
ಪಶ್ಚಿಮ ಬಂಗಾಳದ ಸಿಎಂ ಹುದ್ದೆಗೆ ಆಯ್ಕಯಾದ ಬಿಜೆಪಿಯ ಸುವೇಂದು ಅಧಿಕಾರಿ
West Bengal| ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಸರ್ಕಾರಿ ಯೋಜನೆಗಳು ಕಟ್!
ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯಿಂದ ಹೆಸರು ಕಡಿತಗೊಂಡಿರುವವರಿಗೆ ಸರ್ಕಾರಿ ಕಲ್ಯಾಣ ಯೋಜನೆಗಳ ಸೌಲಭ್ಯವನ್ನು ರದ್ದುಗೊಳಿಸಲು ನಿರ್ಧರಿಸಿದೆ.
ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಬಿಜೆಪಿ ಸರ್ಕಾರವು ಸರ್ಕಾರಿ ಯೋಜನೆಗಳ ದುರುಪಯೋಗ ತಡೆಯಲು ದೊಡ್ಡ ಕ್ರಮಕ್ಕೆ ಕೈಹಾಕಿದೆ. ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರು ಇನ್ಮುಂದೆ ಯಾವುದೇ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಸರ್ಕಾರ ಘೋಷಿಸಿದೆ. ಬಂಗಾಳದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿರುವ ಬಿಹಾರದಲ್ಲೂ ಇದೇ ನಿಯಮ ಜಾರಿಗೆ ಬರಲಿದೆ ಎಂದು ವರದಿಗಳು ತಿಳಿಸಿವೆ.
91 ಲಕ್ಷ ಮತದಾರರ ಹೆಸರು ಡಿಲೀಟ್!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಸರಿಪಡಿಸಲು ಚುನಾವಣಾ ಆಯೋಗವು 'ಎಸ್‌ಐಆರ್' (SIR) ಪ್ರಕ್ರಿಯೆ ನಡೆಸಿತ್ತು. ಈ ವೇಳೆ ಬರೋಬ್ಬರಿ 91 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದರಲ್ಲಿ ತಾಂತ್ರಿಕ ದೋಷಗಳಿದ್ದ 27 ಲಕ್ಷ ಜನರಿಗೆ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಇವರೆಲ್ಲರೂ ನ್ಯಾಯಮಂಡಳಿಗಳಿಗೆ ಮೇಲ್ಮನವಿ ಸಲ್ಲಿಸಿದ್ದು, ಕೇವಲ 1,607 ಹೆಸರುಗಳನ್ನು ಮಾತ್ರ ಸದ್ಯಕ್ಕೆ ಮರಳಿ ಸೇರಿಸಲಾಗಿದೆ.
ಜೂನ್ 1 ರಿಂದ 'ಅನ್ನಪೂರ್ಣ ಭಂಡಾರ'- ತಿಂಗಳಿಗೆ 3,000 ರೂ.!
ಬಿಜೆಪಿಯ ಚುನಾವಣಾ ಭರವಸೆಯಂತೆ ಮಹಿಳೆಯರಿಗಾಗಿ ಜೂನ್ 1 ರಿಂದ 'ಅನ್ನಪೂರ್ಣ ಭಂಡಾರ' ಯೋಜನೆ ಜಾರಿಗೆ ಬರಲಿದ್ದು, ಮಹಿಳೆಯರಿಗೆ ತಿಂಗಳಿಗೆ 3,000 ರೂ. ಸಿಗಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್, "ಮತದಾರರ ಪಟ್ಟಿಯಿಂದ ಹೆಸರು ಕಡಿತಗೊಂಡಿರುವವರು ಹಾಗೂ ಟ್ರಿಬ್ಯುನಲ್‌ಗಳಲ್ಲಿ ಇನ್ನು ಪರಿಶೀಲನೆಯಲ್ಲಿರುವವರ ಹೆಸರುಗಳನ್ನು ಸದ್ಯಕ್ಕೆ ಫಲಾನುಭವಿಗಳ ಪಟ್ಟಿಯಿಂದ ಹೊರಗಿಡಲಾಗುವುದು," ಎಂದು ಸ್ಪಷ್ಟಪಡಿಸಿದ್ದಾರೆ.
"ಈಗಾಗಲೇ ಮೃತಪಟ್ಟವರು, ಈ ದೇಶದ ನಾಗರಿಕರಲ್ಲದವರು ಮತ್ತು ಅಕ್ರಮ ನುಸುಳುಕೋರರು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದರೆ ಅದನ್ನು ತಡೆಯಲಾಗುವುದು. ಈ ಹಿಂದೆ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ಅವಧಿಯ 'ಲಕ್ಷ್ಮೀರ್ ಭಂಡಾರ' ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದವರ ಪಟ್ಟಿಯನ್ನೂ ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರನ್ನು ಕೈಬಿಡಲಾಗುವುದು," ಎಂದು ಸಚಿವೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದೇನು?
ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ಹಿಂದಿನ ಟಿಎಂಸಿ ಸರ್ಕಾರದ ಅವಧಿಯ ಯೋಜನೆಗಳು ಮುಂದುವರಿಯಲಿವೆ. ಆದರೆ ಇನ್ಮುಂದೆ ಎಲ್ಲವೂ ಪಾರದರ್ಶಕವಾಗಿ ನಡೆಯಲಿವೆ. ಯಾವುದೇ ಮೃತ ವ್ಯಕ್ತಿ, ಅಕ್ರಮ ನುಸುಳುಕೋರ ಅಥವಾ ಭಾರತೀಯರಲ್ಲದ ವ್ಯಕ್ತಿಗೆ ರಾಜ್ಯದ ನಾಗರಿಕರಿಗಾಗಿ ಇರುವ ಸೌಲಭ್ಯಗಳನ್ನು ಪಡೆಯಲು ಬಿಡುವುದಿಲ್ಲ," ಎಂದು ಕಡಕ್ ಎಚ್ಚರಿಕೆ ನೀಡಿದ್ದಾರೆ. ನ್ಯಾಯಮಂಡಳಿಯ ಪರಿಶೀಲನೆ ಮುಗಿದು ಮತದಾರರ ಪಟ್ಟಿಗೆ ಹೆಸರು ಮರಳಿದ ತಕ್ಷಣವೇ ಅವರಿಗೆ ಮತ್ತೆ ಯೋಜನೆಯ ಲಾಭ ಸಿಗಲಿದೆ ಎಂದು ಸರ್ಕಾರ ಹೇಳಿದೆ.
ಕಾಂಗ್ರೆಸ್ ತೀವ್ರ ಆಕ್ರೋಶ: ಪಿ. ಚಿದಂಬರಂ ವಾಗ್ದಾಳಿ
ಬಂಗಾಳ ಮತ್ತು ಬಿಹಾರ ಸರ್ಕಾರಗಳ ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಪಿ. ಚಿದಂಬರಂ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಆಕ್ರೋಶ ಹೊರಹಾಕಿದ್ದು, "ಇದು ಅತ್ಯಂತ ಅತಿರೇಕದ ನಿರ್ಧಾರ. ಪೌರತ್ವದ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗುತ್ತದೆಯೇ? ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದೇ ಪೌರತ್ವಕ್ಕೆ ಆಧಾರವೇ? ಈ ಗಂಭೀರ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಬೇಕಿದೆ," ಎಂದು ಬರೆದುಕೊಂಡಿದ್ದಾರೆ.

