UP Storm |ಉತ್ತರ ಪ್ರದೇಶದಲ್ಲಿ ವಿನಾಶಕಾರಿ ಚಂಡಮಾರುತಕ್ಕೆ 111 ಬಲಿ; ನೂರಾರು ಮನೆಗಳು ಧರಾಶಾಹಿ
x

UP Storm |ಉತ್ತರ ಪ್ರದೇಶದಲ್ಲಿ ವಿನಾಶಕಾರಿ ಚಂಡಮಾರುತಕ್ಕೆ 111 ಬಲಿ; ನೂರಾರು ಮನೆಗಳು ಧರಾಶಾಹಿ

ಉತ್ತರ ಪ್ರದೇಶದ 26 ಜಿಲ್ಲೆಗಳಲ್ಲಿ ಬೀಸಿದ ಭೀಕರ ಚಂಡಮಾರುತಕ್ಕೆ 111 ಜನರು ಬಲಿಯಾಗಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಅತಿ ಹೆಚ್ಚು ಹಾನ ಸಂಭವಿಸಿದ್ದು, ಸಿಎಂ ಯೋಗಿ ಆದಿತ್ಯನಾಥ್ ಅವರು ತುರ್ತು ಪರಿಹಾರಕ್ಕೆ ಆದೇಶಿಸಿದ್ದಾರೆ.


ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಬುಧವಾರ ಬೀಸಿದ ಭೀಕರ ಚಂಡಮಾರುತ ಮತ್ತು ಸುರಿದ ಭಾರೀ ಮಳೆ ಮಹಾ ವಿನಾಶವನ್ನೇ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 111 ಜನರು ಸಾವನ್ನಪ್ಪಿದ್ದು, 72ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

26 ಜಿಲ್ಲೆಗಳಲ್ಲಿ ರುದ್ರನರ್ತನ

ರಾಜ್ಯದ ಒಟ್ಟು 26 ಜಿಲ್ಲೆಗಳಲ್ಲಿ ಚಂಡಮಾರುತ ಅಬ್ಬರಿಸಿದ್ದು, ಅತಿ ಹೆಚ್ಚು ಸಾವು-ನೋವುಗಳು ಪ್ರಯಾಗ್‌ರಾಜ್ (21) ಜಿಲ್ಲೆಯಲ್ಲಿ ವರದಿಯಾಗಿವೆ. ಉಳಿದಂತೆ ಮಿರ್ಜಾಪುರ (19), ಭದೋಹಿ (16), ಫತೇಪುರ್ (11) ಮತ್ತು ಬರೇಲಿಯಲ್ಲಿ 2 ಸಾವು ಸಂಭವಿಸಿವೆ. ಮರಗಳು ಬುಡಮೇಲಾಗಿ ಬಿದ್ದಿರುವುದು, ಗೋಡೆ ಮತ್ತು ಮನೆಗಳ ಛಾವಣಿ ಕುಸಿದಿರುವುದು ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ. ಅಲ್ಲದೆ 170ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿದ್ದು, 227 ಮನೆಗಳು ಹಾನಿಗೊಳಗಾಗಿವೆ.

ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಯೋಗಿ

ಘಟನೆ ಕುರಿತು ತೀವ್ರ ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೂಡಲೇ ಹಾನಿಯ ಸಮೀಕ್ಷೆ ನಡೆಸಿ 24 ಗಂಟೆಗಳ ಒಳಗೆ ಬಾಧಿತ ಕುಟುಂಬಗಳಿಗೆ ಪರಿಹಾರ ತಲುಪಿಸುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ. ಜೊತೆಗೆ ಬೆಳೆ ಹಾನಿ ಮತ್ತು ಜಾನುವಾರುಗಳ ಸಾವಿಗೆ ತಕ್ಕ ಪರಿಹಾರ ನೀಡಲು ಆದೇಶಿಸಿದ್ದಾರೆ.

ನದಿ ಸೇತುವೆಗಳಿಗೆ ಹಾನಿ: ಆತಂಕದ ಕ್ಷಣಗಳು

ಭದೋಹಿಯ ರಾಂಪುರದಲ್ಲಿ ಚಂಡಮಾರುತದ ಹೊಡೆತಕ್ಕೆ ಗಂಗಾನದಿಯ ಪಾಂಟೂನ್ ಸೇತುವೆ (ತೇಲುವ ಸೇತುವೆ) ಹಾನಿಗೊಳಗಾಗಿ ಹಲವರು ನದಿಗೆ ಬಿದ್ದಿದ್ದರು, ಆದರೆ ಅದೃಷ್ಟವಶಾತ್ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮಿರ್ಜಾಪುರದಲ್ಲೂ ಸೇತುವೆ ಹಾನಿಯಾಗಿದ್ದು, ಸುಮಾರು 20 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ಸಾವು-ನೋವಿನ ಭೀಕರ ಚಿತ್ರಣ

ಉತ್ತರ ಪ್ರದೇಶದ ಚಂಡಮಾರುತವು ರಾಜ್ಯಾದ್ಯಂತ ಭೀಕರ ಸಾವು-ನೋವಿನ ಚಿತ್ರಣವನ್ನು ಸೃಷ್ಟಿಸಿದ್ದು, ಪ್ರತಾಪ್‌ಗಢದಲ್ಲಿ ಸಿಡಿಲು ಬಡಿತ ಮತ್ತು ಗೋಡೆ ಕುಸಿತದಿಂದ ನಾಲ್ವರು ಸಾವನ್ನಪ್ಪಿದ್ದರೆ, ಕಾನ್ಪುರ ದೇಹಾತ್‌ನಲ್ಲಿ ಮಳೆಯಿಂದ ಆಶ್ರಯ ಪಡೆಯುತ್ತಿದ್ದ 19 ವರ್ಷದ ಯುವತಿ ಸಿಡಿಲಿಗೆ ಬಲಿಯಾಗಿದ್ದಾಳೆ; ಇನ್ನುಳಿದಂತೆ ಸೋನಭದ್ರಾದಲ್ಲಿ ಮರ ಬುಡಮೇಲಾಗಿ ಬಿದ್ದು 38 ವರ್ಷದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದರೆ, ದೇವೋರಿಯಾದಲ್ಲಿ ಸಿಡಿಲು ಬಡಿದು ಇಬ್ಬರು ರೈತರು ಸಾವನ್ನಪ್ಪುವ ಮೂಲಕ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ.

ಗಂಟೆಗೆ 100 ಕಿ.ಮೀ ವೇಗದ ಗಾಳಿ!

ಭಾರತೀಯ ಹವಾಮಾನ ಇಲಾಖೆ (IMD) ಹಿರಿಯ ವಿಜ್ಞಾನಿ ಅತುಲ್ ಕುಮಾರ್ ಸಿಂಗ್ ಅವರ ಪ್ರಕಾರ, ಈ ಋತುವಿನಲ್ಲಿ ಚಂಡಮಾರುತ ಸಾಮಾನ್ಯವಾದರೂ, ಈ ಬಾರಿಯ ತೀವ್ರತೆ ಅಸಾಮಾನ್ಯವಾಗಿತ್ತು. ರಾಜ್ಯದ ಕೆಲವು ಭಾಗಗಳಲ್ಲಿ ಗಾಳಿಯ ವೇಗ ಗಂಟೆಗೆ 100 ಕಿ.ಮೀ ಗಿಂತಲೂ ಹೆಚ್ಚಿತ್ತು. ಸೌತ್ ರಾಜಸ್ಥಾನದ ಕಡೆಯಿಂದ ಬೀಸಿದ ಪೂರ್ವ ಗಾಳಿ ಮತ್ತು ಸೈಕ್ಲೋನಿಕ್ ಸರ್ಕ್ಯುಲೇಶನ್ ಪ್ರಭಾವದಿಂದ ಈ ವಿನಾಶಕಾರಿ ವಾತಾವರಣ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read More
Next Story