಿಎಂ (EVM) ತಿರುಚುವಿಕೆಯಂತಹ ಗಂಭೀರ ಆರೋಪಗಳು ಕೇಳಿಬಂದಿವೆ. ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಅವರು ಬೂತ್ ಸಂಖ್ಯೆ 177, 144 ಮತ್ತು 189 ರಲ್ಲಿ ಬಿಜೆಪಿ ಚಿಹ್ನೆಯ ಮೇಲೆ ಬಿಳಿ ಟೇಪ್ ಅಂಟಿಸಿ ಮುಚ್ಚಲಾಗಿತ್ತು ಎಂದು ಆರೋಪಿಸಿದ್ದರು.

ಬೆಲ್ಸಿಂಗ್ ಪ್ರದೇಶದ ಬೂತ್ ಒಂದರ ಹೊರಗೆ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಗುಂಪಿನ ಮೇಲೆ ಭದ್ರತಾ ಪಡೆಗಳು ಲಾಠಿ ಪ್ರಹಾರ ನಡೆಸಿದ್ದವು. ಈ ವೇಳೆ ಮಹಿಳೆಯರು ಮತ್ತು ಮಗುವೊಂದಕ್ಕೆ ಗಾಯಗಳಾಗಿದ್ದವು.

ಕಣದಲ್ಲಿರುವ ಪ್ರಮುಖರು

ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮುಖ್ಯವಾಗಿ ತೃಣಮೂಲ ಕಾಂಗ್ರೆಸ್‌ನ (TMC) ಜಹಾಂಗೀರ್ ಖಾನ್, ಬಿಜೆಪಿಯ (BJP) ದೇಬಾಂಶು ಪಾಂಡಾ, ಕಾಂಗ್ರೆಸ್‌ನ ಅಬ್ದುರ್ ರಜಾಕ್ ಮೊಲ್ಲಾ ಹಾಗೂ ಸಿಪಿಐಎಂನ (CPI-M) ಶಂಭು ನಾಥ್ ಕುರ್ಮಿ ಅವರು ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ರಾಜಕೀಯ ವಾಕ್ಸಮರ

ಚುನಾವಣಾ ಆಯೋಗದ ಈ ತೀರ್ಮಾನವನ್ನು ಬಿಜೆಪಿ ಸ್ವಾಗತಿಸಿದೆ. "ಇದು ಫಾಲ್ಟಾದ ಮಹಿಳೆಯರು ಟಿಎಂಸಿ ದೌರ್ಜನ್ಯದ ವಿರುದ್ಧ ಸಾಧಿಸಿದ ಗೆಲುವು" ಎಂದು ಬಿಜೆಪಿ ನಾಯಕ ಸುಕಾಂತ ಮಜುಂದಾರ್ ಹೇಳಿದ್ದಾರೆ. ಇತ್ತ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಎಕ್ಸ್ (ಟ್ವಿಟರ್) ಮೂಲಕ ಕಿಡಿಕಾರಿದ್ದಾರೆ. "ನನ್ನ ಡೈಮಂಡ್ ಹಾರ್ಬರ್ ಮಾಡೆಲ್‌ಗೆ ಧಕ್ಕೆ ತರಲು ನಿಮ್ಮ ಗುಜರಾತಿ ಗ್ಯಾಂಗ್‌ಗೆ ಹತ್ತು ಜನ್ಮ ಎತ್ತಿದರೂ ಸಾಧ್ಯವಿಲ್ಲ. ಧೈರ್ಯವಿದ್ದರೆ ಫಾಲ್ಟಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಿ" ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಮರುಚುನಾವಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವೆಬ್‌ಕಾಸ್ಟಿಂಗ್, ಮೈಕ್ರೋ ಅಬ್ಸರ್ವರ್‌ಗಳು ಮತ್ತು ಹೆಚ್ಚಿನ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲು ಆಯೋಗ ಸೂಚಿಸಿದೆ.

Read More
Next Story