
Pune Horror | 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ವೃದ್ಧ- ಭೀಕರ ದೃಶ್ಯ ವೈರಲ್
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್‌ನಲ್ಲಿ 4 ವರ್ಷದ ಮಗುವಿನ ಮೇಲೆ 65 ವರ್ಷದ ವೃದ್ಧ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ಪ್ರದೇಶದ ಹಳ್ಳಿಯೊಂದರಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ 65 ವರ್ಷದ ಕಾರ್ಮಿಕನೊಬ್ಬ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಪೈಶಾಚಿಕ ಕೃತ್ಯವು ಮಹಾರಾಷ್ಟ್ರದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ಘಟನೆಯ ವಿವರ
ಶಾಲಾ ರಜೆಯ ಹಿನ್ನೆಲೆಯಲ್ಲಿ ಬಾಲಕಿಯು ತನ್ನ ಅಜ್ಜಿಯ ಮನೆಗೆ ಬಂದಿದ್ದಳು. ಶುಕ್ರವಾರ ಮಧ್ಯಾಹ್ನ ಬಾಲಕಿಗೆ ಆಹಾರದ ಆಮಿಷ ಒಡ್ಡಿದ 65 ವರ್ಷದ ಆರೋಪಿ, ಅವಳನ್ನು ಹತ್ತಿರದ ದನದ ಕೊಟ್ಟಿಗೆಯ ಶೆಡ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಹತ್ಯೆ ಮಾಡಿ ಶವವನ್ನು ಶೆಡ್‌ನಲ್ಲಿ ಅಡಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ನಾಪತ್ತೆಯಾದ ನಂತರ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯು ಮಗುವನ್ನು ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
#Maharashtra #Pune- A deeply disturbing incident has been reported from #Nasrapur village in #Bhor taluka of Pune, where a four-year-old girl was allegedly r*ped and brutally murdered. The accused, a 65-year-old man, resident of same village, has been taken into custody.
— Siraj Noorani (@sirajnoorani) May 2, 2026
1/3 pic.twitter.com/WDvJdW13KG
ಆರೋಪಿಯ ಹಿನ್ನೆಲೆ ಮತ್ತು ಪೊಲೀಸ್ ಕ್ರಮ
ಪುಣೆ ಎಸ್ಪಿ ಸಂದೀಪ್ ಸಿಂಗ್ ಗಿಲ್ ಅವರ ಪ್ರಕಾರ ಬಂಧಿತ ಆರೋಪಿಯು ದಿನಗೂಲಿ ಕಾರ್ಮಿಕನಾಗಿದ್ದು, ಈ ಹಿಂದೆಯೂ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. 1998 ಮತ್ತು 2015ರಲ್ಲಿ ಈತನ ಮೇಲೆ ಪ್ರಕರಣಗಳು ದಾಖಲಾಗಿದ್ದವು, ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದ. ಪ್ರಸ್ತುತ ಆರೋಪಿಯನ್ನು ಮೇ 7ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. 15 ದಿನಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಸಿ, ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ರಸ್ತೆ ತಡೆದು ಪ್ರತಿಭಟಿಸಿದ ಗ್ರಾಮಸ್ಥರು
ಘಟನೆ ತಿಳಿಯುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ಪೊಲೀಸ್ ಚೌಕಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಂಬೈ-ಬೆಂಗಳೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯಸ್ತಗೊಂಡಿತ್ತು. ಆರೋಪಿಗೆ ತಕ್ಷಣವೇ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಆರಂಭದಲ್ಲಿ ಅಡ್ಡಿಪಡಿಸಿದ್ದರು.
ರಾಜಕೀಯ ನಾಯಕರ ತೀವ್ರ ಖಂಡನೆ
ಈ ಘಟನೆಯು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಘಟನೆಯನ್ನು ಖಂಡಿಸುತ್ತಾ, "ಇಂತಹ ಕ್ರಿಮಿನಲ್‌ಗಳು ಸಮಾಜದಲ್ಲಿ ಮುಕ್ತವಾಗಿ ತಿರುಗಾಡುತ್ತಿರುವುದು ಹೇಗೆ? ನಮ್ಮ ಸರ್ಕಾರದ ಅವಧಿಯಲ್ಲಿ ತರಲಾಗಿದ್ದ 'ಶಕ್ತಿ ಕಾಯ್ದೆ' ಜಾರಿಯಲ್ಲಿದ್ದರೆ, ಈ ದೈತ್ಯನಿಗೆ 15 ದಿನಗಳಲ್ಲೇ ಮರಣದಂಡನೆ ಶಿಕ್ಷೆಯಾಗುತ್ತಿತ್ತು," ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮತ್ತೊಂದೆಡೆ ಎನ್‌ಸಿಪಿ ನಾಯಕಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರು, "ಈ ಘಟನೆಯು ಮಾನವೀಯತೆಗೆ ಹಿಡಿದ ಕಪ್ಪು ಚುಕ್ಕೆ ಮತ್ತು ಅತ್ಯಂತ ಹೃದಯವಿದ್ರಾವಕವಾಗಿದೆ; ಈ ನೀಚ ಕೃತ್ಯ ಎಸಗಿದ ಆರೋಪಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಬೇಕು," ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

