ಪಂಜಾಬ್‌ನಲ್ಲಿ ಕಾರು ಹರಿದು 8 ಕಾರ್ಮಿಕರು ಸಾವು; 12 ಮಂದಿಗೆ ಗಾಯ
x

ಪಂಜಾಬ್‌ನಲ್ಲಿ ಕಾರು ಹರಿದು 8 ಕಾರ್ಮಿಕರು ಸಾವು; 12 ಮಂದಿಗೆ ಗಾಯ

ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಲೆಹ್ರಾ–ಜಖಲ್‌ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಕಾರ್ಮಿಕರ ಗುಂಪಿನ ಮೇಲೆ ಹರಿದು ಎಂಟು ಮಂದಿ ಮೃತಪಟ್ಟಿದ್ದಾರೆ. 12 ಜನರು ಗಾಯಗೊಂಡಿದ್ದು, ಚಾಲಕ ಪರಾರಿಯಾಗಿದ್ದಾನೆ.


Click the Play button to hear this message in audio format

ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಲೆಹ್ರಾಗಾಗಾ–ಜಖಲ್‌ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಕಾರ್ಮಿಕರ ಗುಂಪಿನ ಮೇಲೆ ಹರಿದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಈ ದುರ್ಘಟನೆ ಸಂಭವಿಸಿದೆ.

ಅಲಿಶೇರ್‌ ಗ್ರಾಮದ ಸಮೀಪ ಈ ಘಟನೆ ನಡೆದಿದೆ. ವಿಕಸಿತ ಭಾರತ ಗ್ಯಾರಂಟಿ ರೋಜ್‌ಗಾರ್‌ ಆಂಡ್‌ ಆಜೀವಿಕಾ ಮಿಷನ್‌ ಗ್ರಾಮೀಣ (ವಿಬಿ–ಜಿ ರಾಮ್‌ ಜಿ) ಯೋಜನೆಯಡಿ ಕೆಲಸ ಮಾಡುತ್ತಿದ್ದ 20ಕ್ಕೂ ಹೆಚ್ಚು ಕಾರ್ಮಿಕರ ಗುಂಪಿನಲ್ಲಿ ಹಲವು ಮಹಿಳೆಯರೂ ಇದ್ದರು. ಕೆಲವರು ರಸ್ತೆಯ ಪಕ್ಕದಲ್ಲಿ ಕುಳಿತಿದ್ದರು. ಈ ವೇಳೆ ಜಖಲ್‌ ಕಡೆಯಿಂದ ವೇಗವಾಗಿ ಬಂದ ಕಾರು ಕಾರ್ಮಿಕರ ಗುಂಪಿನ ಮೇಲೆ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪಲ್ವಿಂದರ್‌ ಸಿಂಗ್‌ ತಿಳಿಸಿದ್ದಾರೆ. ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿ ಪೂನಮ್‌ದೀಪ್‌ ಕೌರ್‌ ಅವರು ಎಂಟು ಕಾರ್ಮಿಕರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಸೇರಿದಂತೆ ಎಲ್ಲ ರೀತಿಯ ಸಹಾಯ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಶಾಸಕರೂ ಆಗಿರುವ ಪಂಜಾಬ್‌ ಸಚಿವ ಬರೀಂದರ್‌ ಕುಮಾರ್‌ ಗೋಯಲ್‌ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಮೃತದೇಹಗಳನ್ನು ಸಾಗಿಸಲು ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಪಂಜಾಬ್‌ ಹಣಕಾಸು ಸಚಿವ ಹರ್ಪಾಲ್‌ ಸಿಂಗ್‌ ಚೀಮಾ ಅವರು ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಲೆಹ್ರಾ ಸಮೀಪ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರಿಗೆ ಸಂಭವಿಸಿದ ಈ ದುರ್ಘಟನೆ ಅತ್ಯಂತ ದುಃಖಕರ ಎಂದು ಅವರು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಲೂಧಿಯಾನ ಸಂಸದ ಹಾಗೂ ಕಾಂಗ್ರೆಸ್‌ ನಾಯಕ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ ಕೂಡ ಘಟನೆಗೆ ಕಂಬನಿ ಮಿಡಿದಿದ್ದಾರೆ. ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರು ಈ ಅಪಘಾತದಲ್ಲಿ ಮೃತಪಟ್ಟಿರುವುದು ಹೃದಯವಿದ್ರಾವಕ ಎಂದು ಅವರು ಹೇಳಿದ್ದಾರೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಒದಗಿಸುವುದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಡಳಿತವನ್ನು ಒತ್ತಾಯಿಸಿದ್ದಾರೆ. ಪಂಜಾಬ್‌ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್‌ ಸಿಂಗ್‌ ಬಾಜ್ವಾ ಕೂಡ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Read More
Next Story