
ಅಯೋಧ್ಯೆ ಶ್ರೀರಾಮ ಮಂದಿರ
ಅಯೋಧ್ಯೆ| ಭ್ರಷ್ಟಾಚಾರದ ತನಿಖೆಗೆ ಸಹಕರಿಸಲು ಚಂಪತ್ ರೈ ರಾಜೀನಾಮೆ; ವಿಎಚ್‌ಪಿ ಸ್ಪಷ್ಟನೆ
ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್, ರಾಜೀವ್ ಗಾಂಧಿ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಎಂದೂ ರಾಜೀನಾಮೆ ನೀಡಲಿಲ್ಲ ಎಂದು ವಿಎಚ್‌ಪಿ ಆರೋಪಿಸಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಗೆ ಸ್ವತಃ ಟ್ರಸ್ಟ್ ಒತ್ತಾಯಿಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತಿಳಿಸಿದೆ. ಪ್ರಕರಣದ ನ್ಯಾಯಯುತ ತನಿಖೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟ್ರಸ್ಟ್‌ನ ಹಿರಿಯ ಪದಾಧಿಕಾರಿಗಳಾದ ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಅವರು ಸ್ವಯಂಪ್ರೇರಣೆಯಿಂದ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ವಿಎಚ್‌ಪಿ ಸಮರ್ಥಿಸಿಕೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ವಿಎಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್, "ಪ್ರಕರಣ ಬೆಳಕಿಗೆ ಬಂದ ತಕ್ಷಣ ಟ್ರಸ್ಟ್ ಸದಸ್ಯರು ಆಂತರಿಕ ತನಿಖೆ ನಡೆಸಿ, ಅಪರಾಧಿಗಳನ್ನು ಗುರುತಿಸಿ 80 ಲಕ್ಷ ರೂ. ವಸೂಲಿ ಮಾಡಿದ್ದಾರೆ. ತಕ್ಷಣವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಸಂಪರ್ಕಿಸಿ ಎಸ್‌ಐಟಿ (SIT) ರಚನೆಗೆ ಒತ್ತಾಯಿಸಲಾಯಿತು. ಎಸ್‌ಐಟಿ ಪ್ರಾಥಮಿಕ ವರದಿ ನೀಡಿದ ಬಳಿಕ ಟ್ರಸ್ಟ್ ನೀಡಿದ ಔಪಚಾರಿಕ ದೂರಿನ ಆಧಾರದ ಮೇಲೆ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ," ಎಂದು ಸ್ಪಷ್ಟಪಡಿಸಿದ್ದಾರೆ.
ಸಮಗ್ರ ತನಿಖೆಗೆ ಒತ್ತಾಯ
ದೇವಾಲಯದ ಕಾಣಿಕೆಗಳ ನಿರ್ವಹಣೆ ಮತ್ತು ಎಣಿಕೆಯಲ್ಲಿ ಭಾಗಿಯಾಗಿದ್ದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ (ಟಿನ್ನು ಯಾದವ್) ಎಂಬ ಎಂಟು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಎಫ್‌ಐಆರ್‌ನ 9ನೇ ಕಾಲಂನಲ್ಲಿ 'ಇತರರು' ಎಂದು ಉಲ್ಲೇಖಿಸಲಾಗಿದ್ದು, ಪ್ರತಿಯೊಂದು ಕೋನದಿಂದಲೂ ಸಮಗ್ರ ತನಿಖೆಯಾಗಬೇಕೆಂದು ಟ್ರಸ್ಟ್ ಒತ್ತಾಯಿಸಿದೆ ಎಂದು ಅವರು ತಿಳಿಸಿದರು.
"ಚಂಪತ್ ರೈ ಅವರು ಹುದ್ದೆಯಲ್ಲಿದ್ದರೆ ಸಾಕ್ಷ್ಯ ನಾಶಪಡಿಸಬಹುದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಮಾತುಗಳು ಕೇಳಿಬಂದ ತಕ್ಷಣ, ತನಿಖೆಗೆ ಯಾವುದೇ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಇಬ್ಬರೂ ತಕ್ಷಣವೇ ರಾಜೀನಾಮೆ ನೀಡಿದ್ದಾರೆ. ಎಸ್‌ಐಟಿ ತನಿಖೆಗೂ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ." ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಕೇಜ್ರಿವಾಲ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಇದೇ ವೇಳೆ ವಿರೋಧ ಪಕ್ಷಗಳ ನಾಯಕರ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡ ಅಲೋಕ್ ಕುಮಾರ್, ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕರನ್ನು ತೀವ್ರವಾಗಿ ಟೀಕಿಸಿದರು. "ಭ್ರಷ್ಟಾಚಾರದ ಆರೋಪ ಎದುರಿಸಿ, ಬಂಧನಕ್ಕೊಳಗಾಗಿ, ಜಾಮೀನು ನಿರಾಕರಿಸಲ್ಪಟ್ಟರೂ ಕೇಜ್ರಿವಾಲ್ ಜೈಲಿನಿಂದಲೇ ಸರ್ಕಾರ ನಡೆಸುವುದಾಗಿ ಹೇಳಿದರೇ ವಿನಃ ಸಾರ್ವಜನಿಕ ಹುದ್ದೆಗೆ ರಾಜೀನಾಮೆ ನೀಡಲಿಲ್ಲ. ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್, ರಾಜೀವ್ ಗಾಂಧಿ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಎಂದೂ ರಾಜೀನಾಮೆ ನೀಡಲಿಲ್ಲ. ಇದು ಚಂಪತ್ ರೈ ಅವರ ನೈತಿಕ ನಡವಳಿಕೆಗೂ, ಕಾಂಗ್ರೆಸ್-ಎಎಪಿ ನಾಯಕರ ನಡತೆಗೂ ಇರುವ ವ್ಯತ್ಯಾಸ," ಎಂದು ವಾಗ್ದಾಳಿ ನಡೆಸಿದ್ದಾರೆ.

