
ಪಶ್ಚಿಮ ಬಂಗಾಳದ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ; 7 ಮಂದಿ ಸಜೀವ ದಹನ, ಹಲವರಿಗೆ ಗಂಭೀರ ಗಾಯ
ದೇವಸ್ಥಾನಗಳ ನಗರಿ ತಾರಾಪೀಠದಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲ್‌ನ ನೆಲಮಹಡಿಯಲ್ಲಿ ಸೋಮವಾರ ಮುಂಜಾನೆ ಸುಮಾರು 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಗಾಢ ನಿದ್ರೆಯಲ್ಲಿದ್ದ ಏಳು ಜನ ದುರಂತ ಅಂತ್ಯ ಕಂಡಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಹೋಟೆಲ್‌ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ಮಂದಿ ಸಜೀವ ದಹನಗೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನಗಳ ನಗರಿ ತಾರಾಪೀಠದಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲ್‌ನ ನೆಲಮಹಡಿಯಲ್ಲಿ ಸೋಮವಾರ ಮುಂಜಾನೆ ಸುಮಾರು 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಹೋಟೆಲ್‌ನಲ್ಲಿದ್ದ ಬಹುತೇಕ ಅತಿಥಿಗಳು ನಿದ್ರೆಯಲ್ಲಿದ್ದರು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿವೆ. ಕೆಲಕಾಲದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ರಾಮ್‌ಪುರಹಾಟ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಆರಂಭದಲ್ಲಿ ಐವರು ಮೃತಪಟ್ಟಿರುವುದು ದೃಢಪಟ್ಟಿತ್ತು. ಬಳಿಕ ಪೊಲೀಸರು ಸಾವಿನ ಸಂಖ್ಯೆಯನ್ನು ಏಳಕ್ಕೆ ಪರಿಷ್ಕರಿಸಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ವಿವರಗಳು ನಿರೀಕ್ಷಿಸಲಾಗುತ್ತಿದೆ.

