ಬಂಗಾಳ ಸಿಎಂ ಸುವೇಂದು ಅಧಿಕಾರಿ ಆಪ್ತನ ಕೊಲೆ ಕೇಸ್: ಪ್ರಮುಖ ಆರೋಪಿ ಯುಪಿಯಲ್ಲಿ ಸಿಬಿಐಗೆ ಲಾಕ್!
x

ಬಂಗಾಳ ಸಿಎಂ ಸುವೇಂದು ಅಧಿಕಾರಿ ಆಪ್ತನ ಕೊಲೆ ಕೇಸ್: ಪ್ರಮುಖ ಆರೋಪಿ ಯುಪಿಯಲ್ಲಿ ಸಿಬಿಐಗೆ ಲಾಕ್!

ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಅವರ ವೈಯಕ್ತಿಕ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜ್ ಕುಮಾರ್ ಸಿಂಗ್‌ನನ್ನು ಯುಪಿಯ ಮುಜಾಫರ್‌ನಗರದಲ್ಲಿ ಸಿಬಿಐ ಬಂಧಿಸಿದೆ.


Click the Play button to hear this message in audio format

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ್ ರಥ್ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಸೋಮವಾರ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ರಾಜಕುಮಾರ್ ಸಿಂಗ್ ಎಂಬಾತನನ್ನು ಸಿಬಿಐ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಹೈ-ಪ್ರೊಫೈಲ್ ಕೇಸ್‌ಗೆ ಭಾರಿ ಟ್ವಿಸ್ಟ್ ಸಿಕ್ಕಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ, ಅಂದರೆ ಮೇ 6 ರಂದು ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದಲ್ಲಿದ್ದ ಅವರ ನಿವಾಸದ ಸಮೀಪವೇ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಇದು ಹಲವು ಆಯಾಮಗಳನ್ನು ಒಳಗೊಂಡಿರುವ ವ್ಯವಸ್ಥಿತ ಹಾಗೂ ಯೋಜಿತ ಹತ್ಯೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಉತ್ತರ ಪ್ರದೇಶಕ್ಕೆ ಓಡಿಹೋಗಿದ್ದ ಶೂಟರ್:

ರಾಜ್ ಸಿಂಗ್ ಎಂದೂ ಕರೆಯಲ್ಪಡುವ ಪ್ರಮುಖ ಆರೋಪಿ ರಾಜ್ ಕುಮಾರ್ ಸಿಂಗ್, ಹತ್ಯೆ ನಡೆದ ತಕ್ಷಣ ಪಶ್ಚಿಮ ಬಂಗಾಳದಿಂದ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಬಿಐ ವಿಶೇಷ ತಂಡ, ಯುಪಿ ಸ್ಥಳೀಯ ಪೊಲೀಸರ ಸಹಾಯದಿಂದ ಮುಜಾಫರ್‌ನಗರದಲ್ಲಿ ಈತನನ್ನು ಮುಂಜಾನೆ ಹೆಡೆಮುರಿ ಕಟ್ಟಿದೆ. ಈ ಕೊಲೆ ಪ್ರಕರಣದಲ್ಲಿ ಈತನೇ ಪ್ರಮುಖ ಶೂಟರ್‌ಗಳಲ್ಲಿ ಒಬ್ಬ ಎಂದು ನಂಬಲಾಗಿದೆ.

ರಹಸ್ಯ ಬಯಲಿಗೆ ಎಳೆದ SIT:

ಪಶ್ಚಿಮ ಬಂಗಾಳ ಸರ್ಕಾರದ ಮನವಿಯ ಮೇರೆಗೆ ರಾಜ್ಯ ಪೊಲೀಸರಿಂದ ಈ ಪ್ರಕರಣವನ್ನು ಸಿಬಿಐ ತನ್ನ ಕೈಗೆತ್ತಿಕೊಂಡಿತ್ತು. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 7 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ತನಿಖೆ ಚುರುಕುಗೊಳಿಸಲಾಗಿತ್ತು.

ಸಿಬಿಐ ತನಿಖೆಗೂ ಮುನ್ನ ಬಂಗಾಳ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಚಂದ್ರನಾಥ್ ರಥ್ ಅವರ ದೈನಂದಿನ ಚಲನವಲನಗಳನ್ನು ಆರೋಪಿಗಳು ಹಲವು ದಿನಗಳ ಕಾಲ ಸೂಕ್ಷ್ಮವಾಗಿ ಗಮನಿಸಿದ್ದರು (ರೆಕ್ಕಿ ನಡೆಸಿದ್ದರು). ಇದೊಂದು ಸುಪಾರಿ ಕೊಲೆ ಎಂದು ಶಂಕಿಸಲಾಗಿದ್ದು, ವೃತ್ತಿಪರ ಶೂಟರ್‌ಗಳನ್ನು ಬಳಸಿ ಪಶ್ಚಿಮ ಬಂಗಾಳದ ಹೊರಗಿನಿಂದ (ಯುಪಿ ಮತ್ತು ಬಿಹಾರ) ಇಡೀ ಆಪರೇಷನ್ ಅನ್ನು ನಿಯಂತ್ರಿಸಲಾಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಬಂಗಾಳದಲ್ಲಿ ಭುಗಿಲೆದ್ದ ರಾಜಕೀಯ ಕಿಡಿ

ಸ್ವತಃ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ನೆರಳಿನಂತಿದ್ದ ಚಂದ್ರನಾಥ್ ರಥ್ ಅವರ ಹತ್ಯೆ ಇಡೀ ಪಶ್ಚಿಮ ಬಂಗಾಳದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ತೀವ್ರ ಚರ್ಚೆಗಳು ಆರಂಭವಾಗಿದ್ದು, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಸದ್ಯ ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಕೋಲ್ಕತ್ತಾಗೆ ಕರೆತರಲಾಗುತ್ತಿದ್ದು, ಹತ್ಯೆಯ ಅಸಲಿ ಮಾಸ್ಟರ್ ಮೈಂಡ್ ಯಾರು ಮತ್ತು ಕೊಲೆಗೆ ನಿಖರ ಕಾರಣವೇನು ಎಂಬುದು ಇನ್ನು ಬಹಿರಂಗವಾಗಬೇಕಿದೆ.

Read More
Next Story