ಮುಂಬೈ ಕುಟುಂಬದ ನಾಲ್ವರ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಲ್ಲಂಗಡಿ ಕಾರಣವಲ್ಲ, ಪ್ರಾಣ ತೆಗೆದದ್ದು ಇಲಿ ಪಾಷಾಣ!
x

ಮುಂಬೈ ಕುಟುಂಬದ ನಾಲ್ವರ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಲ್ಲಂಗಡಿ ಕಾರಣವಲ್ಲ, ಪ್ರಾಣ ತೆಗೆದದ್ದು ಇಲಿ ಪಾಷಾಣ!

ಮುಂಬೈನಲ್ಲಿ ಒಂದೇ ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರಣವಲ್ಲ, ಇಲಿ ಪಾಷಾಣದಲ್ಲಿರುವ 'ಜಿಂಕ್ ಫಾಸ್ಫೈಟ್' ಕಾರಣ ಎಂದು ವಿಧಿವಿಜ್ಞಾನ ವರದಿ ತಿಳಿಸಿದೆ.


ಮುಂಬೈನ ಒಂದೇ ಕುಟುಂಬದ ನಾಲ್ವರು ಸದಸ್ಯರು ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಈಗ ಆಘಾತಕಾರಿ ಸತ್ಯ ಹೊರಬಿದ್ದಿದೆ. ಆರಂಭದಲ್ಲಿ ಕರಬೂಜ ಹಣ್ಣು ತಿಂದಿದ್ದರಿಂದ ಆಹಾರ ವಿಷಪೂರಿತವಾಗಿ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಆದರೆ, ವಿಧಿವಿಜ್ಞಾನ ಪರೀಕ್ಷೆಯ ವರದಿಯು ಸಾವಿಗೆ 'ಇಲಿ ಪಾಷಾಣ' ಕಾರಣ ಎಂದು ಸ್ಪಷ್ಟಪಡಿಸಿದೆ.

ತನಿಖೆಯಲ್ಲಿ ಬಯಲಾದ ಭಯಾನಕ ಸತ್ಯ:

ಮೃತರ ದೇಹದ ಅಂಗಾಂಗಗಳು ಮತ್ತು ಅವರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನ ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ 'ಜಿಂಕ್ ಫಾಸ್ಫೈಟ್' (Zinc Phosphite) ಎಂಬ ವಿಷಕಾರಿ ರಾಸಾಯನಿಕ ಪತ್ತೆಯಾಗಿದೆ. ಇದು ಸಾಮಾನ್ಯವಾಗಿ ಇಲಿಗಳನ್ನು ಕೊಲ್ಲಲು ಬಳಸುವ ಪಾಷಾಣದಲ್ಲಿ ಇರುತ್ತದೆ.

ಹಸಿರು ಬಣ್ಣಕ್ಕೆ ತಿರುಗಿದ್ದ ಅಂಗಾಂಗಗಳು: ಶವಪರೀಕ್ಷೆಯ ಸಂದರ್ಭದಲ್ಲಿ ಮೃತರ ಮೆದುಳು, ಹೃದಯ ಮತ್ತು ಕರುಳು ಸೇರಿದಂತೆ ಆಂತರಿಕ ಅಂಗಾಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿತ್ತು. ಇದು ದೇಹದಲ್ಲಿ ತೀವ್ರವಾದ ವಿಷ ಸೇರಿರುವುದರ ಸಂಕೇತವಾಗಿತ್ತು. ಕುಟುಂಬದ ಮುಖ್ಯಸ್ಥ ಅಬ್ದುಲ್ಲಾ ಡೊಕಾಡಿಯಾ ಅವರ ದೇಹದಲ್ಲಿ 'ಮಾರ್ಫಿನ್' ಎಂಬ ಪ್ರಬಲ ನೋವು ನಿವಾರಕದ ಅಂಶವೂ ಪತ್ತೆಯಾಗಿದೆ. ಇದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಂದು ನಡೆದಿದ್ದೇನು?

ಅಬ್ದುಲ್ಲಾ ಡೊಕಾಡಿಯಾ (45), ಅವರ ಪತ್ನಿ ನಸ್ರೀನ್ (35), ಮತ್ತು ಮಕ್ಕಳಾದ ಜೈನಬ್ (13) ಹಾಗೂ ಆಯೇಷಾ (16) ತಮ್ಮ ಮುಂಬೈ ನಿವಾಸದಲ್ಲಿ ಸಂಬಂಧಿಕರಿಗೆ ಔತಣಕೂಟ ಏರ್ಪಡಿಸಿದ್ದರು. ಎಲ್ಲರೂ ಮಟನ್ ಪುಲಾವ್ ಸೇವಿಸಿದ್ದರು. ಸಂಬಂಧಿಕರು ಹೋದ ನಂತರ, ಅಂದರೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಕುಟುಂಬದವರು ಕರಬೂಜ ಹಣ್ಣು ಸೇವಿಸಿದ್ದರು. ಮುಂಜಾನೆ 5 ಗಂಟೆಯ ಹೊತ್ತಿಗೆ ಎಲ್ಲರಿಗೂ ತೀವ್ರ ವಾಂತಿ ಮತ್ತು ಭೇದಿ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ನಾಲ್ವರೂ ಸಾವನ್ನಪ್ಪಿದ್ದರು.

ಸಂಬಂಧಿಕರು ಸೇಫ್, ಇವರು ಮಾತ್ರ ಸಾವು ಯಾಕೆ?

ಗಮನಾರ್ಹ ಸಂಗತಿಯೆಂದರೆ, ಅಂದು ಔತಣಕೂಟದಲ್ಲಿ ಭಾಗವಹಿಸಿ ಪುಲಾವ್ ತಿಂದಿದ್ದ ಸಂಬಂಧಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ, ಪುಲಾವ್ ಮೇಲೆ ಇದ್ದ ಅನುಮಾನ ದೂರವಾಗಿತ್ತು. ಆದರೆ ಕಲ್ಲಂಗಡಿ ಹಣ್ಣಿನಲ್ಲಿ ವಿಷದ ಅಂಶ ಪತ್ತೆಯಾಗಿರುವುದು ಈಗ ದೊಡ್ಡ ರಹಸ್ಯವಾಗಿ ಪರಿಣಮಿಸಿದೆ.

ತನಿಖಾಧಿಕಾರಿಗಳ ಪ್ರಶ್ನೆ: ಈ ವಿಷಕಾರಿ ರಾಸಾಯನಿಕವು ಹಣ್ಣಿಗೆ ಆಕಸ್ಮಿಕವಾಗಿ ಅಂಟಿಕೊಂಡಿತೇ? ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಣ್ಣಿಗೆ ವಿಷವನ್ನು ಚುಚ್ಚಿದ್ದರೇ? ಎಂಬ ನಿಟ್ಟಿನಲ್ಲಿ ಪೊಲೀಸರು ಈಗ ತನಿಖೆ ಚುರುಕುಗೊಳಿಸಿದ್ದಾರೆ.

Read More
Next Story