
ಸಿಎಂ ಒಮರ್ ಅಬ್ದುಲ್ಲಾ
'ಬಿಜೆಪಿಯ ಪ್ರೇಮ ಪತ್ರಕ್ಕೆ ಹೆದರಲ್ಲ': 100 ಕೋಟಿ ರೂ. ಮಾನನಷ್ಟ ನೋಟಿಸ್‌ಗೆ ಒಮರ್ ಅಬ್ದುಲ್ಲಾ ತಿರುಗೇಟು
ಬಿಜೆಪಿ ಕಳುಹಿಸಿರುವ ಲೀಗಲ್ ನೋಟಿಸ್ ಅನ್ನು "ಪ್ರೇಮ ಪತ್ರ" ಎಂದು ಕರೆದಿರುವ ಮುಖ್ಯಮಂತ್ರಿ, "ತಾವು ಇಂದಿಗೂ ಕೇಸರಿ ಪಕ್ಷಕ್ಕೆ ನಿರ್ಲಕ್ಷಿಸಲಾಗದ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿದಿರುವುದಕ್ಕೆ ಈ ಪತ್ರವೇ ಸಾಕ್ಷಿ" ಎಂದು ಬಣ್ಣಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತಾರೂಢ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಹಾಗೂ ವಿರೋಧ ಪಕ್ಷ ಬಿಜೆಪಿಯ ನಡುವಿನ ರಾಜಕೀಯ ಜಿದ್ದಾಜಿದ್ದಿ ಈಗ ನ್ಯಾಯಾಲಯದ ಹೊಸ್ತಿಲು ತಲುಪಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಬಿಜೆಪಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆಯ ಕಾನೂನು ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ ಸಿಎಂ ಒಮರ್ ಅಬ್ದುಲ್ಲಾ ತೀಕ್ಷ್ಣ ಹಾಗೂ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಳುಹಿಸಿರುವ ಲೀಗಲ್ ನೋಟಿಸ್ ಅನ್ನು "ಪ್ರೇಮ ಪತ್ರ" ಎಂದು ಕರೆದಿರುವ ಮುಖ್ಯಮಂತ್ರಿ, "ತಾವು ಇಂದಿಗೂ ಕೇಸರಿ ಪಕ್ಷಕ್ಕೆ ನಿರ್ಲಕ್ಷಿಸಲಾಗದ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿದಿರುವುದಕ್ಕೆ ಈ ಪತ್ರವೇ ಸಾಕ್ಷಿ" ಎಂದು ಬಣ್ಣಿಸಿದ್ದಾರೆ.
'ನಾನು ಬಿಜೆಪಿಗೆ ನಿರ್ಲಕ್ಷಿಸಲಾಗದ ಶಕ್ತಿ'
ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಒಮರ್ ಅಬ್ದುಲ್ಲಾ, "ನನಗೆ ವಕೀಲರಿಂದ ಇ-ಮೇಲ್ ಮೂಲಕ ನೋಟಿಸ್ ಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯಿಂದ ಇಂತಹ 'ಪ್ರೇಮ ಪತ್ರ' ಪಡೆದ ಏಕೈಕ ರಾಜಕಾರಣಿ ನಾನೇ ಆಗಿರುವುದರಿಂದ ಇದನ್ನು ನಾನು ಒಂದು ದೊಡ್ಡ ಗೌರವವೆಂದು ಪರಿಗಣಿಸುತ್ತೇನೆ. ನಾನು ಈ ರಾಜ್ಯದಲ್ಲಿ ಅವರ ಕೈಗೆ ಸಿಗದ, ಅವರು ನಿರ್ಲಕ್ಷಿಸಲಾಗದ ರಾಜಕೀಯ ಶಕ್ತಿಯಾಗಿದ್ದೇನೆ ಎಂಬುದಕ್ಕೆ ಈ ನೋಟಿಸ್ ಒಂದು ಗೌರವದ ಸಂಕೇತ" ಎಂದು ಲೇವಡಿ ಮಾಡಿದರು.
ಅಲ್ಲದೆ, ಬಿಜೆಪಿ ರಾಜಕೀಯ ಹೋರಾಟವನ್ನು ಎದುರಿಸಲಾಗದೆ ನ್ಯಾಯಾಲಯಗಳ ಹಿಂದೆ ಅಡಗಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, "ನಾನು ಇದೇ ಹೇಳಿಕೆಯನ್ನು ವಿಧಾನಸಭೆಯ ಒಳಗೂ ನೀಡಿ ವಿಶೇಷ ಸವಲತ್ತುಗಳ ಲಾಭ ಪಡೆಯಬಹುದಿತ್ತು. ಆದರೆ ನಾನು ಸತ್ಯವನ್ನು ವಿಧಾನಸಭೆಯ ಹೊರಗೆ ಮುಕ್ತವಾಗಿ ಹೇಳಿದ್ದೇನೆ" ಎಂದರು.
'ಆಪರೇಷನ್ ಕಮಲ' ಆರೋಪ
ಕಳೆದ ವಾರ ಹಜರತ್‌ಬಾಲ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಒಮರ್ ಅಬ್ದುಲ್ಲಾ, ತಮ್ಮ ಜೆಕೆಎನ್‌ಸಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಜಮ್ಮು ಭಾಗದ ತಮ್ಮ ಪಕ್ಷದ ಶಾಸಕರೊಬ್ಬರಿಗೆ ಪಕ್ಷಾಂತರ ಮಾಡಲು ಬಿಜೆಪಿ ವತಿಯಿಂದ 20 ರಿಂದ 30 ಕೋಟಿ ರೂ. ನಗದು, ಸಚಿವ ಸ್ಥಾನ ಹಾಗೂ ಜಮ್ಮು-ಕಾಶ್ಮೀರಕ್ಕೆ ರಾಜ್ಯತ್ವದ ಭರವಸೆ ನೀಡಲಾಗಿತ್ತು ಎಂದು ಅವರು ಬಾಂಬ್ ಸಿಡಿಸಿದ್ದರು. ಇದು ದೇಶಾದ್ಯಂತ ಮತ್ತೊಮ್ಮೆ 'ಆಪರೇಷನ್ ಕಮಲ'ದ ಚರ್ಚೆಯನ್ನು ಮುನ್ನೆಲೆಗೆ ತಂದಿತ್ತು.
ಬೇಷರತ್ ಕ್ಷಮೆಗೆ ಬಿಜೆಪಿ ಪಟ್ಟು
ಮುಖ್ಯಮಂತ್ರಿಯವರ ಈ ಆರೋಪಗಳನ್ನು "ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತ" ಎಂದು ತಳ್ಳಿಹಾಕಿರುವ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಸತ್ ಪಾಲ್ ಶರ್ಮಾ ಅವರ ಸೂಚನೆಯ ಮೇರೆಗೆ ವಕೀಲ ಪರಿಮೋಕ್ಷ ಸೇಠ್ ಅವರ ಮೂಲಕ ಮೂರು ಪುಟಗಳ ಕಾನೂನು ನೋಟಿಸ್ ಜಾರಿ ಮಾಡಿದೆ.
ನೋಟಿಸ್‌ನಲ್ಲೇನಿದೆ ?
ಮುಖ್ಯಮಂತ್ರಿಯವರ ಹೇಳಿಕೆಗಳು ಬಿಜೆಪಿ ಮತ್ತು ಅದರ ಪದಾಧಿಕಾರಿಗಳ ಸಾರ್ವಜನಿಕ ಪ್ರತಿಷ್ಠೆಗೆ ತೀವ್ರ ಧಕ್ಕೆ ತಂದಿವೆ. ನೋಟಿಸ್ ತಲುಪಿದ ಒಂದು ವಾರದೊಳಗೆ ಸಿಎಂ ಒಮರ್ ಅಬ್ದುಲ್ಲಾ ತಮ್ಮ ಹೇಳಿಕೆಯನ್ನು ಲಿಖಿತವಾಗಿ ಹಿಂಪಡೆದು, ಬೇಷರತ್ತಾಗಿ ಸಾರ್ವಜನಿಕ ಕ್ಷಮೆ ಯಾಚಿಸಬೇಕು. ನಿಗದಿತ ಅವಧಿಯಲ್ಲಿ ಕ್ಷಮೆ ಯಾಚಿಸದಿದ್ದರೆ, 100 ಕೋಟಿ ರೂ.ಗಳ ಪರಿಹಾರ ಕೋರಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಿಜೆಪಿ ಎಚ್ಚರಿಸಿದೆ.
ಬಿಜೆಪಿಗೂ ಲೀಗಲ್ ನೋಟಿಸ್ ನೀಡಲು ಜೆಕೆಎನ್‌ಸಿ ಸಿದ್ಧತೆ
ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿಯ ಹಲವು ನಾಯಕರು ತಮ್ಮ ಪಕ್ಷದ ವಿರುದ್ಧ ನಿರಂತರವಾಗಿ ಮಾನಹಾನಿಕರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಒಮರ್ ಅಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇಷ್ಟು ದಿನ ನಾವು ಇದನ್ನು ರಾಜಕೀಯವಾಗಿ ಎದುರಿಸುತ್ತಿದ್ದೆವು. ಆದರೆ ಈಗ ಬಿಜೆಪಿ ಕಾನೂನು ಹಾದಿ ಹಿಡಿದಿರುವುದರಿಂದ, ನಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿದ ಆ ನಿರ್ದಿಷ್ಟ ಬಿಜೆಪಿ ನಾಯಕ ಹಾಗೂ ಇತರ ಕೆಲವರಿಗೆ ನಾವೂ ಸಹ ಶೀಘ್ರದಲ್ಲೇ ಕಾನೂನು ನೋಟಿಸ್ ಕಳುಹಿಸಲಿದ್ದೇವೆ. ಈ ಕಾನೂನು ಹೋರಾಟ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ನಾವೂ ನೋಡುತ್ತೇವೆ" ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸವಾಲು ಹಾಕಿದ್ದಾರೆ.

