
PM Narendra Modi | ಮೋದಿಯವರ 'ಚುರುಮುರಿ' ಬ್ರೇಕ್‌ನಿಂದ ಹೇಮಂತ್ ಸೊರೇನ್ ಹೆಲಿಕಾಪ್ಟರ್‌ಗೆ ನೋ ಎಂಟ್ರಿ?
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ತಿಂಡಿ ತಿನ್ನಲು ಸಮಯ ವಿಸ್ತರಿಸಿದ್ದರಿಂದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರಿಗೆ ಲ್ಯಾಂಡಿಂಗ್ ಅನುಮತಿ ನಿರಾಕರಿಸಲಾಗಿದೆ ಎಂದು ಟಿಎಂಸಿ ಆರೋಪಿಸಿದೆ.
ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯಲ್ಲಿ ನಿಂತು `ಚುರುಮುರಿ' ಸವಿದ ಘಟನೆ ಈಗ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಮೋದಿಯವರ ಈ ತಿಂಡಿ ವಿರಾಮದಿಂದಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಅವರ ಪತ್ನಿ ಕಲ್ಪನಾ ಸೊರೇನ್ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಆರೋಪಿಸಿದೆ.
ಏನಿದು ವಿವಾದ?
ಭಾನುವಾರ ಝಾರ್ಗ್ರಾಮ್‌ನಲ್ಲಿ ಚುನಾವಣಾ ರ್ಯಾಲಿ ಮುಗಿಸಿ ಹೆಲಿಪ್ಯಾಡ್‌ಗೆ ತೆರಳುವ ಮಾರ್ಗಮಧ್ಯೆ ಪ್ರಧಾನಿ ಮೋದಿ ಅವರು ಕಾಲೇಜ್ ಮೋರ್ ಎಂಬಲ್ಲಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ, ರಸ್ತೆ ಬದಿಯ ಅಂಗಡಿಯೊಂದರಲ್ಲಿ ಮಂಡಕ್ಕಿ ಸೇವಿಸಿದ್ದರು. ಈ ಫೋಟೋಗಳನ್ನು ಮೋದಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಆದರೆ, ಇದೇ ಸಮಯದಲ್ಲಿ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಮತ್ತು ಶಾಸಕಿ ಕಲ್ಪನಾ ಸೊರೇನ್ ಅವರು ಟಿಎಂಸಿ ಪರ ಪ್ರಚಾರಕ್ಕಾಗಿ ಝಾರ್ಗ್ರಾಮ್‌ಗೆ ಬರಬೇಕಿತ್ತು. ಮೋದಿಯವರ ಈ ದಿಢೀರ್ ಫೋಟೋ ಶೂಟ್ ಮತ್ತು ತಿಂಡಿ ಸೇವನೆಯಿಂದಾಗಿ ಅವರ ಪ್ರವಾಸದ ಅವಧಿ ವಿಸ್ತರಣೆಯಾಯಿತು. ಈ ಕಾರಣ ನೀಡಿ ಸೊರೇನ್ ದಂಪತಿಯ ಹೆಲಿಕಾಪ್ಟರ್‌ಗೆ ಲ್ಯಾಂಡಿಂಗ್ ಅನುಮತಿ ನೀಡದೆ ಅವರನ್ನು ಗಂಟೆಗಟ್ಟಲೆ ಕಾಯಿಸಿ, ಅಂತಿಮವಾಗಿ ಅವರು ರಾಂಚಿಗೆ ವಾಪಸ್ ಹೋಗುವಂತೆ ಮಾಡಲಾಗಿದೆ ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.
ঝাড়গ্রামে ঝালমুড়ি খাবার বিরতি! pic.twitter.com/t0TcDeONxt
— Narendra Modi (@narendramodi) April 19, 2026
ಇದು ಆದಿವಾಸಿ ವಿರೋಧಿ ಮನಸ್ಥಿತಿ
ಈ ಬಗ್ಗೆ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, "ಪ್ರಧಾನ ಮಂತ್ರಿಗಳು ಚುರುಮುರಿ ತಿನ್ನಲು ತಮ್ಮ ವಾಸ್ತವ್ಯವನ್ನು ವಿಸ್ತರಿಸಿದ್ದರಿಂದ, ಇಬ್ಬರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಾಯಕರನ್ನು ಗಂಟೆಗಟ್ಟಲೆ ಕಾಯಿಸಿ ವಾಪಸ್ ಕಳುಹಿಸಲಾಗಿದೆ. ನರೇಂದ್ರ ಮೋದಿಯವರ ಆದಿವಾಸಿ ವಿರೋಧಿ ಮನಸ್ಥಿತಿ ಇದರಿಂದ ಜಗತ್ತಿಗೆ ಬಹಿರಂಗವಾಗಿದೆ. ಪ್ರಧಾನಿಯವರ ಫೋಟೋ ಶೂಟ್‌ಗಾಗಿ ಸಾಂವಿಧಾನಿಕ ನಾಯಕರ ಹಕ್ಕುಗಳನ್ನು ಕಸಿಯಲಾಗಿದೆ" ಎಂದು ಕಿಡಿಕಾರಿದೆ.
ಮೋದಿ ಹಂಚಿಕೊಂಡ ಫೋಟೋ
ಇನ್ನೊಂದೆಡೆ ಪ್ರಧಾನಿ ಮೋದಿ ಅವರು ಝಲ್ ಮುರಿ ಸೇವಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡು, "ಬಂಗಾಳದ ನಾಲ್ಕು ರ್ಯಾಲಿಗಳ ನಡುವೆ ಝಾರ್ಗ್ರಾಮ್‌ನಲ್ಲಿ ರುಚಿಕರವಾದ ಚುರುಮುರಿ ಸವಿಯಲಾಯಿತು" ಎಂದು ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರನ್ನು ನೋಡಲು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಜನರು ಜಮಾಯಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಘಟನೆಯು ಬಿಜೆಪಿ ಮತ್ತು ಟಿಎಂಸಿ ನಡುವಿನ ವಾಕ್ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ.

