
ಪಂಜಾಬ್ ಮಾಜಿ ಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ದಾಳಿ: ನಿಹಾಂಗ್ ಸಿಖ್ ವಶಕ್ಕೆ
ನಿಹಾಂಗ್ ಸಿಖ್ ಪಂಥಕ್ಕೆ ಸೇರಿದ ವ್ಯಕ್ತಿಯೊಬ್ಬ ಕಿರ್ಪಾನ್‌ನಿಂದ ಸುಖ್‌ಬೀರ್ ಸಿಂಗ್ ಬಾದಲ್ ಅವರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅವರ ಮೇಲೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಗುರುವಾರ ದಾಳಿ ನಡೆದಿದೆ. ಗುರುದ್ವಾರಕ್ಕೆ ಭೇಟಿ ನೀಡಿ ಹೊರಬಂದ ಬಳಿಕ ನಗರದ ಹೊರವಲಯದಲ್ಲಿ ಈ ದಾಳಿ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಮೂಲಗಳ ಪ್ರಕಾರ, ನಿಹಾಂಗ್ ಸಿಖ್ ವ್ಯಕ್ತಿಯೊಬ್ಬ ಕಿರ್ಪಾನ್‌ನಿಂದ ಬಾದಲ್ ಅವರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಯ ಬಳಿಕ ಸುಖ್‌ಬೀರ್ ಸಿಂಗ್ ಬಾದಲ್ ಅವರನ್ನು ನಾಂದೇಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕೈಗೆ ಗಾಯವಾಗಿದ್ದು, ಜೀವಕ್ಕೆ ಅಪಾಯವಿಲ್ಲ ಎಂದು ಅಕಾಲಿ ದಳದ ಮೂಲಗಳು ತಿಳಿಸಿವೆ.
ಬಾದಲ್ ಭದ್ರತಾ ಸಿಬ್ಬಂದಿಗೂ ಗಾಯ
ದಾಳಿ ನಡೆದ ವೇಳೆ ಸುಖ್‌ಬೀರ್ ಸಿಂಗ್ ಬಾದಲ್ ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯೊಬ್ಬರಿಗೂ ಗಾಯವಾಗಿದೆ. ದಾಳಿಯ ಬಳಿಕದ ವಿಡಿಯೋವೊಂದರಲ್ಲಿ ಬಾದಲ್ ಅವರ ಬಲಗೈಗೆ ಕೇಸರಿ ಬಟ್ಟೆ ಸುತ್ತಿಕೊಂಡಿರುವುದು ಕಂಡುಬಂದಿದೆ.
#WATCH | Nanded, Maharashtra | Former Deputy CM of Punjab, Sukhbir Singh Badal rushed to a hospital after being attacked by a Nihang inside Nanded Gurudwara. He has sustained injuries to his hand. pic.twitter.com/PnO2n4wGe9
— ANI (@ANI) August 13, 2026
ಕುಟುಂಬ ಸಮೇತ ಗುರುದ್ವಾರಕ್ಕೆ ಭೇಟಿ
ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು ಸುಖ್‌ಬೀರ್ ಸಿಂಗ್ ಬಾದಲ್ ಅವರು ಕುಟುಂಬ ಸಮೇತ ನಾಂದೇಡ್‌ನ ತಖ್ತ್ ಶ್ರೀ ಹಜೂರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ಅವರ ಪತ್ನಿ ಹಾಗೂ ಅಕಾಲಿ ದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಕೂಡ ಅವರೊಂದಿಗೆ ಇದ್ದರು. ಗುರುದ್ವಾರದಿಂದ ಹೊರಬಂದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ.
2024ರಲ್ಲೂ ಬಾದಲ್ ಮೇಲೆ ಹತ್ಯೆ ಯತ್ನ
ಸುಖ್‌ಬೀರ್ ಸಿಂಗ್ ಬಾದಲ್ ಅವರ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. 2024ರ ಡಿಸೆಂಬರ್ 4ರಂದು ಅಮೃತಸರದ ಸ್ವರ್ಣಮಂದಿರದ ಹೊರಭಾಗದಲ್ಲಿ ಅವರ ಮೇಲೆ ಹತ್ಯೆ ಯತ್ನ ನಡೆದಿತ್ತು. ಆ ವೇಳೆ ಗುಂಡು ಹಾರಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ಹಿಡಿದು ಬಂಧಿಸಿದ್ದರು. ಬಾದಲ್ ಅವರಿಗೆ ಯಾವುದೇ ಗಾಯವಾಗಿರಲಿಲ್ಲ.
ಆ ಸಮಯದಲ್ಲಿ ಪಂಜಾಬ್‌ನಲ್ಲಿ 2007ರಿಂದ 2017ರವರೆಗೆ ಅಕಾಲಿ ದಳದ ಆಡಳಿತಾವಧಿಯಲ್ಲಿ ನಡೆದಿದ್ದ ಕೆಲವು ‘ತಪ್ಪುಗಳ’ ಹಿನ್ನೆಲೆಯಲ್ಲಿ ಅಕಾಲ್ ತಖ್ತ್, ಸುಖ್‌ಬೀರ್ ಸಿಂಗ್ ಬಾದಲ್ ಸೇರಿದಂತೆ ಹಲವು ಅಕಾಲಿ ದಳ ನಾಯಕರಿಗೆ ‘ತಂಖಾ’ (ಧಾರ್ಮಿಕ ಶಿಕ್ಷೆ) ವಿಧಿಸಿತ್ತು.
ಈ ಹಿನ್ನೆಲೆಯಲ್ಲಿ ಸುಖ್‌ಬೀರ್ ಬಾದಲ್ ಸ್ವರ್ಣಮಂದಿರದ ಆವರಣದಲ್ಲಿ ‘ಸೇವಾದಾರ್’ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಅವರ ಮೇಲೆ ಗುಂಡಿನ ದಾಳಿ ನಡೆಸಲು ಪ್ರಯತ್ನಿಸಲಾಗಿತ್ತು. ಇದೀಗ ಮತ್ತೆ ನಾಂದೇಡ್‌ನಲ್ಲಿ ಅವರ ಮೇಲೆ ದಾಳಿ ನಡೆದಿರುವುದು ಭದ್ರತಾ ವ್ಯವಸ್ಥೆ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ದಾಳಿಯ ಹಿಂದಿನ ಉದ್ದೇಶ ಮತ್ತು ಆರೋಪಿಯ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

