ಟ್ವಿಶಾ ಶರ್ಮಾ ಸಾವು ಪ್ರಕರಣ: ಪ್ರಮುಖ ಸಾಕ್ಷಿ ಮೇಲೆ ದಾಳಿ, ಕೋರ್ಟ್‌ಗೆ ಹೋಗದಂತೆ ಬೆದರಿಕೆ!
x

ಟ್ವಿಶಾ ಶರ್ಮಾ ಸಾವು ಪ್ರಕರಣ: ಪ್ರಮುಖ ಸಾಕ್ಷಿ ಮೇಲೆ ದಾಳಿ, ಕೋರ್ಟ್‌ಗೆ ಹೋಗದಂತೆ ಬೆದರಿಕೆ!

ಭೋಪಾಲ್‌ನ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣದ ಪ್ರಮುಖ ಸಾಕ್ಷಿ ನೀರಜ್ ದುಬೆ ಮೇಲೆ ಆರೋಪಿ ಪತಿಯ ಸ್ನೇಹಿತರಿಂದ ಹಲ್ಲೆ. ಸಿಸಿಟಿವಿ ದೃಶ್ಯ ವೈರಲ್ ಆಗಿದೆ.


Click the Play button to hear this message in audio format

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಾರೀ ಸಂಚಲನ ಮೂಡಿಸಿರುವ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯೊಬ್ಬರ ಮೇಲೆ ಆರೋಪಿ ಪತಿಯ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಆರೋಪಿ ಸಮರ್ಥ್ ಸಿಂಗ್ ಮನೆಯ ಸಮೀಪವೇ ಸಲೂನ್ ನಡೆಸುತ್ತಿರುವ ನೀರಜ್ ದುಬೆ ಎಂಬುವವರ ಮೇಲೆ ಮೇ 30 ರಂದು ಈ ಹಲ್ಲೆ ನಡೆದಿದೆ. ಕೋರ್ಟ್‌ನಲ್ಲಿ ಸಾಕ್ಷಿ ನುಡಿಯದಂತೆ ತಮಗೆ ಒತ್ತಡ ಹೇರಲು ಸಮರ್ಥ್ ಸಿಂಗ್ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ.

ದಾಳಿಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿದ್ದು, ಅದರಲ್ಲಿ ನಾಲ್ಕೈದು ಜನರ ಗುಂಪು ದುಬೆ ಅವರನ್ನು ಸುತ್ತುವರಿದು ಹಲ್ಲೆ ನಡೆಸುತ್ತಿರುವುದು ಮತ್ತು ದುಬೆ ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿದೆ. "ನೀನು ಯಾಕೆ ಈ ಕೇಸ್‌ನಲ್ಲಿ ಸಾಕ್ಷಿಯಾಗಿದ್ದೀಯಾ?" ಎಂದು ಆ ಗುಂಪು ಪ್ರಶ್ನಿಸಿ ಗಲಾಟೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಾಣಭಯದಲ್ಲಿದ್ದೇನೆ; ರಕ್ಷಣೆ ಕೋರಿದ ಸಾಕ್ಷಿ

ಘಟನೆ ಕುರಿತು ಮಾಹಿತಿ ನೀಡಿರುವ ನೀರಜ್ ದುಬೆ, "ನಾನು ನನ್ನ ಪಾರ್ಲರ್ ಬಳಿ ಇದ್ದಾಗ ಸಮರ್ಥ್ ಸಿಂಗ್‌ನ ನಾಲ್ಕೈದು ಸ್ನೇಹಿತರು ಬಂದು ನನ್ನನ್ನು ಸುತ್ತುವರಿದರು. ಅಸಭ್ಯ ಪದಗಳಿಂದ ನಿಂದಿಸಿ, ಟ್ವಿಶಾ ಶರ್ಮಾ ಕೇಸ್‌ನಲ್ಲಿ ಸಾಕ್ಷಿ ಹೇಳದಂತೆ ಎಚ್ಚರಿಕೆ ನೀಡಿದರು. ನಾನು ಇದನ್ನು ವಿರೋಧಿಸಿದಾಗ ನನ್ನ ಮೇಲೆ ದಾಳಿ ಮಾಡಿದರು. ಈಗ ನನಗೆ ನನ್ನ ಪ್ರಾಣದ ಭಯವಿದೆ, ಹೀಗಾಗಿ ಪೊಲೀಸರು ನನಗೆ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು" ಎಂದು ಮನವಿ ಮಾಡಿದ್ದಾರೆ.

ಘಟನೆ ನಡೆದ ತಕ್ಷಣವೇ ದುಬೆ ಕಟಾರಾ ಹಿಲ್ಸ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಸದ್ಯ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಕಳೆದ ಏಪ್ರಿಲ್ 12 ರಂದು ಟ್ವಿಶಾ ಶರ್ಮಾ ಅವರು ತಮ್ಮ ಅತ್ತೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದಾದ ಬಳಿಕ ಟ್ವಿಶಾ ಕುಟುಂಬಸ್ಥರು ಆಕೆಯ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದರು.

ಸದ್ಯ ಈ ತಾಯಿ-ಮಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಪೊಲೀಸರು ಇಬ್ಬರನ್ನೂ ಕಟಾರಾ ಹಿಲ್ಸ್‌ನಲ್ಲಿರುವ ಅವರ ಮನೆಗೆ ಕರೆತಂದು, ಟ್ವಿಶಾ ಸಾವನ್ನಪ್ಪಿದ ರಾತ್ರಿ ಏನಾಗಿತ್ತು ಎಂಬುದನ್ನು ಮರುಸೃಷ್ಟಿಸಿ (Crime Scene Recreation) ವಿಧಿವಿಜ್ಞಾನ (Forensic) ತನಿಖೆಯನ್ನು ನಡೆಸಿದ್ದಾರೆ. ಈ ಬೆನ್ನಲ್ಲೇ ಸಾಕ್ಷಿಯ ಮೇಲೆ ದಾಳಿ ನಡೆದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

Read More
Next Story