
ಮುಂಬೈನ ಸಿದ್ಧಿ ವಿನಾಯಕ ದೇವಾಲಯದಲ್ಲಿ ಕೋಟ್ಯಂತರ ರೂ. ಕಳವು?
ಮುಂಬೈನ ಪ್ರಸಿದ್ಧ ಸಿದ್ಧಿ ವಿನಾಯಕ ಗಣಪತಿ ದೇವಾಲಯದ ಹುಂಡಿ ಹಣ ಕಳುವಾಗುತ್ತಿರುವ ಆರೋಪ ಕೇಳಿಬಂದಿದ್ದು, ವಾರ್ಷಿಕ 18 ಕೋಟಿ ರೂ. ನಷ್ಟವಾಗಿದೆ ಎಂದು ಧರ್ಮದರ್ಶಿಗಳು ಮಹಾರಾಷ್ಟ್ರ ಉಪಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಮುಂಬೈನ ಅತ್ಯಂತ ಪ್ರಸಿದ್ಧ ಹಾಗೂ ಶ್ರೀಮಂತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಾಲಯದ ಕಾಣಿಕೆ ಹುಂಡಿಗಳಿಂದ ಭಾರಿ ಪ್ರಮಾಣದ ನಗದು ಕಳುವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಅಕ್ರಮದಿಂದಾಗಿ ದೇವಾಲಯದ ಟ್ರಸ್ಟ್‌ಗೆ ಪ್ರತಿವರ್ಷ ಸುಮಾರು 18 ಕೋಟಿ ರೂಪಾಯಿಗಳ ಭಾರಿ ನಷ್ಟ ಉಂಟಾಗಿರಬಹುದು ಎಂದು ಟ್ರಸ್ಟ್‌ನ ಎಂಟು ಜನ ಧರ್ಮದರ್ಶಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ಸರ್ಕಾರಿ ತನಿಖೆಗೆ ಆಗ್ರಹಿಸಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಸುದೀರ್ಘ ಪತ್ರ ಬರೆಯಲಾಗಿದೆ.
ಧರ್ಮದರ್ಶಿಗಳು ಬರೆದ ಪತ್ರದಲ್ಲಿ ಏನಿದೆ?
ಏಪ್ರಿಲ್ 21, 2026 ರಂದು ಬರೆಯಲಾದ ಈ ಪತ್ರದ ಪ್ರಕಾರ, ದೇವಾಲಯದ ಕಾಣಿಕೆ ಹುಂಡಿಗಳಿಂದ ಹಣ ಕದಿಯುತ್ತಿದ್ದ ಆರೋಪದ ಮೇಲೆ ಕೆಲವು ಕೆಳಹಂತದ ನೌಕರರನ್ನು ಬಂಧಿಸಿದ ನಂತರ ಪ್ರತಿವಾರದ ಸಂಗ್ರಹಣೆಯ ಮೊತ್ತದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇದು ಸುದೀರ್ಘ ಅವಧಿಯಿಂದ ಹಣ ದುರುಪಯೋಗವಾಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಟ್ರಸ್ಟಿಗಳು ತಿಳಿಸಿದ್ದಾರೆ.
"ಆರೋಪಿ ನೌಕರರನ್ನು ಬಂಧಿಸುವ ಮೊದಲು ದೇವಾಲಯದ ವಾರದ ಕಾಣಿಕೆ ಸಂಗ್ರಹಣೆಯು ಸಾಮಾನ್ಯವಾಗಿ 50 ಲಕ್ಷ ರೂ.ಗಳಿಗಿಂತ ಕಡಿಮೆಯಿರುತ್ತಿತ್ತು. ಆದರೆ, ಅವರ ಬಂಧನದ ನಂತರದ ಮೂರು ವಾರಗಳಲ್ಲಿ ಪ್ರತಿ ಬುಧವಾರ ಎಣಿಕೆಯಾದ ಮೊತ್ತ ಸುಮಾರು 1.5 ಕೋಟಿ ರೂ.ಗೆ ಏರಿಕೆಯಾಗಿದೆ. ಇದರಿಂದ ಪ್ರತೀವಾರ ಭಾರಿ ಪ್ರಮಾಣದ ಕಾಣಿಕೆ ಹಣ ಎಣಿಕೆಗೆ ಮುನ್ನವೇ ಸೋರಿಕೆಯಾಗುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಆಧಾರದ ಮೇಲೆ ದೇವಾಲಯಕ್ಕೆ ವಾರ್ಷಿಕ ಸುಮಾರು ₹18 ಕೋಟಿ ನಷ್ಟವಾಗಿದೆ ಎಂದು ನಾವು ಶಂಕಿಸಿದ್ದೇವೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಕಳವು ಕೇವಲ ಕೆಳಹಂತದ ಸಿಬ್ಬಂದಿಗೆ ಮಾತ್ರ ಸೀಮಿತವಾಗಿರದೆ, ಇದರ ಹಿಂದೆ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳ ಹಸ್ತಕ್ಷೇಪವೂ ಇರುವ ಬಲವಾದ ಸಂಶಯವಿದೆ ಎಂದು ಧರ್ಮದರ್ಶಿಗಳಾದ ಅತುಲ್ ಲೋಧೆ, ಭಾಸ್ಕರ್ ರಾವತ್, ಮಹೇಶ್ ಮುರಳೀಧರ್, ಜಿತೇಂದ್ರ ರಾವತ್, ಮೀನಾ ಕಾಂಬಳೆ, ಮಂಗಲಾ ತುಪೆ, ಗೋಪಾಲ್ ದಳವಿ ಮತ್ತು ಸುದರ್ಶನ್ ಸಂಗಾಳೆ ಮನವಿ ಮಾಡಿದ್ದಾರೆ.
ರಾಜ್ ಠಾಕ್ರೆ ಅವರಿಂದ ಬಹಿರಂಗ ಆರೋಪ
ಈ ವಿಷಯವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್ ಠಾಕ್ರೆ ಅವರು ಸಾರ್ವಜನಿಕವಾಗಿ ಪ್ರಸ್ತಾಪಿಸಿ ರಾಜ್ಯ ಸರ್ಕಾರವನ್ನು ತಳೆದುಹಾಕಿದ್ದಾರೆ. ಪಕ್ಷದ ವಿದ್ಯಾರ್ಥಿ ಘಟಕ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಧರ್ಮದರ್ಶಿಗಳ ಪತ್ರದ ಭಾಗಗಳನ್ನು ಓದಿದ ಅವರು, "ಸಿದ್ಧಿ ವಿನಾಯಕ ದೇವಾಲಯದಿಂದ ಪ್ರತಿವರ್ಷ 18 ಕೋಟಿ ರೂಪಾಯಿ ಕಳುವಾಗುತ್ತಿದೆ" ಎಂದು ಆರೋಪಿಸಿದರು.
ಅಷ್ಟೇ ಅಲ್ಲದೆ, ಅಯೋಧ್ಯೆಯ ರಾಮ ಮಂದಿರದಿಂದಲೂ ₹1,400 ಕೋಟಿ ಕಳುವಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಮನಹರಿಸಬೇಕು ಎಂದು ಆಗ್ರಹಿಸಿದರು. "ಹತಾಶರಾದ ಯುವಕರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ, ಆದರೆ ಈಗ ದೇವಸ್ಥಾನಗಳೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ" ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
9 ಮಂದಿ ನೌಕರರ ಬಂಧನ: ಟ್ರಸ್ಟ್ ಅಧ್ಯಕ್ಷರ ಸ್ಪಷ್ಟನೆ
ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಸಿದ್ಧಿ ವಿನಾಯಕ ದೇವಾಲಯ ಟ್ರಸ್ಟ್ ಅಧ್ಯಕ್ಷ ಸದಾ ಸರ್ವಂಕರ್, ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಮಂದಿ ನೌಕರರನ್ನು ಬಂಧಿಸಲಾಗಿದೆ ಎಂದು ದೃಢಪಡಿಸಿದ್ದಾರೆ. "ನಾವು ಅಗತ್ಯವಿರುವ ಕಡೆಗಳಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿದ್ದೇವೆ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದು, ಸದ್ಯ ಪೊಲೀಸರು ಈ ಪ್ರಕರಣದ ಆಳವಾದ ತನಿಖೆ ನಡೆಸುತ್ತಿದ್ದಾರೆ.

