ಉದ್ಯಮಿಯ ಅಪಹರಣ- ಮಹಿಳಾ PSI, ಪತ್ರಕರ್ತ ಸೇರಿ ನಾಲ್ವರ ಬಂಧನ
x

ಒಡಿಶಾದಲ್ಲಿ ಉದ್ಯಮಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ PSI, ಪತ್ರಕರ್ತ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಉದ್ಯಮಿಯ ಅಪಹರಣ- ಮಹಿಳಾ PSI, ಪತ್ರಕರ್ತ ಸೇರಿ ನಾಲ್ವರ ಬಂಧನ

ಉದ್ಯಮಿ ಅಪಹರಣದ ಹಿಂದೆ ಅಪರೂಪದ ‘ಹನುಮಾನ್ ಪೈಸಾ’ ನಾಣ್ಯದ ವಿವಾದವೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಣ್ಯ ಅಪಾರ ಸಂಪತ್ತು ಅಥವಾ ಅಲೌಕಿಕ ಶಕ್ತಿ ನೀಡುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ.


Click the Play button to hear this message in audio format

ಒಡಿಶಾದ ಬೋಲಂಗಿರ್ ಜಿಲ್ಲೆಯ ಉದ್ಯಮಿಯೊಬ್ಬರನ್ನು ಅಪಹರಿಸಿ, ಹಲ್ಲೆ ನಡೆಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟ ಆರೋಪದಲ್ಲಿ ಮಹಿಳಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹಾಗೂ ಪತ್ರಕರ್ತ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಉದ್ಯಮಿ ನರೇಂದ್ರ ಸಾಹು (62) ಅವರನ್ನು ಆಗಸ್ಟ್ 14ರಂದು ಬೋಲಂಗಿರ್‌ನಿಂದ ಬಂದೂಕು ತೋರಿಸಿ ಅಪಹರಿಸಿ ಭುವನೇಶ್ವರಕ್ಕೆ ಕರೆತರಲಾಗಿತ್ತು. ಬಳಿಕ ಖಂಡಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ಅವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ಬಂಧನದಲ್ಲಿರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 15ರಂದು ನರೇಂದ್ರ ಸಾಹು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಸಾಹು ಅವರ ವಾಹನ ಭುವನೇಶ್ವರದತ್ತ ತೆರಳಿರುವುದು ಪತ್ತೆಯಾಯಿತು.

50 ಲಕ್ಷ ರೂ.ಗೆ ಬೇಡಿಕೆ, ಬ್ಲ್ಯಾಕ್‌ಮೇಲ್ ಆರೋಪ

ಪ್ರಕರಣದ ಪ್ರಮುಖ ಆರೋಪಿ ಕ್ಷಿತೀಶ್ ಚಂದ್ರ ಸಾಹು ಹಾಗೂ ಆತನ ಸಹಚರರು ನರೇಂದ್ರ ಸಾಹು ಅವರನ್ನು ಅಪಹರಿಸಿ ಭುವನೇಶ್ವರಕ್ಕೆ ಕರೆತಂದಿದ್ದರು ಎನ್ನಲಾಗಿದೆ. ಬಳಿಕ ಅವರ ಕೈಗೆ ಪಿಸ್ತೂಲ್ ಕೊಟ್ಟು, ಕ್ಷಿತೀಶ್ ಅವರನ್ನೇ ಅಪಹರಿಸಿದಂತೆ ಬಿಂಬಿಸುವ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಡಿಯೋ ಬಳಸಿ ನರೇಂದ್ರ ಸಾಹು ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ 50 ಲಕ್ಷ ರೂ. ನೀಡುವಂತೆ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. 24 ಗಂಟೆಯೊಳಗೆ ಹಣ ನೀಡದಿದ್ದರೆ ಅವರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಬೋಲಂಗಿರ್ ಎಸ್‌ಪಿ ಅಭಿಲಾಷ್ ಜಿ ಹೇಳಿದ್ದಾರೆ.

ಪ್ರಕರಣದಲ್ಲಿ ಮಹಿಳಾ PSI, ಪತ್ರಕರ್ತನ ಹೆಸರು

ಖಂಡಗಿರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಬ್‌ಇನ್‌ಸ್ಪೆಕ್ಟರ್ ಸ್ನೇಹಮಂಜರಿ ಸಾಹು ಕೂಡ ಅಪಹರಣದ ಸಂಚಿನಲ್ಲಿ ಭಾಗಿಯಾಗಿದ್ದರೆಂದು ಪೊಲೀಸರು ಆರೋಪಿಸಿದ್ದಾರೆ. ಆಕೆ ಕ್ಷಿತೀಶ್ ಅವರ ಸಹೋದರಿ ಎಂದು ತಿಳಿದುಬಂದಿದೆ. ಸ್ನೇಹಮಂಜರಿಗೆ ಆಪ್ತನಾಗಿದ್ದ ಭುವನೇಶ್ವರದ ಪತ್ರಕರ್ತ ಸಂಜಯ್ ಜೆನಾ, ಪೊಲೀಸ್ ಅಧಿಕಾರಿಯಂತೆ ನಟಿಸಿ ಆಗಸ್ಟ್ 15ರಂದು ನರೇಂದ್ರ ಸಾಹು ಅವರನ್ನು ಖಂಡಗಿರಿ ಪೊಲೀಸ್ ಠಾಣೆಗೆ ಕರೆತಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನರೇಂದ್ರ ಸಾಹು ವಿರುದ್ಧ ಸುಳ್ಳು ದೂರು ದಾಖಲಿಸಿ ಪ್ರಕರಣವನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆದಾಗ ವಿಶೇಷ ಪೊಲೀಸ್ ತಂಡ ಠಾಣೆಗೆ ಆಗಮಿಸಿತ್ತು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಅಪರೂಪದ ‘ಹನುಮಾನ್ ಪೈಸಾ’ ನಾಣ್ಯದ ವಿವಾದ

ಉದ್ಯಮಿ ಅಪಹರಣದ ಹಿಂದೆ ಅಪರೂಪದ ‘ಹನುಮಾನ್ ಪೈಸಾ’ ನಾಣ್ಯದ ವಿವಾದವೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಣ್ಯ ಅಪಾರ ಸಂಪತ್ತು ಅಥವಾ ಅಲೌಕಿಕ ಶಕ್ತಿ ನೀಡುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ.

2020ರಲ್ಲಿ ಈ ಪುರಾತನ ನಾಣ್ಯಕ್ಕಾಗಿ ನರೇಂದ್ರ ಸಾಹು ಅವರಿಗೆ ಸುಮಾರು 2.7 ಕೋಟಿ ರೂ. ನೀಡಿದ್ದಾಗಿ ಕ್ಷಿತೀಶ್ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಹಣ ಪಡೆದ ಬಳಿಕ ನಾಣ್ಯ ನೀಡಲಿಲ್ಲ, ಹಣವನ್ನೂ ಹಿಂದಿರುಗಿಸಲಿಲ್ಲ ಎಂದು ಆತ ಆರೋಪಿಸಿದ್ದಾನೆ. ಆದರೆ ನರೇಂದ್ರ ಸಾಹು ಈ ಆರೋಪವನ್ನು ನಿರಾಕರಿಸಿದ್ದಾರೆ. ನಾಣ್ಯಕ್ಕೆ ಸಂಬಂಧಿಸಿದ ವಹಿವಾಟಿನ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ಆರೋಪಿಗಳ ಪತ್ತೆಗೆ ತನಿಖೆ

ನಾಲ್ವರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಗುರುತಿಸಿ ಬಂಧಿಸಲು ತನಿಖೆ ಮುಂದುವರಿದಿದೆ ಎಂದು ನಾರ್ದರ್ನ್ ರೇಂಜ್ ಐಜಿ ಹಿಮಾಂಶು ಕುಮಾರ್ ಲಾಲ್ ತಿಳಿಸಿದ್ದಾರೆ. ಪೊಲೀಸ್ ಠಾಣೆಯ ಆವರಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ.

Read More
Next Story