
ಟಿಎಂಸಿ ಮಾಜಿ ಶಾಸಕ ಜಹಾಂಗೀರ್ ಖಾನ್
ಟಿಎಂಸಿ 'ಪುಷ್ಪ' ಜಹಾಂಗೀರ್ ಖಾನ್ ಭಾರತ-ನೇಪಾಳ ಗಡಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧನ!
ಮೇ 4 ರಂದು ಪ್ರಕಟವಾದ ಐತಿಹಾಸಿಕ ಚುನಾವಣಾ ಫಲಿತಾಂಶದ ಬಳಿಕ ಜಹಾಂಗೀರ್ ಖಾನ್ ವಿರುದ್ಧ ಭ್ರಷ್ಟಾಚಾರ, ಬೆದರಿಕೆ ಸೇರಿದಂತೆ ಐದು ಗಂಭೀರ ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) 15 ವರ್ಷಗಳ ನಂತರ ಅಧಿಕಾರ ಕಳೆದುಕೊಂಡ ಕೇವಲ ಒಂದೇ ತಿಂಗಳಿನಲ್ಲಿ ಪಕ್ಷಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಟಿಎಂಸಿಯ ಅತ್ಯಂತ ಪ್ರಭಾವಿ ಹಾಗೂ ವಿವಾದಿತ ನಾಯಕ ಜಹಾಂಗೀರ್ ಖಾನ್ ಅವರನ್ನು ಭಾರತ-ನೇಪಾಳ ಗಡಿಯಲ್ಲಿ ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ (STF) ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.
ಮೇ 4 ರಂದು ಪ್ರಕಟವಾದ ಐತಿಹಾಸಿಕ ಚುನಾವಣಾ ಫಲಿತಾಂಶದ ಬಳಿಕ ಜಹಾಂಗೀರ್ ಖಾನ್ ವಿರುದ್ಧ ಭ್ರಷ್ಟಾಚಾರ, ಬೆದರಿಕೆ ಸೇರಿದಂತೆ ಐದು ಗಂಭೀರ ಪೊಲೀಸ್ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕಲ್ಕತ್ತಾ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮತ್ತು ರಕ್ಷಣೆ ನೀಡಲು ನಿರಾಕರಿಸಿದ ಬೆನ್ನಲ್ಲೇ ಎಸ್‌ಟಿಎಫ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಟಕಟೆಗೆ ತಳ್ಳಿದ್ದಾರೆ.
ಬಂಗಾಲದ 'ಪುಷ್ಪ' ಸರೆ!
ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಪುಷ್ಪ’ ಪಾತ್ರದಿಂದ ಪ್ರಭಾವಿತನಾಗಿದ್ದ ಜಹಾಂಗೀರ್ ಖಾನ್, ಸ್ಥಳೀಯವಾಗಿ ತನ್ನನ್ನು ತಾನು ‘ಪುಷ್ಪ’ ಎಂದು ಕರೆದುಕೊಳ್ಳುತ್ತಿದ್ದ. ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿಯ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಈತ, ಇಡೀ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಎಂಬ ಆರೋಪಗಳಿವೆ.
ಆದರೆ, ಈ ‘ಪುಷ್ಪ’ನ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಚುನಾವಣಾ ಆಯೋಗವು ‘ಸಿಂಘಮ್’ ಖ್ಯಾತಿಯ, ಯುಪಿ ಕೇಡರ್‌ನ ಎನ್‌ಕೌಂಟರ್ ಸ್ಪೆಷಲಿಸ್ಟ್ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರನ್ನು ವಿಶೇಷ ವೀಕ್ಷಕರಾಗಿ ನಿಯೋಜಿಸಿತ್ತು. ಅಧಿಕಾರಿ ಶರ್ಮಾ ಅಖಾಡಕ್ಕಿಳಿಯುತ್ತಿದ್ದಂತೆ ತಲೆಮರೆಸಿಕೊಳ್ಳಲು ಯತ್ನಿಸಿದ ಜಹಾಂಗೀರ್ ಖಾನ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಫಾಲ್ಟಾ ಚುನಾವಣಾ ಕಣದಲ್ಲಿ ಮಹಾ ಟ್ವಿಸ್ಟ್!
ಏಪ್ರಿಲ್ 29 ರಂದು ನಡೆದಿದ್ದ ಎರಡನೇ ಹಂತದ ಮತದಾನದ ವೇಳೆ ಫಾಲ್ಟಾ ಕ್ಷೇತ್ರದಲ್ಲಿ ಇವಿಎಂ (EVM) ಯಂತ್ರಗಳಲ್ಲಿ ಬಿಜೆಪಿಯ ಬಟನ್‌ಗಳಿಗೆ ಟೇಪ್ ಅಂಟಿಸಲಾಗಿದೆ ಹಾಗೂ ಭಾರೀ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿಬಂದಿದ್ದವು. ತಕ್ಷಣ ಎಚ್ಚೆತ್ತ ಚುನಾವಣಾ ಆಯೋಗ ಮೇ 21 ರಂದು ಮರು ಮತದಾನಕ್ಕೆ ಆದೇಶಿಸಿತ್ತು.
ಆದರೆ, ಅಷ್ಟರಲ್ಲೇ ರಾಜ್ಯದ ಒಟ್ಟಾರೆ ಫಲಿತಾಂಶ ಹೊರಬಿದ್ದು ಬಿಜೆಪಿ ಸರ್ಕಾರ ರಚಿಸಿತ್ತು. ಸೋಲಿನ ಭೀತಿಯಿಂದ ಮೇ 19 ರಂದೇ ಜಹಾಂಗೀರ್ ಖಾನ್ ಹಠಾತ್ತನೆ ಚುನಾವಣಾ ಕಣದಿಂದ ಹಿಂದೆ ಸರಿದು, ಕಚೇರಿಗೆ ಬೀಗ ಹಾಕಿ ನಾಪತ್ತೆಯಾಗಿದ್ದ. ತೃಣಮೂಲ ಕಾಂಗ್ರೆಸ್ ಈ ಬೆಳವಣಿಗೆಯಿಂದ ದೂರ ಸರಿದಿತ್ತಲ್ಲದೆ, "ಬಿಜೆಪಿ ಬೆದರಿಕೆಗೆ ಹೆದರಿ ಖಾನ್ ಹಿಂದೆ ಸರಿದಿದ್ದಾರೆ" ಎಂದು ಆರೋಪಿಸಿತ್ತು.
ಗಡಿ ದಾಟಲು ಯತ್ನ
ಕೊನೆಗೆ ಮರು ಮತದಾನದ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ ಅವರು ಸಿಪಿಎಂ ಅಭ್ಯರ್ಥಿ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ಐತಿಹಾಸಿಕ ಜಯ ಸಾಧಿಸಿದರು. ಕಣದಿಂದ ಓಡಿಹೋಗಿದ್ದ ಟಿಎಂಸಿಯ 'ಪುಷ್ಪ' ಜಹಾಂಗೀರ್ ಖಾನ್ ಕೇವಲ 8,000 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ. ಸದ್ಯ ಗಡಿ ದಾಟಲು ಯತ್ನಿಸುತ್ತಿದ್ದಾಗಲೇ ಈತನ ‘ಸಾಮ್ರಾಜ್ಯ’ಕ್ಕೆ ಪೊಲೀಸರು ಬೀಗ ಜಡಿದಿದ್ದಾರೆ.

