
ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಉಚ್ಚಾಟಿತ ನಾಯಕ ರಿತಬ್ರತ ಬ್ಯಾನರ್ಜಿ
ಮಮತಾ ಬ್ಯಾನರ್ಜಿ ಚಿತ್ರಕ್ಕೆ ಕೊಕ್, ಚಿಹ್ನೆಗಾಗಿ ಕದನ: ತೃಣಮೂಲ ಕಾಂಗ್ರೆಸ್‌ನಲ್ಲಿ ಬಹಿರಂಗ ದಂಗೆ!
ಟಿಎಂಸಿ ಜಂಟಿ ರಾಷ್ಟ್ರೀಯ ಕಾರ್ಯದರ್ಶಿ ಡೋಲಾ ಸೇನ್ ಅವರು ಬಂಡಾಯ ನಾಯಕರ ವಿರುದ್ಧ ನ್ಯೂ ಟೌನ್ ಮತ್ತು ಪ್ರಗತಿ ಮೈದಾನ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನಡೆಯ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿನ ಆಂತರಿಕ ಭಿನ್ನಮತ ಈಗ ಬಹಿರಂಗ ದಂಗೆಯಾಗಿ ಮಾರ್ಪಟ್ಟಿದೆ. ಉಚ್ಚಾಟಿತ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು ಕೋಲ್ಕತ್ತಾದಲ್ಲಿ ಸರಣಿ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ನಾಯಕತ್ವಕ್ಕೆ ಬಹಿರಂಗ ಸವಾಲು ಹಾಕಿದೆ.
ಭಾನುವಾರ (ಜೂ. 28) ಪೂರ್ವ ಕೋಲ್ಕತ್ತಾದ ಟೋಪ್ಸಿಯಾದಲ್ಲಿರುವ ಖಾಸಗಿ ಔತಣಕೂಟ ಸಭಾಂಗಣದಲ್ಲಿ ನಡೆದ ಬಂಡಾಯ ಬಣದ ಸಭೆಯು ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಸಭೆಯಲ್ಲಿ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ) ನ ಸುಮಾರು 47 ಮಾಜಿ ಕೌನ್ಸಿಲರ್‌ಗಳು ಭಾಗವಹಿಸಿದ್ದರು ಎನ್ನಲಾಗಿದೆ. ಮುಂಬರುವ ನಾಗರಿಕ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದಲ್ಲಿ ಪಕ್ಷದ ಬೆಂಬಲ ನೆಲೆಯನ್ನು ಮರುನಿರ್ಮಾಣ ಮಾಡುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕೇವಲ ಒಂದು ವಾರದ ಅವಧಿಯಲ್ಲಿ ಮಾಜಿ ಕೌನ್ಸಿಲರ್‌ಗಳೊಂದಿಗೆ ಭಿನ್ನಮತೀಯರು ನಡೆಸಿದ ಎರಡನೇ ಸಭೆ ಇದಾಗಿದೆ.
ಮಾಯವಾದ ಮಮತಾ ಚಿತ್ರ; ಚಿಹ್ನೆಗಾಗಿ ಕದನ!
ಕುತೂಹಲಕಾರಿ ಅಂಶವೆಂದರೆ, ನ್ಯೂ ಟೌನ್ ಹಾಗೂ ಟೋಪ್ಸಿಯಾದಲ್ಲಿ ನಡೆದ ಎರಡೂ ಸಭೆಗಳ ಬ್ಯಾನರ್ ಮತ್ತು ಫಲಕಗಳಲ್ಲಿ ಟಿಎಂಸಿ ಪಕ್ಷದ ಅಧಿಕೃತ ಹೆಸರಾದ ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಮತ್ತು ಅದರ ‘ಜೋಡಾ ಫೂಲ್’ (ಹುಲ್ಲು ಮತ್ತು ಅವಳಿ ಹೂವು) ಚಿಹ್ನೆಯನ್ನು ಪ್ರದರ್ಶಿಸಲಾಗಿತ್ತು. ಆದರೆ, ಬ್ಯಾನರ್‌ಗಳಲ್ಲಿ ಪಕ್ಷದ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಅವರ ಚಿತ್ರಗಳನ್ನು ತೆಗೆದುಹಾಕಲಾಗಿತ್ತು.
ನಾವೇ ನಿಜವಾದ ತೃಣಮೂಲ ಕಾಂಗ್ರೆಸ್
"ನಮ್ಮ ಬಳಿ ಸಂಖ್ಯಾಬಲವಿದೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ನಾವೇ ಪ್ರಮುಖ ವಿರೋಧ ಪಕ್ಷವಾಗಿದ್ದೇವೆ. ನಮ್ಮ ನ್ಯಾಯಸಮ್ಮತತೆಯ ಬಗ್ಗೆ ಯಾವುದೇ ಅನುಮಾನ ಬೇಡ. ನಾವು ಈಗಾಗಲೇ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದೇವೆ ಮತ್ತು ಶೀಘ್ರದಲ್ಲೇ ನಮ್ಮ ರಾಜಕೀಯ ಕಾರ್ಯಕ್ರಮಗಳನ್ನು ಅಧಿಕೃತವಾಗಿ ಘೋಷಿಸುತ್ತೇವೆ." ಎಂದು ಬಂಡಾಯ ಟಿಎಂಸಿ ಶಾಸಕ ಸಂದೀಪನ್ ಸಹಾ ತಿಳಿಸಿದ್ದಾರೆ.
'ಕಾಲಿಘಾಟ್ ವಿಂಗ್' ತಿರುಗೇಟು; ಪೊಲೀಸ್ ದೂರು ದಾಖಲು
ಬಂಡಾಯ ಶಾಸಕರ ಈ ನೀತಿಗೆ ಮಮತಾ ಬ್ಯಾನರ್ಜಿ ನಿಷ್ಠಾವಂತರು ಹಾಗೂ ಪಕ್ಷದ ‘ಕಾಲಿಘಾಟ್ ವಿಂಗ್’ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಟಿಎಂಸಿ ಜಂಟಿ ರಾಷ್ಟ್ರೀಯ ಕಾರ್ಯದರ್ಶಿ ಡೋಲಾ ಸೇನ್ ಅವರು ಬಂಡಾಯ ನಾಯಕರ ವಿರುದ್ಧ ನ್ಯೂ ಟೌನ್ ಮತ್ತು ಪ್ರಗತಿ ಮೈದಾನ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಬಂಡಾಯಗಾರರು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕಾನೂನುಬಾಹಿರವಾಗಿ "ನಕಲು ಮತ್ತು ಅನುಕರಣೆ" ಮಾಡುತ್ತಿದ್ದಾರೆ ಮತ್ತು ಅನಧಿಕೃತ ಸಭೆಗಳ ಮೂಲಕ ಸುಳ್ಳು ದಾಖಲೆಗಳನ್ನು ಹರಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೆಎಂಸಿ ಮಂಡಳಿ ವಿಸರ್ಜನೆ
ಇತ್ತೀಚೆಗಷ್ಟೇ ಜೂ. 8 ರಂದು ಪಶ್ಚಿಮ ಬಂಗಾಳ ಸರ್ಕಾರವು ಕೆಎಂಸಿ ಮಂಡಳಿಯನ್ನು ವಿಸರ್ಜಿಸಿತ್ತು. ಮೇಯರ್ ಫಿರ್ಹಾದ್ ಹಕೀಮ್ ರಾಜೀನಾಮೆ ನೀಡಿದ ನಂತರ ಕಾರ್ಯನಿರ್ವಾಹಕ ಅಧಿಕಾರವನ್ನು ಆಡಳಿತಾಧಿಕಾರಿಗೆ ವರ್ಗಾಯಿಸಲಾಗಿತ್ತು. ಮಮತಾ ಅವರ ಆಪ್ತರಾಗಿದ್ದು ಈಗ ಬಂಡಾಯ ಶಿಬಿರದ ಕಡೆ ವಾಲಿದ್ದಾರೆ ಎನ್ನಲಾದ ಫಿರ್ಹಾದ್ ಹಕೀಮ್ ಶನಿವಾರದ ಸಭೆಗೆ ಗೈರಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಮುಗಿದ ನಂತರ ಡಿಸೆಂಬರ್‌ನಲ್ಲಿ ಕೆಎಂಸಿ ಚುನಾವಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈಗಾಗಲೇ ಸೂಚಿಸಿದ್ದು, ಭಿನ್ನಮತೀಯರು ಇದಕ್ಕಾಗಿ ಹೊಸ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದಾರೆ.
ಪಕ್ಷಾಂತರದಿಂದ ಜನಾದೇಶ ಕುಗ್ಗಲ್ಲ: ಮಹುವಾ ಮೊಯಿತ್ರಾ
ಬಂಡಾಯದ ಕುರಿತು ಪ್ರತಿಕ್ರಿಯಿಸಿರುವ ಮಮತಾ ನಿಷ್ಠಾವಂತೆ ಹಾಗೂ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, "ಟಿಎಂಸಿ ಚಿಹ್ನೆಯನ್ನು ಸ್ವತಃ ಮಮತಾ ಬ್ಯಾನರ್ಜಿ ಅವರೇ ರೂಪಿಸಿದ್ದಾರೆ. ಪಕ್ಷದ ಸಾರ್ವಜನಿಕ ಬೆಂಬಲವು ಅವರ ನಾಯಕತ್ವದ ಮೇಲಿದೆಯೇ ಹೊರತು ವೈಯಕ್ತಿಕ ನಾಯಕರ ಮೇಲಲ್ಲ. ಇತ್ತೀಚಿನ ಪಕ್ಷಾಂತರಗಳ ಹೊರತಾಗಿಯೂ ಮಮತಾ ಪರವಾಗಿರುವ 2.6 ಕೋಟಿಗೂ ಹೆಚ್ಚು ಮತದಾರರ ಜನಾದೇಶ ಹಾಗೇ ಇರಲಿದೆ. ಕೆಲವು ಕೌನ್ಸಿಲರ್‌ಗಳು ಅಥವಾ ಶಾಸಕರು ಹೋದ ತಕ್ಷಣ ಪಕ್ಷದ ಬೆಂಬಲದ ನೆಲೆಗೆ ಯಾವುದೇ ಧಕ್ಕೆಯಾಗುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತೃಣಮೂಲ ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪಕ್ಷದ ಹೆಸರು ಮತ್ತು ಚಿಹ್ನೆ ಯಾರಿಗೆ ಸಿಗಲಿದೆ ಎಂಬುದು ಈಗ ಚುನಾವಣಾ ಆಯೋಗ ಮತ್ತು ನ್ಯಾಯಾಲಯದ ಅಂಗಳ ತಲುಪುವ ಸಾಧ್ಯತೆ ದಟ್ಟವಾಗಿದೆ.

