
ಎಐ ಆಧಾರಿತ ಚಿತ್ರ
ಪಠ್ಯಪುಸ್ತಕ ವಿವಾದ: ವಿಧಾನಸೌಧ ಒಡಿಶಾದ್ದು, ಹಂಪಿ ಕೊನಾರ್ಕ್ ಸೂರ್ಯ ದೇವಾಲಯ!
ಪಠ್ಯಪುಸ್ತಕಗಳಲ್ಲಿನ ದೋಷಗಳು ಇಡೀ ಶಿಕ್ಷಣ ವ್ಯವಸ್ಥೆ ತಲೆತಗ್ಗಿಸುವಂತಿವೆ. ಪ್ರಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರನ್ನು ಪಠ್ಯಪುಸ್ತಕದಲ್ಲಿ "ಶ್ರೇಷ್ಠ ಪೈಲಟ್" ಎಂದು ಬಣ್ಣಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಎಪಿ) 2020 ರ ಅಡಿಯಲ್ಲಿ ಶಾಲಾ ಪಠ್ಯಕ್ರಮವನ್ನು ನವೀಕರಿಸುವ ಆತುರದಲ್ಲಿ ಒಡಿಶಾ ಸರ್ಕಾರ ಮತ್ತು ಶಿಕ್ಷಣ ಇಲಾಖೆ ದೊಡ್ಡ ಹಗರಣವನ್ನೇ ಮೈಮೇಲೆ ಎಳೆದುಕೊಂಡಿದೆ. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಸಿದ್ಧಪಡಿಸಿದ 1 ರಿಂದ 8 ನೇ ತರಗತಿಯ 55 ಪಠ್ಯಪುಸ್ತಕಗಳಲ್ಲಿ ಬರೋಬ್ಬರಿ 1,600 ಕ್ಕೂ ಹೆಚ್ಚು ವಾಸ್ತವಿಕ ತಪ್ಪುಗಳು ಮತ್ತು ಕನಿಷ್ಠ ಮೂರು ಬಾಲಿವುಡ್ ಹಾಡುಗಳ ಸಾಹಿತ್ಯ ಪತ್ತೆಯಾಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೈಕಿ 8 ನೇ ತರಗತಿಯ ಪುಸ್ತಕಗಳಲ್ಲೇ ಅತಿ ಹೆಚ್ಚು ಅಂದರೆ 705 ತಪ್ಪುಗಳು ಕಂಡುಬಂದಿವೆ.
ಕರ್ನಾಟಕದ ವಿಧಾನಸಭೆ ಒಡಿಶಾದ್ದು!
ಪಠ್ಯಪುಸ್ತಕಗಳಲ್ಲಿನ ದೋಷಗಳು ಇಡೀ ಶಿಕ್ಷಣ ವ್ಯವಸ್ಥೆ ತಲೆತಗ್ಗಿಸುವಂತಿವೆ. ಪ್ರಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರನ್ನು ಪಠ್ಯಪುಸ್ತಕದಲ್ಲಿ "ಶ್ರೇಷ್ಠ ಪೈಲಟ್" ಎಂದು ಬಣ್ಣಿಸಲಾಗಿದೆ! ಕರ್ನಾಟಕದ ಶಾಸಕಾಂಗ ಸಭೆಯ (ವಿಧಾನಸೌಧ) ಚಿತ್ರವನ್ನು ಒಡಿಶಾ ಶಾಸಕಾಂಗ ಸಭೆ ಎಂದು ತಪ್ಪಾಗಿ ಮುದ್ರಿಸಲಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕರ್ನಾಟಕದ ಹಂಪಿ ದೇವಾಲಯದ ಸಂಕೀರ್ಣದ ಚಿತ್ರಕ್ಕೆ ‘ಕೊನಾರ್ಕ್ ಸೂರ್ಯ ದೇವಾಲಯ’ ಎಂದು ತಪ್ಪಾಗಿ ಲೇಬಲ್ ಮಾಡಲಾಗಿದೆ.
ಒಡಿಶಾದಲ್ಲಿರುವ ನಿಯಮಗಿರಿ ಬೆಟ್ಟದ ಶ್ರೇಣಿ ಜಾರ್ಖಂಡ್‌ನಲ್ಲಿದೆ ಎಂದು ಬರೆಯಲಾಗಿದ್ದರೆ, ಗಂಜಾಂ ಜಿಲ್ಲೆಯ ಒಂದು ನಗರವಾಗಿರುವ ಬೆರ್ಹಾಂಪುರವನ್ನು ಪ್ರತ್ಯೇಕ ಜಿಲ್ಲೆ ಎಂದೇ ಬಿಂಬಿಸಲಾಗಿದೆ. ವಿಷುವತ್ ಸಂಕ್ರಾಂತಿಯಂತಹ ಪದಗಳನ್ನು ಸಮಭಾಜಕ ವೃತ್ತ ಎಂದು ಕರೆಯಲಾಗಿದ್ದು, ತಾಪಮಾನ ಮತ್ತು ಒತ್ತಡದ ನಡುವೆ ಗೊಂದಲ ಸೃಷ್ಟಿಸಲಾಗಿದೆ.
ಪಠ್ಯಪುಸ್ತಕದಲ್ಲಿನ ಲೋಪದೋಷಗಳಿಗೆ ಸರ್ಕಾರದ ನಿರ್ಲಕ್ಷ್ಯತನವೇ ಕಾರಣ ಎಂದು ಒಡಿಶಾದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಠ್ಯಪುಸ್ತಕದಲ್ಲಿ ಬಾಲಿವುಡ್ ಹಾಡು!
ಯಾವುದೇ ಸೂಕ್ತ ಸಂದರ್ಭ ಅಥವಾ ಔಚಿತ್ಯವಿಲ್ಲದೆ ಪಠ್ಯಪುಸ್ತಕಗಳಲ್ಲಿ ಬಾಲಿವುಡ್ ಚಿತ್ರಗಳ ಹಿಟ್ ಹಾಡುಗಳ ಸಾಹಿತ್ಯವನ್ನು ತುರುಕಲಾಗಿದೆ. 5 ನೇ ತರಗತಿಯ ಇಂಗ್ಲಿಷ್ ಪುಸ್ತಕ ಮತ್ತು 8 ನೇ ತರಗತಿಯ ಕಲಾ ಪುಸ್ತಕದಲ್ಲಿ ಐಶ್ವರ್ಯಾ ರೈ ನಟನೆಯ ʼಹಮ್ ದಿಲ್ ದೇ ಚುಕೆ ಸನಮ್ʼ ಚಿತ್ರದ "ನಿಂಬುಡಾ ನಿಂಬುಡಾ" ಹಾಡಿನ ಬಾಲಿವುಡ್ ಆವೃತ್ತಿಯ ಸಾಹಿತ್ಯವನ್ನು ನೀಡಲಾಗಿದೆ. 8 ನೇ ತರಗತಿಯ ಕಲಾ ಪಠ್ಯಪುಸ್ತಕದಲ್ಲಿ ಕಾಶ್ಮೀರಿ ಜಾನಪದ ಸಂಗೀತದ ಉದಾಹರಣೆಯಾಗಿ ಹೃತಿಕ್ ರೋಷನ್ ಅಭಿನಯದ ʼಮಿಷನ್ ಕಾಶ್ಮೀರ್ʼ ಚಿತ್ರದ "ರಿಂಡ್ ಪೋಶ್ ಮಾಲ್" ಮತ್ತು "ಬಂಬ್ರೋ ಬಂಬ್ರೋ" ಬಾಲಿವುಡ್ ಹಾಡುಗಳನ್ನು ಬಳಸಲಾಗಿದೆ. ಮೂಲ ಜಾನಪದ ಸೊಗಡಿನ ಬದಲಿಗೆ ಬಾಲಿವುಡ್ ಆವೃತ್ತಿಗಳನ್ನು ನೀಡಿರುವುದು ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಹೊರಗುತ್ತಿಗೆಯೇ ಮುಳುವಾಯ್ತು!
ಶೈಕ್ಷಣಿಕ ವರ್ಷ ಆರಂಭವಾಗುವ ಗಡುವಿನೊಳಗೆ ಪುಸ್ತಕಗಳನ್ನು ಸಿದ್ಧಪಡಿಸುವ ತರಾತುರಿಯೇ ಈ ಲೋಪಗಳಿಗೆ ಕಾರಣ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಅರ್ಹ ಸ್ಥಳೀಯ ತಜ್ಞರನ್ನು ಬಳಸಿಕೊಳ್ಳುವ ಬದಲಿಗೆ, ಎಸ್‌ಇಆರ್‌ಟಿಯು ಪಠ್ಯಪುಸ್ತಕದ ವಿನ್ಯಾಸ, ಡೆಸ್ಕ್‌ಟಾಪ್ ಪಬ್ಲಿಷಿಂಗ್ (ಡಿಟಿಪಿ) ಮತ್ತು ವಿಷಯ ಸಂಕಲನದ ಸಂಪೂರ್ಣ ಕೆಲಸವನ್ನು ಬಾಹ್ಯ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಿತ್ತು. ಆತುರದ ಕಾರಣದಿಂದಾಗಿ ಕಡ್ಡಾಯವಾಗಿ ನಡೆಯಬೇಕಿದ್ದ ‘ಪ್ರೂಫ್ ರೀಡಿಂಗ್’ ಮತ್ತು ಪರಿಶೀಲನಾ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು ಎನ್ನಲಾಗಿದೆ.
ಅಧಿಕಾರಿಗಳ ಅಮಾನತು
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ರಾಜ್ಯ ಪಠ್ಯಪುಸ್ತಕ ಮಂಡಳಿಯ ನಿರ್ಲಕ್ಷ್ಯ ಸಾಬೀತಾಗಿದ್ದು, ಸಂಸ್ಥೆಯ ಮಾಜಿ ನಿರ್ದೇಶಕ ಮನೋಜ್ ಪಾಧಿ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೆ, ಆರು ಸಹಾಯಕ ನಿರ್ದೇಶಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
‘ಎರಾಟಾ’ ಶೀಟ್ ಮೊರೆ ಹೋದ ಸರ್ಕಾರ
ಸದ್ಯಕ್ಕೆ ಮುದ್ರಿತ ಪುಸ್ತಕಗಳನ್ನು ಹಿಂಪಡೆಯಲು ಸಾಧ್ಯವಾಗದ ಕಾರಣ, ಸರ್ಕಾರವು ‘ಮಾಸ್ಟರ್ ಎರಾಟಾ ರಿಜಿಸ್ಟರ್’ (ತಿದ್ದುಪಡಿ ಪಟ್ಟಿ) ಸಿದ್ಧಪಡಿಸಿದೆ. ಜಿಲ್ಲಾ ಶಿಕ್ಷಣ ಕಚೇರಿಗಳ ಮೂಲಕ ಶಾಲೆಗಳಿಗೆ ಈ ತಿದ್ದುಪಡಿ ಹಾಳೆಗಳನ್ನು ವಿತರಿಸಲಾಗುತ್ತಿದೆ. "ಶಿಕ್ಷಕರು ಈ ತಿದ್ದುಪಡಿ ಪಟ್ಟಿಯನ್ನು ಬಳಸಿಕೊಂಡು ತರಗತಿಗಳಲ್ಲಿ ತಪ್ಪುಗಳನ್ನು ಹಸ್ತಚಾಲಿತವಾಗಿ ಸರಿಪಡಿಸಿ, ಮಕ್ಕಳಿಗೆ ಸರಿಯಾದ ವಿಷಯವನ್ನು ಬೋಧಿಸಲಿದ್ದಾರೆ" ಎಂದು ಭದ್ರಕ್ ಜಿಲ್ಲಾ ಶಿಕ್ಷಣ ಅಧಿಕಾರಿ ಚಕ್ರಧರ್ ಮಲ್ಲಿಕ್ ತಿಳಿಸಿದ್ದಾರೆ.
ಸಚಿವರ ರಾಜೀನಾಮೆಗೆ ಆಗ್ರಹ
ಈ ಪಠ್ಯಪುಸ್ತಕ ವಿವಾದವು ಒಡಿಶಾದಲ್ಲಿ ತೀವ್ರ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ವಿರೋಧ ಪಕ್ಷವಾದ ಬಿಜು ಜನತಾದಳ (ಬಿಜೆಡಿ) ಇದನ್ನು ಒಡಿಶಾಗೆ ಒದಗಿಬಂದ "ನಾಚಿಕೆಗೇಡಿನ ಸಂಗತಿ" ಎಂದು ಕರೆದಿದ್ದು, ಶಾಲಾ ಮತ್ತು ಸಮೂಹ ಶಿಕ್ಷಣ ಸಚಿವ ನಿತ್ಯಾನಂದ ಗೊಂಡ್ ಅವರ ರಾಜೀನಾಮೆ ಹಾಗೂ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದೆ. "ದೋಷಪೂರಿತ ಪಠ್ಯಪುಸ್ತಕಗಳ ವಿತರಣೆಯು ನಮ್ಮ ಮಕ್ಕಳ ಭವಿಷ್ಯದ ಅಡಿಪಾಯವನ್ನೇ ಅಲುಗಾಡಿಸಿದೆ," ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಆಂದೋಲನ ಮಾಡುವುದಾಗಿ ಬಿಜೆಡಿ ವಿದ್ಯಾರ್ಥಿ ವಿಭಾಗ ಎಚ್ಚರಿಸಿದ್ದರೆ, ಇಲಾಖೆಯ ನಿರ್ಲಕ್ಷ್ಯದಿಂದ ಪೋಲಾದ ಸಾರ್ವಜನಿಕರ ಹಣವನ್ನು ತಪ್ಪು ಮಾಡಿದ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಯಾಸಿರ್ ನವಾಜ್ ಆಗ್ರಹಿಸಿದ್ದಾರೆ.

