Samrat Choudhary| ಬಿಹಾರ ಸಿಎಂ ಆಗಿ ಸಾಮ್ರಾಟ್ ಚೌಧರಿ ಪದಗ್ರಹಣ: ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ಚುಕ್ಕಾಣಿ!
x

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಪ್ರಭಾವಿ ನಾಯಕ ಸಾಮ್ರಾಟ್ ಚೌಧರಿ ಇಂದು ಪ್ರಮಾಣವಚನ ಸ್ವೀಕರಿಸಿದರು.

Samrat Choudhary| ಬಿಹಾರ ಸಿಎಂ ಆಗಿ ಸಾಮ್ರಾಟ್ ಚೌಧರಿ ಪದಗ್ರಹಣ: ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ಚುಕ್ಕಾಣಿ!

ಬಿಹಾರದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ರಾಜ್ಯದ ಹೊಸ ರಾಜಕೀಯ ಬದಲಾವಣೆ ಮತ್ತು ಅದರ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಬಿಹಾರದ ಮುಖ್ಯಮಂತ್ರಿಯಾಗಿ ಬಿಜೆಪಿಯ ಪ್ರಭಾವಿ ನಾಯಕ ಸಾಮ್ರಾಟ್ ಚೌಧರಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಬಿಹಾರದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಿಜೆಪಿಯ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಇಲ್ಲಿಯವರೆಗೆ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಉತ್ತರಾಖಂಡ ಮತ್ತು ಹರಿಯಾಣಗಳಲ್ಲಿ ಬಿಜೆಪಿ ಅಧಿಕಾರ ಹೊಂದಿದ್ದರೂ, ಬಿಹಾರದಲ್ಲಿ ಮಾತ್ರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡೇ ಆಡಳಿತ ನಡೆಸುತ್ತಿತ್ತು. ಆದರೆ ಇಂದು ಸಾಮ್ರಾಟ್ ಚೌಧರಿ ಅವರ ಪದಗ್ರಹಣದೊಂದಿಗೆ ಬಿಹಾರ ಕೂಡ ಬಿಜೆಪಿಯ ನೇರ ಆಡಳಿತವಿರುವ ರಾಜ್ಯಗಳ ಪಟ್ಟಿಗೆ ಸೇರ್ಪಡೆಯಾದಂತಾಗಿದೆ.

ಸುಮಾರು ಎರಡು ದಶಕಗಳ ಕಾಲ ಬಿಹಾರದ ಆಡಳಿತ ಚುಕ್ಕಾಣಿ ಹಿಡಿದಿದ್ದ ನಿತೀಶ್ ಕುಮಾರ್ ಅವರು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ನಿರ್ಗಮನದ ನಂತರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾಮ್ರಾಟ್ ಚೌಧರಿ ಅವರನ್ನು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತ್ತು.

ಬುಧವಾರ ಪಟ್ನಾದ ರಾಜಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಬಿಹಾರದ ಅಭಿವೃದ್ಧಿಗೆ ಹೊಸ ವೇಗ ನೀಡುವ ಸಂಕಲ್ಪದೊಂದಿಗೆ ಸಾಮ್ರಾಟ್ ಚೌಧರಿ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಯಾರು ಈ ಸಾಮ್ರಾಟ್ ಚೌಧರಿ?

57 ವರ್ಷದ ಸಾಮ್ರಾಟ್ ಚೌಧರಿ ಅವರು ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಇವರ ತಂದೆ ಶಕುನಿ ಚೌಧರಿ ಆರು ಬಾರಿ ಶಾಸಕರಾಗಿದ್ದವರು. 1990ರಲ್ಲಿ ರಾಜಕೀಯ ಪ್ರವೇಶಿಸಿದ ಸಾಮ್ರಾಟ್, ಈ ಹಿಂದೆ ಕೃಷಿ, ಹಣಕಾಸು ಮತ್ತು ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಆರ್.ಜೆ.ಡಿ ಮತ್ತು ಜೆ.ಡಿ.ಯು ಪಕ್ಷಗಳಲ್ಲಿದ್ದ ಇವರು, 2014ರಲ್ಲಿ ಬಿಜೆಪಿಯನ್ನು ಸೇರಿದರು. ಕಳೆದ ಒಂದು ದಶಕದಿಂದ ಬಿಜೆಪಿಯ ನಿಷ್ಠಾವಂತ ನಾಯಕನಾಗಿ ಗುರುತಿಸಿಕೊಂಡಿರುವ ಇವರು, ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಿತೀಶ್ ಕುಮಾರ್ ಯುಗದ ಅಂತ್ಯ

ಬಿಹಾರ ರಾಜಕಾರಣದ ಧ್ರುವತಾರೆ, ಸುಮಾರು ಎರಡು ದಶಕಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿದಿದ್ದ ನಿತೀಶ್ ಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸುದೀರ್ಘ ರಾಜಕೀಯ ಇನ್ನಿಂಗ್ಸ್‌ಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ಅವರು ರಾಜ್ಯಸಭೆಗೆ ಆಯ್ಕೆಯಾದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದ್ದು, ಬಿಹಾರದಲ್ಲಿ ನಿತೀಶ್ ಯುಗ ಅಧಿಕೃತವಾಗಿ ಅಂತ್ಯಗೊಂಡಂತಾಗಿದೆ.

Read More
Next Story