
TCS Nashik Case | ಟಿಸಿಎಸ್ ಲೈಂಗಿಕ ಕಿರುಕುಳ ಪ್ರಕರಣ: 25 ದಿನಗಳಿಂದ ತಲೆಮರೆಸಿಕೊಂಡಿದ್ದ ನಿದಾ ಖಾನ್ ಬಂಧನ
ನಾಸಿಕ್ ಟಿಸಿಎಸ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದ ಆರೋಪಿ ನಿದಾ ಖಾನ್ ಬಂಧನ. 25 ದಿನಗಳ ನಂತರ ಛತ್ರಪತಿ ಸಂಭಾಜಿನಗರದಲ್ಲಿ ಪೊಲೀಸರಿಂದ ಸೆರೆ.
ನಾಸಿಕ್‌ನ ಟಿಸಿಎಸ್ (TCS) ಬಿಪಿಒ ಘಟಕದಲ್ಲಿ ನಡೆದ ಲೈಂಗಿಕ ಕಿರುಕುಳ, ಮಾನಸಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರ ಯತ್ನ ಪ್ರಕರಣದ ಪ್ರಮುಖ ಆರೋಪಿ, ಅಮಾನತುಗೊಂಡಿರುವ ಉದ್ಯೋಗಿ ನಿದಾ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 25 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಈಕೆಯನ್ನು ಛತ್ರಪತಿ ಸಂಭಾಜಿನಗರದಲ್ಲಿ (ಹಿಂದಿನ ಔರಂಗಾಬಾದ್) ಸೆರೆಹಿಡಿಯಲಾಗಿದೆ.
ಪ್ರಕರಣದ ಹಿನ್ನೆಲೆ ಮತ್ತು ಆರೋಪಗಳು:
ನಾಸಿಕ್‌ನ ಟಿಸಿಎಸ್ ಲಭ್ಯವಿರುವ ಬಿಪಿಒ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳು ತಮ್ಮ ಹಿರಿಯ ಸಹೋದ್ಯೋಗಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ನಿದಾ ಖಾನ್ ವಿರುದ್ಧ ಕೇಳಿಬಂದಿರುವ ಪ್ರಮುಖ ದೂರುಗಳೆಂದರೆ ಸಂತ್ರಸ್ತೆಯೊಬ್ಬರಿಗೆ ಇಸ್ಲಾಂ ಧರ್ಮದ ಆಚರಣೆಗಳನ್ನು ಪರಿಚಯಿಸಿ, ಹಿಜಾಬ್ ಮತ್ತು ಬುರ್ಖಾ ಧರಿಸುವಂತೆ ಒತ್ತಾಯಿಸಿದ ಆರೋಪ. ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರು ಆರೋಪಿಗಳ ವಿರುದ್ಧ ದೂರು ನೀಡದಂತೆ ಬೆದರಿಕೆ ಹಾಕಿರುವುದು ಮತ್ತು ಮನವೊಲಿಸಲು ಯತ್ನಿಸಿರುವ ಆರೋಪವೂ ಈಕೆಯ ಮೇಲಿದೆ.
ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ನಡೆಸಿದ ಇತರ ಆರೋಪಿಗಳಿಗೆ ಈಕೆ ಸಹಾಯ ಮಾಡಿದ್ದಾಳೆ ಎನ್ನಲಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT), ಮಲೇಷ್ಯಾ ಮತ್ತು ಮಾಲೆಗಾಂವ್‌ವರೆಗೂ ಈ ಜಾಲ ಹರಡಿರುವ ಶಂಕೆಯನ್ನು ವ್ಯಕ್ತಪಡಿಸಿದೆ. ಉದ್ಯೋಗದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ.
ತಲೆಮರೆಸಿಕೊಂಡಿದ್ದ ನಿದಾ:
ನಿದಾ ಖಾನ್ ನಿರೀಕ್ಷಣಾ ಜಾಮೀನಿಗಾಗಿ ನಾಸಿಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಈಕೆ ತಲೆಮರೆಸಿಕೊಂಡಿದ್ದ ಸಂದರ್ಭದಲ್ಲಿ ಮುಂಬೈನಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ಪೊಲೀಸರು ಈಕೆಯ ಪತಿಯನ್ನು ವಿಚಾರಣೆ ನಡೆಸಿದಾಗ ಮನೆಯನ್ನು ಲಾಕ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು.
ಟಿಸಿಎಸ್ ಘಟಕದಲ್ಲಿ ನಡೆದಿದ್ದೇನು?
18 ರಿಂದ 25 ವರ್ಷದೊಳಗಿನ ಅನೇಕ ಮಹಿಳಾ ಉದ್ಯೋಗಿಗಳು ನೀಡಿದ ದೂರಿನ ಪ್ರಕಾರ ಹಿರಿಯ ಅಧಿಕಾರಿಗಳು ಮತ್ತು ಟೀಮ್ ಲೀಡರ್‌ಗಳು ಮಹಿಳೆಯರಿಗೆ ಅಸಭ್ಯವಾಗಿ ಮುಟ್ಟುವುದು, ಅಶ್ಲೀಲ ಕಮೆಂಟ್ ಮಾಡುವುದು ಮತ್ತು ಮದುವೆಯ ಆಮಿಷವೊಡ್ಡಿ ಲೈಂಗಿಕ ಶೋಷಣೆ ಮಾಡುತ್ತಿದ್ದರು.
ಕಚೇರಿಯೊಳಗೆ ನಮಾಜ್ ಮಾಡುವಂತೆ ಒತ್ತಾಯಿಸುವುದು, ಮಾಂಸಾಹಾರ ಸೇವಿಸಲು ಬಲವಂತ ಮಾಡುವುದು ಮತ್ತು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ದಾನಿಶ್ ಶೇಖ್, ತೌಸಿಫ್ ಅತ್ತಾರ್, ರಜಾ ಮೆಮನ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇದೀಗ ನಿದಾ ಖಾನ್ ಬಂಧನದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಟಿಸಿಎಸ್ ಸಂಸ್ಥೆಯು ಈ ಬಗ್ಗೆ ಆಂತರಿಕ ತನಿಖೆಗಾಗಿ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಿದೆ. ಆದರೆ ಕಂಪನಿಯ ಆಂತರಿಕ ಎಥಿಕ್ಸ್ ಅಥವಾ ಪೋಷ್ (POSH) ಸಮಿತಿಗೆ ಈ ಹಿಂದೆ ಇಂತಹ ಯಾವುದೇ ಅಧಿಕೃತ ದೂರುಗಳು ಬಂದಿರಲಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

