ಜಾರ್ಖಂಡ್ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ವಿಧಿವಶ
x

ಜಾರ್ಖಂಡ್ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ವಿಧಿವಶ

ಸುದಿವ್ಯ ಕುಮಾರ್ ಸೋನು ಅವರ ನಿಧನಕ್ಕೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಂತಾಪ ಸೂಚಿಸಿದ್ದು, ಸುದಿವ್ಯ ಕುಮಾರ್ ಅವರನ್ನು ತಮ್ಮ ವಿಶ್ವಾಸಾರ್ಹ ಸಹಚರ, ಮಾರ್ಗದರ್ಶಕ ಹಾಗೂ ಜಾರ್ಖಂಡ್‌ ಚಳವಳಿಯ ಬದ್ಧ ಹೋರಾಟಗಾರ ಎಂದು ಸ್ಮರಿಸಿದ್ದಾರೆ.


Click the Play button to hear this message in audio format

ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಹಿರಿಯ ನಾಯಕ ಹಾಗೂ ಜಾರ್ಖಂಡ್‌ನ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಶನಿವಾರ ತಡರಾತ್ರಿ ಆರೋಗ್ಯದಲ್ಲಿ ಏಕಾಏಕಿ ಏರುಪೇರಾದ ಹಿನ್ನೆಲೆಯಲ್ಲಿ ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ಪಕ್ಷ ತಿಳಿಸಿದೆ. ಗಿರಿಡಿಹ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವರು ಪ್ರವಾಸೋದ್ಯಮ, ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ಯುವ ವ್ಯವಹಾರಗಳ ಖಾತೆಗಳ ಜವಾಬ್ದಾರಿಯನ್ನೂ ಹೊಂದಿದ್ದರು.

ಸುದಿವ್ಯ ಕುಮಾರ್ ಸೋನು ಅವರ ನಿಧನಕ್ಕೆ JMM ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪಕ್ಷದ ಪ್ರಕಾರ, ಅವರ ಅಕಾಲಿಕ ನಿಧನವು ಪಕ್ಷ, ಸರ್ಕಾರ ಹಾಗೂ ಇಡೀ ಜಾರ್ಖಂಡ್‌ಗೆ ತುಂಬಲಾರದ ನಷ್ಟವಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡ ಸಂತಾಪ ಸೂಚಿಸಿದ್ದು, ಸುದಿವ್ಯ ಕುಮಾರ್ ಅವರನ್ನು ತಮ್ಮ ವಿಶ್ವಾಸಾರ್ಹ ಸಹಚರ, ಮಾರ್ಗದರ್ಶಕ ಹಾಗೂ ಜಾರ್ಖಂಡ್‌ ಚಳವಳಿಯ ಬದ್ಧ ಹೋರಾಟಗಾರ ಎಂದು ಸ್ಮರಿಸಿದ್ದಾರೆ.

ರಾಜ್ಯದ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ಅವರು ನೀಡಿದ ಕೊಡುಗೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸೊರೆನ್ ಹೇಳಿದ್ದಾರೆ. ಸಾರಿಗೆ, ಕಂದಾಯ ಮತ್ತು ಭೂ ಸುಧಾರಣೆ ಸಚಿವ ದೀಪಕ್ ಬಿರುವಾ ಕೂಡ ಸಂತಾಪ ಸೂಚಿಸಿ, ಶನಿವಾರ ರಾತ್ರಿ ಸುದಿವ್ಯ ಕುಮಾರ್ ಅವರ ಆರೋಗ್ಯ ಏಕಾಏಕಿ ಹದಗೆಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿಸಿದ್ದಾರೆ.

2019ರಲ್ಲಿ ಗಿರಿಡಿಹ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸುದಿವ್ಯ ಕುಮಾರ್ ಸೋನು ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮುಖ್ಯಮಂತ್ರಿ ಹೆಮಂತ್ ಸೊರೆನ್ ಅವರ ಆಪ್ತ ಸಹಾಯಕರಾಗಿ ಗುರುತಿಸಿಕೊಂಡಿದ್ದ ಅವರು, 2024ರಲ್ಲಿ ಭೂ ಅಕ್ರಮ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೊರೆನ್ ಬಂಧನಕ್ಕೊಳಗಾದ ನಂತರ JMM ಎದುರಿಸಿದ ಹಲವು ರಾಜಕೀಯ ಸವಾಲುಗಳ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಿರಿಯ ಸಚಿವ ಹಾಗೂ ಪಕ್ಷದ ಪ್ರಮುಖ ತಂತ್ರಗಾರರಾಗಿದ್ದ ಅವರ ನಿಧನದಿಂದ ಆಡಳಿತಾರೂಢ JMM ಹಾಗೂ ಜಾರ್ಖಂಡ್ ಸರ್ಕಾರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಕೆಲವೇ ದಿನಗಳ ಮೊದಲು ಸುದಿವ್ಯ ಕುಮಾರ್ ಸೋನು ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಜಾರ್ಖಂಡ್ ಸರ್ಕಾರದ ನಿಯೋಗದ ನೇತೃತ್ವ ವಹಿಸಿದ್ದ ಅವರು ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯ ಹಾಗೂ ನಿರ್ವಹಣಾ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದ್ದರು. ಈ ವೇಳೆ ಕರ್ನಾಟಕ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿಯಾಗಿ ಪ್ರವಾಸೋದ್ಯಮ ಮತ್ತು ಅರಣ್ಯ ನಿರ್ವಹಣೆ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳ ಕುರಿತು ಚರ್ಚಿಸಿದ್ದರು.

Read More
Next Story