
ಚಮೋಲಿಯ ಪಿಪಲ್ಕೋಟಿ ಬಳಿ THDC ಸುರಂಗ ಕುಸಿದು 7 ಕಾರ್ಮಿಕರು ಮೃತಪಟ್ಟಿದ್ದಾರೆ.
ಉತ್ತರಾಖಂಡ ಸುರಂಗ ಕುಸಿತ: 7 ಕಾರ್ಮಿಕರು ಸಾವು, 14 ಮಂದಿಗೆ ಗಾಯ
ಸಂಜೆ ಸುಮಾರು 6.30ರ ವೇಳೆಗೆ ಭಾರಿ ಪ್ರಮಾಣದ ನೀರು ಹಾಗೂ ಕೆಸರು ಏಕಾಏಕಿ ಸುರಂಗದೊಳಗೆ ನುಗ್ಗಿದೆ. ನೀರಿನ ರಭಸಕ್ಕೆ ಹಲವು ಕಾರ್ಮಿಕರು ಕೊಚ್ಚಿಕೊಂಡು ಹೋಗಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಸಮೀಪದ ಮಾಯಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಟಿಎಚ್‌ಡಿಸಿ ಸುರಂಗದಲ್ಲಿ ಗುರುವಾರ ಸಂಜೆ ಹಠಾತ್ ಭೂಕುಸಿತ ಹಾಗೂ ಭಾರಿ ಪ್ರಮಾಣದ ನೀರು ಸುರಂಗದೊಳಗೆ ನುಗ್ಗಿದ ಪರಿಣಾಮ ಸುರಂಗದ ಒಂದು ಭಾಗ ಕುಸಿದು ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ.
ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ (THDC) ಒಡೆತನದ ವಿಷ್ಣುಗಾಡ್–ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಒಟ್ಟು 22 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸಂಜೆ ಸುಮಾರು 6.30ರ ವೇಳೆಗೆ ಭಾರಿ ಪ್ರಮಾಣದ ನೀರು ಹಾಗೂ ಕೆಸರು ಏಕಾಏಕಿ ಸುರಂಗದೊಳಗೆ ನುಗ್ಗಿದೆ. ನೀರಿನ ರಭಸಕ್ಕೆ ಹಲವು ಕಾರ್ಮಿಕರು ಸುರಂಗದ ನಿರ್ಗಮನದತ್ತ ಕೊಚ್ಚಿಕೊಂಡು ಹೋಗಿದ್ದಾರೆ.
21 ಕಾರ್ಮಿಕರ ರಕ್ಷಣೆ
ಘಟನೆ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಬಹು ಏಜೆನ್ಸಿಗಳ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ರಾತ್ರಿ 11 ಗಂಟೆಯ ವೇಳೆಗೆ 21 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಆದರೆ ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದು, ಗಾಯಗೊಂಡ 14 ಕಾರ್ಮಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
155ಕ್ಕೂ ಹೆಚ್ಚು ಸಿಬ್ಬಂದಿಯಿಂದ ರಕ್ಷಣಾ ಕಾರ್ಯ
ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ 57 ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF)ಯ 42 ಸಿಬ್ಬಂದಿ, ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ITBP)ನ 21 ಸಿಬ್ಬಂದಿ, ಸ್ಥಳೀಯ ಪೊಲೀಸರ 22 ಸಿಬ್ಬಂದಿ, ಅಗ್ನಿಶಾಮಕ ದಳದ 9 ಸಿಬ್ಬಂದಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪಡೆ (DDRF)ಯ 4 ಸಿಬ್ಬಂದಿ ಭಾಗವಹಿಸಿದ್ದಾರೆ.
ಭಾರೀ ಯಂತ್ರೋಪಕರಣಗಳ ಬಳಕೆ
ಸುರಂಗದಲ್ಲಿ ಕುಸಿದ ಅವಶೇಷಗಳನ್ನು ತೆರವುಗೊಳಿಸಲು ಹಾಗೂ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಭಾರೀ ಯಂತ್ರೋಪಕರಣಗಳು ಮತ್ತು ವಿಶೇಷ ಉಪಕರಣಗಳನ್ನು ಸ್ಥಳಕ್ಕೆ ತರಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಗಾಯಾಳುಗಳ ಆರೋಗ್ಯ ಸ್ಥಿರ
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಧಿಕಾರಿಗಳಿಂದ ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳು ಕಾರ್ಮಿಕರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ಅವರು ತಿಳಿಸಿದ್ದಾರೆ. ಗಾಯಾಳುಗಳ ಆರೋಗ್ಯ ಸ್ಥಿರವಾಗಿದ್ದು, ಜಾರ್ಖಂಡ್ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳಿಗೂ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಧಾಮಿ ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದು, ಸುರಂಗ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.

