
15ವರ್ಷಗಳ ಶಪಥ- ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆ ಕೂದಲು ಕತ್ತರಿಸಿಕೊಂಡ ಬೆಂಬಲಿಗ
ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತ ಅಂತ್ಯ! ಬಿಜೆಪಿ ಗೆಲುವಿಗಾಗಿ 2011ರಿಂದ ಕೂದಲು ಕತ್ತರಿಸದೆ ಹಠ ತೊಟ್ಟಿದ್ದ ಬನೇಶ್ವರ್ ಬರ್ಮನ್ ಪ್ರತಿಜ್ಞೆ ಪೂರೈಸಿದ್ದು ಹೇಗೆ?
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಆಡಳಿತವನ್ನು ವಿರೋಧಿಸಿ ಕಳೆದ 15 ವರ್ಷಗಳಿಂದ ಕೂದಲು ಕತ್ತರಿಸದೆ ಪ್ರತಿಜ್ಞೆ ಮಾಡಿದ್ದ ವ್ಯಕ್ತಿಯೊಬ್ಬರು, 2026ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನಪ್ಪಿದ ನಂತರ ಅಂತಿಮವಾಗಿ ತಮ್ಮ ಮುಡಿಯನ್ನು ಅರ್ಪಿಸಿದ್ದಾರೆ.
ಪ್ರತಿಜ್ಞೆಯ ಹಿನ್ನೆಲೆ:
ಬಂಗಾಳದ ಬಾಮನ್ ಪಾರಾ ಗ್ರಾಮದ ನಿವಾಸಿಯಾದ ಬಿಜೆಪಿ ಬೆಂಬಲಿಗ ಬನೇಶ್ವರ್ ಬರ್ಮನ್, 2011ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರಕ್ಕೆ ಬಂದಾಗ ಒಂದು ವಿಚಿತ್ರ ಪ್ರತಿಜ್ಞೆ ಮಾಡಿದ್ದರು. ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಯುವವರೆಗೆ ತಾವು ಕ್ಷೌರ ಮಾಡಿಸಿಕೊಳ್ಳುವುದಿಲ್ಲ ಎಂದು ಅವರು ಘೋಷಿಸಿದ್ದರು.
ಚುನಾವಣಾ ಫಲಿತಾಂಶ
2026ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿ, ಟಿಎಂಸಿಯ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿದೆ. ಈ ಹಿನ್ನೆಲೆಯಲ್ಲಿ ಬರ್ಮನ್ ಅವರು ಸ್ಥಳೀಯ ಸಲೂನ್‌ನಲ್ಲಿ ತಮ್ಮ ಕೂದಲನ್ನು ತೆಗೆಸುವ ಮೂಲಕ ಹರಕೆಯನ್ನು ಪೂರೈಸಿದ್ದಾರೆ.
ಬರ್ಮನ್ ಅವರ ಈ ಕಾರ್ಯವು ಬಂಗಾಳದಲ್ಲಿನ ರಾಜಕೀಯ ಬದಲಾವಣೆಯ ಸಂಕೇತ ಎಂದು ಬಿಜೆಪಿ ಬೆಂಬಲಿಗರು ಸಂಭ್ರಮಿಸಿದ್ದಾರೆ. 294 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿತ ಕಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನಪ್ಪಿದ್ದಾರೆ.
ಈ ಚುನಾವಣಾ ಫಲಿತಾಂಶವು ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಬಿಜೆಪಿಯ ಮೊದಲ ಗೆಲುವಾಗಿದ್ದು, 2011 ರಿಂದ ಅಧಿಕಾರದಲ್ಲಿದ್ದ ಟಿಎಂಸಿ ಸರ್ಕಾರಕ್ಕೆ ತೆರೆ ಬಿದ್ದಿದೆ.

